ಜಿಲ್ಲಾ ಬಿಜೆಪಿಯ ಕಾರ್ಯಕಾರಣಿ ಸಭೆ ಉದ್ಘಾಟಿಸಿದ ಸಂಸದ
ಕನ್ನಡಪ್ರಭ ವಾರ್ತೆ ಯಲ್ಲಾಪುರರಾಜ್ಯದಲ್ಲಿ ಜನಸಾಮಾನ್ಯರು ಭದ್ರತೆ ಇಲ್ಲದೇ ಆತಂಕದಲ್ಲೇ ಬದುಕುವಂತಾಗಿದೆ. ಅಲ್ಪಸಂಖ್ಯಾತರ ಓಲೈಕೆ ಮಿತಿಮೀರಿದೆ. ಶಾಂತಿ, ಸೌಹಾರ್ದತೆ ಇಲ್ಲವಾಗಿದೆ. ಅಭಿವೃದ್ಧಿ ಸಂಪೂರ್ಣ ನಿಂತಿದೆ. ಭ್ರಷ್ಟಾಚಾರ ಮಿತಿಮೀರಿದೆ. ಇಂತಹ ಅತ್ಯಂತ ವೈಫಲ್ಯ ಸರ್ಕಾರ ನಡೆಸುತ್ತಿರುವ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಜಿಲ್ಲೆಗೆ ಬಂದು, ಬೇಕಾದ ಯಾವ ಯೋಜನೆಯನ್ನೂ ಘೋಷಿಸದೇ ಜಿಲ್ಲೆಗೆ ಹಾನಿಯುಂಟುಮಾಡುವ ಯೋಜನೆಯ ಕುರಿತು ಮಾತನಾಡಿ ಜಿಲ್ಲೆಯನ್ನು ನಿರ್ಲಕ್ಷಿಸಿದ್ದಾರೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪಿಸಿದರು.
ಶನಿವಾರ ಪಟ್ಟಣದ ಅಡಕೆ ಭವನದಲ್ಲಿ ಜಿಲ್ಲಾ ಬಿಜೆಪಿಯ ಕಾರ್ಯಕಾರಣಿ ಸಭೆ ಉದ್ಘಾಟಿಸಿ ಮಾತನಾಡಿದರು. ಕೇಂದ್ರ ಸರ್ಕಾರದ ಹತ್ತಾರು ಯೋಜನೆಗಳನ್ನು ಜಾರಿಗೆ ತರುವುದಕ್ಕೆ ರಾಜ್ಯ ಸರ್ಕಾರ ಅಡ್ಡಗಾಲು ಹಾಕುತ್ತಿದೆ. ಪುನಃ ಉಜ್ವಲ ಯೋಜನೆ ಜಾರಿಗೆ ಬಂದಿದೆ. ೨೦೪೭ರ ವಿಕಸಿತ ಭಾರತಕ್ಕೆ ಪ್ರತಿ ಗ್ರಾಪಂ ಅಭಿವೃದ್ಧಿಗೊಳ್ಳಬೇಕು. ಆ ದೃಷ್ಟಿಯಿಂದಲೇ ಕೇಂದ್ರ ಬಜೆಟ್ ಮಂಡಿಸಲಾಗಿದೆ. ಜಗತ್ತೇ ಅದಕ್ಕೆ ಬೆರಗಾಗಿದೆ. ಜಿಎಸ್ಟಿ ೨ರಿಂದ ದೇಶದ ಆದಾಯ ಹೆಚ್ಚುತ್ತಿದೆ. ಜಿಲ್ಲೆಯ ಜಲಮೂಲ ಉಳಿಸಿಕೊಂಡು, ಕೃಷಿ ಜೀವನಕ್ಕೆ ಸಹಕರಿಯಾಗುವಂತೆ ನಾವು ಗಮನಿಸಬೇಕು. ವಿಬಿಜಿ ರಾಮ್ ಜಿ ಯೋಜನೆಯಲ್ಲಿ ಹತ್ತಾರು ವಿಶೇಷಗಳನ್ನು ಸೇರಿಸಿ ಉದ್ಯೋಗಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದರು.ಭಾರತದ ಸನಾತನ ಅರಿವನ್ನು ಜಗತ್ತಿಗೆ ವಿವೇಕಾನಂದರು ನೀಡಿದ್ದರು. ಅದನ್ನು ಮೋದಿಯವರು ಮುಂದುವರೆಸಿದ್ದಾರೆ. ಭಾರತವನ್ನು ವಿಶ್ವ ಗಮನಿಸುವಂತೆ ಮಾಡಿದ್ದಾರೆ. ಪ್ರಸ್ತುತ ಎಸ್.ಐ.