ಹಳಿಯಾಳ: ಸಂಘಟನೆ ಎಂಬುದು ಬರೀ ಹೆಸರಿಗಷ್ಟೇ ಇದ್ದರೆ ಸಾಲದು. ಹುದ್ದೆ ಕೂಡಾ ವಿಸಿಟಿಂಗ್ ಕಾರ್ಡ್ ಶೋಕಿಯಾಗಬಾರದು. ಸಂಘಟನೆಯು ಸದಾ ಕ್ರಿಯಾಶೀಲ ಹಾಗೂ ಪಾರದರ್ಶಕವಾಗಿರಬೇಕು. ಅದೇ ಸಂಘಟನೆಯ ನಿಜವಾದ ಯಸಸ್ಸು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯನಿರ್ವಹಿಸುತ್ತಿದೆ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ತಿಳಿಸಿದರು.ಭಾನುವಾರ ಪಟ್ಟಣದ ಚಂದಾವನ ಉದ್ಯಾನದಲ್ಲಿ ಆಯೋಜಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯರ ಸಭೆ ಹಾಗೂ ವಾರ್ಷಿಕ ಲೆಕ್ಕಪತ್ರ ಮಂಡನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಾನು ಜಿಲ್ಲಾಧ್ಯಕ್ಷನಾದ ನಂತರ ಕಸಾಪಕ್ಕೆ ರಾಜ್ಯ ಸಮಿತಿಯಿಂದ ಹಾಗೂ ಬೇರೆ ಬೇರೆ ಮೂಲಗಳಿಂದ ಬಂದಿರುವ ಒಟ್ಟು ಹಣಕಾಸಿನ ನೆರವು ಹಾಗೂ ಮಾಡಿರುವ ಒಟ್ಟು ಖರ್ಚುಗಳ ಲೆಕ್ಕಪತ್ರದ ವ್ಯವಹಾರವನ್ನು ಅತ್ಯಂತ ಶಿಸ್ತುಬದ್ಧವಾಗಿ ಇಡಲಾಗಿದೆ. ವಾರ್ಷಿಕವಾಗಿ ಅದನ್ನು ಅಡಿಟ್ ಮಾಡಿಸಿ ರಾಜ್ಯ ಸಮಿತಿಗೆ ಸಲ್ಲಿಸುವ ಜತೆಗೆ ನಾವು ಚುನಾವಣೆಯ ಸಂದರ್ಭದಲ್ಲಿ ಹೇಳಿದ ಹಾಗೆ ಪ್ರತಿವರ್ಷ ಅಜೀವ ಸದಸ್ಯರ ಸಭೆಯನ್ನು ಕರೆದು ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸುತ್ತಿದ್ದೇವೆ. ಸಾಹಿತ್ಯ ಪರಿಷತ್ತಿನ ಲೆಕ್ಕಪತ್ರವು ತೆರೆದ ಪುಸ್ತಕದ ಹಾಗೇ ಮುಕ್ತವಾಗಿದೆ ಎಂದರು. ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಪಿ.ಆರ್. ನಾಯ್ಕ ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿ 2023- 24ನೇ ಸಾಲಿನಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ, ನಾಲ್ಕು ತಾಲೂಕು ಸಾಹಿತ್ಯ ಸಮ್ಮೇಳನ, ನರ್ವಹಣಾ ಅನುದಾನ ಸೇರಿದಂತೆ ರಾಜ್ಯ ಸಾಹಿತ್ಯ ಪರಿಷತ್ತಿನಿಂದ ₹11,36,038 ಬಂದಿದ್ದು, ಅದನ್ನು ನಿಯಮಾನುಸಾರ ಖರ್ಚು ಮಾಡಲಾಗಿದೆ. ಈಗಾಗಲೇ ಇದರ ಅಡಿಟ್ ಮಾಡಿಸಲಾಗಿದ್ದು, ಕೇಂದ್ರ ಸಮಿತಿಗೆ ಸಲ್ಲಿಸಲಾಗುತ್ತಿದೆ ಎಂದರು.ಜಿಲ್ಲಾ ಗೌರವ ಕಾರ್ಯದರ್ಶಿ ಜಾರ್ಜ್ ಫರ್ನಾಂಡೀಸ್, ತಾಲೂಕು ಕಸಾಪ ಅಧ್ಯಕ್ಷೆ ಸುಮಂಗಲಾ ಅಂಗಡಿ, ಅಜೀವ ಸದಸ್ಯರ ಪರವಾಗಿ ಮುಂಡಗೋಡದ ಡಾ. ಪಿ.ಬಿ. ಛಬ್ಬಿ, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಶಿವದೇವ ದೇಸಾಯಸ್ವಾಮಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರೊ ಕಬಡ್ಡಿಯಲ್ಲಿ ಬೆಂಗಾಲ್ ತಂಡಕ್ಕೆ ಆಯ್ಕೆಯಾದ ಬುಡಕಟ್ಟು ಸಿದ್ದಿ ಸಮುದಾಯದ ಸುಶೀಲ್ ಸಿದ್ದಿ ಹಾಗೂ ಬೊಂಬೆಯಾಟ್ ಶಿಕ್ಷಕ ಪ್ರೌಢಶಾಲಾ ಶಿಕ್ಷಕ ಸಿದ್ದಪ್ಪ ಬಿರಾದಾರ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಗೌರವ ಕೋಶಾಧ್ಯಕ್ಷ ಮುರ್ತುಜಾ ಹುಸೇನ್ ಆನೆಹೊಸುರ, ಜಿಲ್ಲಾ ಸಮಿತಿ ಸದಸ್ಯ ಜಯಶೀಲ ಅಗೇರ, ಸಿದ್ದಪ್ಪ ಬಿರಾದಾರ ಅವರು ಕಾರ್ಯಕ್ರಮ ನಿರ್ವಹಿಸಿದರು.