ದೊಡ್ಡಬಳ್ಳಾಪುರ ನಗರಸಭೆ ವಿರುದ್ಧ ಕರವೇ ಪ್ರತಿಭಟನೆ

KannadaprabhaNewsNetwork | Published : Aug 26, 2024 1:32 AM

ಸಾರಾಂಶ

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ ಇಲ್ಲಿನ ನಗರಸಭೆಯ ದುರಾಡಳಿತ, ಮೂಲಸೌಕರ್ಯಗಳ ನಿರ್ಲಕ್ಷ್ಯ ಹಾಗೂ ನಗರದ ಅವ್ಯವಸ್ಥೆಯನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್‌ ಶೆಟ್ಟಿ ಬಣದ ಕಾರ್ಯಕರ್ತರು ನಗರಸಭೆಯ ಎದುರು ಪ್ರತಿಭಟನೆ ನಡೆಸಿದರು.

ದೊಡ್ಡಬಳ್ಳಾಪುರ, ಕರವೇ ಪ್ರವೀಣ್‌ಶೆಟ್ಟಿ ಬಣ, ಜಿಲ್ಲಾಧ್ಯಕ್ಷ ರಮೇಶ್ ವಿರಾಜ್, ದೊಡ್ಡಬಳ್ಳಾಪುರ ನಗರಸಭೆ

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ಇಲ್ಲಿನ ನಗರಸಭೆಯ ದುರಾಡಳಿತ, ಮೂಲಸೌಕರ್ಯಗಳ ನಿರ್ಲಕ್ಷ್ಯ ಹಾಗೂ ನಗರದ ಅವ್ಯವಸ್ಥೆಯನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್‌ ಶೆಟ್ಟಿ ಬಣದ ಕಾರ್ಯಕರ್ತರು ನಗರಸಭೆಯ ಎದುರು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ವೇದಿಕೆಯ ಮುಖಂಡರು, ರಾಜ್ಯದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ದೊಡ್ಡಬಳ್ಳಾಪುರವೂ ಒಂದಾಗಿದೆ. ನಗರ ವ್ಯಾಪ್ತಿಯಲ್ಲಿ 1.2 ಲಕ್ಷಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿದೆ. ಇದೀಗ ತಾನೇ 78ನೇ ವರ್ಷದ ಸ್ವಾತಂತ್ರ್ಯೋತ್ಸವನ್ನು ಆಚರಿಸಿ ಸಂಭ್ರಮದಲ್ಲಿರುವ ನಾವು ಮೂಲಭೂತ ಸೌಕರ್ಯಗಳಾದ ರಸ್ತೆ, ನೀರು, ಚರಂಡಿ, ಬೀದಿ ದೀಪಗಳಿಗಾಗಿ ಇನ್ನೂ ಹೋರಾಟ ಮಾಡುವ ದಿಸೆಯಲ್ಲಿದ್ದೇವೆ ಎಂಬುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.

31 ವಾರ್ಡ್‌ಗಳಿರುವ ನಗರಸಭೆ ಕಚೇರಿಯಲ್ಲಿ ದುರಾಡಳಿತ ಹೆಚ್ಚಾಗಿದ್ದು, ಒಳಚರಂಡಿ ಅವ್ಯವಸ್ಥೆಯ ಆಗರವಾಗಿದೆ. ಮಳೆಗಾಲದಲ್ಲಿ ಮಳೆ ನೀರು ಹೋಗಲು ಚರಂಡಿಗಳ ನಿರ್ಮಾಣ, ಚರಂಡಿ ಒತ್ತುವರಿ ತೆರವು ಯಾವುದು ಆಗುತ್ತಿಲ್ಲ. ನಗರಸಭೆಯು ಮುಂಜಾಗ್ರತಾ ಕ್ರಮವಾಗಿ ಯಾವುದೇ ತಯಾರಿ ಮಾಡಿಲ್ಲ, ನಗರದ ಪ್ರಮುಖ ರಸ್ತೆಗಳಾದ ತಾಲೂಕು ಕಚೇರಿಯ ಮುಂದೆ ಮಳೆಯ ನೀರಿನಿಂದ ಅವ್ಯವಸ್ಥೆಯಾಗುತ್ತಿದ್ದು, ಇಡೀ ರಸ್ತೆ ಜಲಮಯವಾಗುತ್ತಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಈ ಅವ್ಯವಸ್ಥೆಯನ್ನು ಕೂಡಲೇ ಸರಿಪಡಿಸಬೇಕು. ತಾವು ಎಲ್ಲಾ ಅಂಶಗಳನ್ನು ಗಮನಿಸಿ ನಗರ ಹಾಗೂ ಗ್ರಾಮಾಂತರ ಪ್ರದೇಶದ ಸಾರ್ವಜನಿಕರು, ಶಾಲಾ ಕಾಲೇಜು ಮಕ್ಕಳು ಓಡಾಡಲು ಹಾಗೂ ಮುಂದೆ ಯಾವುದೇ ಅನಾಹುತಗಳು ಸಂಭವಿಸದಂತೆ ಮುನ್ನೆಚರಿಕೆ ಕ್ರಮವನ್ನು ತೆಗೆದುಕೊಂಡು ಬಗೆಹರಿಸಬೇಕು. ತಪ್ಪಿದಲ್ಲಿ ನಗರಸಭೆಗೆ ಬೀಗ ಜಡಿದು ಪ್ರತಿಭಟನೆ ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಇದೇ ವೇಳೆ ಕರವೇ ಮುಖಂಡರು ನಗರಸಭೆಯ ಪೌರಾಯುಕ್ತ ಕಾರ್ತಿಕ್ ಈಶ್ವರ್ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ರಮೇಶ್ ವಿರಾಜ್, ಗೌರವಾಧ್ಯಕ್ಷ ಮಹೇಶ್‌, ತಾಲೂಕು ಅಧ್ಯಕ್ಷ ಹಮಾಮ್ ವೆಂಕಟೇಶ್‌, ಪ್ರಧಾನ ಕಾರ್ಯದರ್ಶಿ ಎಸ್‌ಎಲ್‌ಎನ್ ವೇಣು, ಉಪಾಧ್ಯಕ್ಷ ಜೋಗಳ್ಳಿ ಅಮ್ಮು, ಖಜಾಂಚಿ ಆನಂದ್, ಕಾನೂನು ಸಲಹೆಗಾರರು ಆನಂದ್ ಕುಮಾರ್, ಕಾರ್ಯದರ್ಶಿ ಕಾರಳ್ಳಿ ಮಂಜು, ರಾಜಘಟ್ಟ ಮಹೇಶ್, ನಗರ ಅಧ್ಯಕ್ಷ ಶ್ರೀನಗರ ಬಶೀ‌ರ್ ಮತ್ತಿತರರು ಭಾಗವಹಿಸಿದ್ದರು.

ಫೋಟೋ-

25ಕೆಡಿಬಿಪಿ6- ದೊಡ್ಡಬಳ್ಳಾಪುರ ನಗರಸಭೆ ದುರಾಡಳಿತ ಖಂಡಿಸಿ, ಮೂಲಸೌಕರ್ಯಗಳ ಅಭಿವೃದ್ಧಿಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್‌ಶೆಟ್ಟಿ ಬಣದಿಂದ ಪ್ರತಿಭಟನೆ ನಡೆಸಲಾಯಿತು.

Share this article