ಆರ್ ಪ್ರಾರಂಭಗೊಳ್ಳಲಿದೆ. ಜಿಲ್ಲೆಯಲ್ಲಿ ಅನೇಕ ವಿದೇಶಿ ನಾಗರಿಕರು ಇದ್ದಾರೆನ್ನುವ ವದಂತಿಗಳಿವೆ. ಯಾರು ಜಿಲ್ಲೆಯ ಮತದಾರರು ಎಂಬುದನ್ನು ಚುನಾವಣಾ ಆಯೋಗದ ಅಧಿಕಾರಿಗಳಿಗೆ ಯಾದಿ ಮಾಡುವಾಗ ನಮ್ಮ ಕಾರ್ಯಕರ್ತರು ಸಹಕಾರ ನೀಡಬೇಕು. ರಾಜ್ಯದ ದಿವಾಳಿ ಸರ್ಕಾರವನ್ನು ಜನ ತೊಲಗಲಿ ಎನ್ನುತ್ತಿದ್ದಾರೆ. ಅದನ್ನು ಬಳಸಿಕೊಂಡು ಮುಂದಿನ ದಿನಗಳಲ್ಲಿ ಗ್ರಾಪಂದಿಂದ ಹಿಡಿದು ಎಲ್ಲ ಚುನಾವಣೆಗಳಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರುವಂತೆ ಪ್ರತಿಯೊಬ್ಬ ಪದಾಧಿಕಾರಿಗಳು, ಕಾರ್ಯಕರ್ತರು ಈಗಿನಿಂದಲೇ ಕ್ರಮಬದ್ಧವಾದ ಸಂಘಟನೆಗೆ ಅಣಿಯಾಗಬೇಕು ಎಂದರು.
ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ವಿಬಿಜಿ ರಾಮ್‌ಜಿ ಯೋಜನೆಯ ಕುರಿತು ಸಭೆಯಲ್ಲಿ ಸರ್ವಾನುಮತದ ಒಪ್ಪಿಗೆ ನೀಡುವ ಮತ್ತು ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುವ ನಿರ್ಣಯ ಮಂಡಿಸಿದರು. ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಅಧ್ಯಕ್ಷತೆ ವಹಿಸಿ, ನಾವು ಈಗಾಗಲೇ ಸಂಘಟನಾತ್ಮಕವಾಗಿ ಹಲವಾರು ರೀತಿಯ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದೇವೆ. ೧೮ ವರ್ಷ ತುಂಬಿದ ಯುವ ಜನಾಂಗವನ್ನು ಮತದಾರರ ಪಟ್ಟಿಗೆ ಸೇರಿಸುವ ಜೊತೆ ಅವರನ್ನು ಪದಾಧಿಕಾರಿಗಳನ್ನಾಗಿ ಮಾಡಿ, ಅವರಿಗೆ ಪ್ರಶಿಕ್ಷಣ ನೀಡುವ ಕಾರ್ಯ ಮಾಡಬೇಕಾಗಿದೆ ಎಂದರು.ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ, ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ, ಪ್ರಮುಖರಾದ ಕೆ.ಜಿ. ನಾಯ್ಕ ಹಸವಂತೆ, ಅನಂತಮೂರ್ತಿ ಹೆಗಡೆ, ರವಿ ಹೆಗಡೆ ಹೂವಿನಮನೆ, ಶಿವಾನಂದ ನಾಯ್ಕ, ಗುರುಪ್ರಸಾದ ಹೆಗಡೆ, ಮೋಹನ ನಾಯ್ಕ, ಎಲ್.ಟಿ. ಪಾಟೀಲ, ಈಶ್ವರ ನಾಯ್ಕ, ಶಿವಾನಿ ನರಸಾನಿ, ಅಶೋಕ ಚಲುವಾದಿ, ಸಂತೋಷ ಚಲುವಾದಿ ಮತ್ತಿತರರಿದ್ದರು. ಪ್ರಮುಖರಾದ ಗಣಪತಿ ಮಾನಿಗದ್ದೆ ವಂದೇ ಮಾತರಂ ಹಾಡಿದರು. ನಿತ್ಯಾನಂದ ಗಾಂವ್ಕರ ಸ್ವಾಗತಿಸಿದರು. ಪ್ರಶಾಂತ ನಾಯ್ಕ ನಿರ್ವಹಿಸಿದರು. ವೆಂಕಟೇಶ ನಾಯ್ಕ ವಂದಿಸಿದರು.