ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ತಾಪಂ ಕಚೇರಿ ವಾಣಿಜ್ಯ ಮಳಿಗೆಗಳನ್ನು ನಿಯಮಾನುಸಾರ ಬಹಿರಂಗ ಹರಾಜಿಗಾಗಿ, ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಪಿಡಿಒ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.ಪಟ್ಟಣದ ತಾಲೂಕು ಪಂಚಾಯ್ತಿ ಕಚೇರಿ ಎದುರು ವೇದಿಕೆ ಜಿಲ್ಲಾಧ್ಯಕ್ಷ ಡಿ.ಎಸ್.ವೇಣು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಇಒ ಕೆ.ಸುಷ್ಮಾ ಅವರಿಗೆ ಮನವಿ ಪತ್ರ ಅರ್ಪಿಸಿದರು.
ಕರವೇ ಜಿಲ್ಲಾಧ್ಯಕ್ಷ ಡಿ.ಎಸ್.ವೇಣು ಮಾತನಾಡಿ, ತಾಲೂಕಿನ ಬಹುತೇಕ ಗ್ರಾಪಂಗಳಲ್ಲಿ ಪಂಚಾಯತ್ ರಾಜ್ ಅಧಿನಿಯಮ ಉಲ್ಲಂಘನೆ ಮಾಡಿ ಪಿಡಿಒಗಳು ರೈತರಿಂದ ಸಾವಿರಾರು ರು. ಲಂಚ ಪಡೆದು ಇ-ಸ್ವತ್ತು ಮಾಡುತ್ತಿದ್ದಾರೆ ಎಂದು ದೂರಿದರು.ಲಂಚವಿಲ್ಲದೆ ರೈತರ ಆಸ್ತಿಗಳ ಇ-ಸ್ವತ್ತು ಆಗುತ್ತಿಲ್ಲ. ರೈತರೊಬ್ಬರಿಂದ 40 ಸಾವಿರ ರು. ಲಂಚ ಪಡೆಯುತ್ತಿದ್ದಾಗಲೇ ತಾಲೂಕಿನ ಮುರುಕನಹಳ್ಳಿ ಗ್ರಾಪಂ ಪಿಡಿಒ ಮತ್ತು ಬಿಲ್ ಕಲೆಕ್ಟರ್ ಲೋಕಾಯುಕ್ತರ ಕೈಗೆ ಸಿಕ್ಕಿಬಿದ್ದಿರುವುದೇ ಸಾಕ್ಷಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಂದಗೆರೆ ಗ್ರಾಪಂ ಪಿಡಿಒ 15 ಸಾವಿರ ಲಂಚ ಪಡೆದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದರೂ ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಅವರ ವಿರುದ್ಧ ತನಿಖೆ ಮಾಡಿಲ್ಲ. ಅಲ್ಲದೇ, ಗ್ರಾಪಂಗಳಲ್ಲಿ ಕಳಪೆ ಗುಣಮಟ್ಟದ ಸಾಮಗ್ರಿ ಖರೀದಿಸಿ ಕಾಮಗಾರಿ ಮಾಡಿಸುತ್ತಿದ್ದಾರೆ. ಕೆಲವು ನಿರ್ದಿಷ್ಟ ಅಂಗಡಿಗಳಿಂದ ಮಾತ್ರ ಪಿಡಿಒ ಸಾಮಗ್ರಿ ಖರೀದಿಸುತ್ತಿದ್ದು ಪಾರದರ್ಶಕ ಖರೀದಿ ನಡೆಯುತ್ತಿಲ್ಲ ಎಂದು ದೂರಿದರು.ನರೇಗಾ ಯೋಜನೆಯಡಿ ಕೆಲಸ ಮಾಡಿದ ಕಾರ್ಮಿಕರ ಖಾತೆಗೆ ಹಣ ಬಿಡುಗಡೆ ಮಡದೆ ತಮಗೆ ಬೇಕಾದವರ ಜಾಬ್ ಕಾರ್ಡ್‌ಗಳಿಗೆ ಹಣ ಹಾಕಿ ವಂಚನೆ ಮಾಡಲಾಗುತ್ತಿದೆ. ಪಿಡಿಒಗಳಿಂದಾಗಿ ಭ್ರಷ್ಟಾಚಾರ ಈಗ ಸಾರ್ವತ್ರೀಕರಣಗೊಂಡು ಗ್ರಾಮೀಣ ಪ್ರದೇಶಕ್ಕೂ ಹಬ್ಬಿದೆ ಎಂದು ಆರೋಪಿಸಿದರು.
ಮುರುಕನಹಳ್ಳಿ ಗ್ರಾಪಂ ಪಿಡಿಒ ವಿರುದ್ಧ ತನಿಖೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಆತನನ್ನು ಸೇವೆಯಿಂದ ವಜಾಗೊಳಿಸಬೇಕು. ಬಿಲ್ ಕಲೆಕ್ಟರ್ ಹೊರಗುತ್ತಿಗೆ ನೌಕರನಾಗಿದ್ದು, ಈತನನ್ನು ತಕ್ಷಣವೇ ಸೇವೆಯಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.ಪಟ್ಟಣದ ಪ್ರವಾಸಿ ಮಂದಿರ ವೃತ್ತದ ತಾಪಂಗೆ 45ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳನ್ನು ನಿಯಮಾನುಸಾರ ಬಹಿರಂಗ ಹರಾಜು ಮಾಡದೆ ಹಾಲಿ ಬಾಡಿಗೆದಾರರ ಹೆಸರಿಗೆ ಮುಂದುವರಿಸಿಕೊಂಡು ಬರಲಾಗುತ್ತಿದೆ. ಇವರು ಹೆಚ್ಚಿನ ಹಣಕ್ಕೆ ಬಾಡಿಗೆಗೆ ನೀಡಿ ಸರ್ಕಾರಕ್ಕೆ ವಂಚಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಕರವೇ ತಾಲೂಕು ಅಧ್ಯಕ್ಷ ಶ್ರೀನಿವಾಸ್, ಪದವೀಧರ ಘಟಕದ ಅಧ್ಯಕ್ಷ ಸಿ.ಬಿ.ಚೇತನ್ ಕುಮಾರ್, ಜಿಲ್ಲಾ ಉಪಾಧ್ಯಕ್ಷ ಶಿವಪ್ರಸಾದ್, ಯುವ ಘಟಕದ ಅಧ್ಯಕ್ಷ ಆನಂದ, ವಿವಿಧ ಹೋಬಳಿ ಘಟಕದ ಅಧ್ಯಕ್ಷರಾದ ಅನಿಲ್, ಪದ್ಮನಾಭ, ಮುಖಂಡಗಳಾದ ಮನು, ಸ್ವಾಮಿ, ತಿಮ್ಮೇಗೌಡ, ಆಶ್ರಫ್ ಪಾಷ, ಜಮೀರ್, ಸಾದಿಕ್ ಪಾಷ, ಸಿದ್ದಿಕ್ ಸೇರಿದಂತೆ ಹಲವರು ಭಾಗವಹಿಸಿದ್ದರು.