ನಾಮಫಲಕಗಲ್ಲಿ ಕನ್ನಡ ಕಡ್ಡಾಯ ಜಾರಿಗೆ ಆಗ್ರಹಿಸಿ ಕರವೇ ಪ್ರತಿಭಟನೆ

KannadaprabhaNewsNetwork |  
Published : Oct 01, 2024, 01:33 AM IST
ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ರಸ್ತೆಯ ಮೇಲೆ ಕುಳಿತು ಕರವೇ ಕಾರ್ಯಕರ್ತರ ಬೇಡಿಕೆ ಆಲಿಸಿದರು. | Kannada Prabha

ಸಾರಾಂಶ

ಬೆಳಗಾವಿ ಮಹಾನಗರ ಮತ್ತು ಜಿಲ್ಲೆಯಾದ್ಯಂತ ನಾಮಫಲಕ ಮತ್ತು ಜಾಹೀರಾತು ಫಲಕಗಳಲ್ಲಿ ಕನ್ನಡ ಕಡ್ಡಾಯಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ಬೆಳಗಾವಿಯಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿ ಮಹಾನಗರ ಮತ್ತು ಜಿಲ್ಲೆಯಾದ್ಯಂತ ನಾಮಫಲಕ ಮತ್ತು ಜಾಹೀರಾತು ಫಲಕಗಳಲ್ಲಿ ಕನ್ನಡ ಕಡ್ಡಾಯಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ಬೆಳಗಾವಿಯಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಬಳಿ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ಬೆಳಗಾವಿ ಮಹಾನಗರ ಪಾಲಿಕೆ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿ, ಪಾಲಿಕೆ ಎದುರು ರಸ್ತೆಯ ಮೇಲೆಯೇ ಕುಳಿತು ಪ್ರತಿಭಟನೆ ನಡೆಸಿದರು. ಈ ವೇಳೆ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಅವರು ಪ್ರತಿಭಟನಾಕಾರರು ಎದುರೇ ರಸ್ತೆಯ ಮೇಲೆ ಕುಳಿತು, ಅವರ ಬೇಡಿಕೆಗಳನ್ನು ಆಲಿಸಿ, ನಾಮಫಲಕ ಹಾಗೂ ಜಾಹೀರಾತು ಫಲಕಗಳಲ್ಲಿ ಕನ್ನಡ ಕಡ್ಡಾಯ ಜಾರಿಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ರಾಜ್ಯ ಸರ್ಕಾರ, ನಾಮಫಲಕ ಮತ್ತು ಜಾಹೀರಾತು ಫಲಕಗಳಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಬಳಸುವಂತೆ ಆದೇಶ ಹೊರಡಿಸಿದೆ. ಆದರೆ ಬೆಳಗಾವಿ ಮಹಾನಗರ ಮತ್ತು ಜಿಲ್ಲೆಯಾದ್ಯಂತ ಸರ್ಕಾರದ ಆದೇಶ ಪಾಲನೆ ಆಗುತ್ತಿಲ್ಲ. ಬೆಳಗಾವಿ ಮಹಾನಗರ ಸೇರಿದಂತೆ ಜಿಲ್ಲೆಯಾದ್ಯಂತ. ಅನ್ಯ ಭಾಷೆಯ ಜಾಹಿರಾತು ಫಲಕಗಳು ರಾರಾಜಿಸುತ್ತಿವೆ ಎಂದು ಆರೋಪಿಸಿದರು. ಬೆಳಗಾವಿ ಮಹಾನಗರದಲ್ಲಿ ಅನ್ಯಭಾಷೆಯಲ್ಲಿ ಶುಭಾಶಯಗಳು ಕೋರಿ, ಬ್ಯಾನರ್‌ ಮತ್ತು ಕಟೌಟ್‌ಗಳನ್ನು ಹಚ್ಚುವ ಮೂಲಕ ರಾಜಕೀಯ ನಾಯಕರೇ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡುತ್ತಿದ್ದು, ಅಧಿಕಾರಿಗಳೂ ಸಹ ರಾಜಕೀಯ ನಾಯಕರ ಒತ್ತಡಕ್ಕೆ ಮಣಿದು ಸರ್ಕಾರದ ಆದೇಶ ಪಾಲಿಸುತ್ತಿಲ್ಲ. ಕನ್ನಡ ನಾಮಫಲಕ ಕಡ್ಡಾಯದ ವಿಚಾರದಲ್ಲಿ ಬೆಳಗಾವಿ ಜಿಲ್ಲಾಡಳಿತ ಯಾವುದೇ ಮುಲಾಜಿಲ್ಲದೇ ಅನ್ಯ ಭಾಷೆಯ ನಾಮಫಲಕ, ಜಾಹೀರಾತು ಫಲಕ ಮತ್ತು ಕಟೌಟ್, ಬ್ಯಾನರ್‌ಗಳನ್ನು ತೆಗೆಯಲು ಕಾರ್ಯಾಚರಣೆ ಆರಂಭಿಸಬೇಕು. ಪಾಲಿಕೆ ವಾರದೊಳಗಾಗಿ ಕ್ರಮ ಕೈಗೊಳ್ಳದಿದ್ದರೆ, ಈ ವಿಚಾರದಲ್ಲಿ ಮಹಾನಗರ ಪಾಲಿಕೆ ನಿರ್ಲಕ್ಷ್ಯ ಮಾಡಿದರೆ, ಕರವೇ ಕಾರ್ಯಕರ್ತರು ಅನ್ಯಭಾಷೆಯ ಫಲಕಗಳನ್ನು ಕಿತ್ತೆಸೆಯುವ ಆಂದೋಲನ ಮಾಡುತ್ತೇವೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ, ರಾಜ್ಯ ಸಂಚಾಲಕ ಮಹಾದೇವ ತಳವಾರ, ಕರವೇ ರಾಜ್ಯ ರೈತ ಘಟಕದ ಕಾರ್ಯದರ್ಶಿ ಸುರೇಶ ಗವನ್ನವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಣೇಶ ರೋಕಡೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೊಸ ಅವಕಾಶ ತೆರೆದ ಸಮಕಾಲೀನ ಭಾಷಾ ತಂತ್ರಜ್ಞಾನ: ಗೀತಾ ವಾಲೀಕಾರ್
ವಸಾಹತುಶಾಹಿತ್ವ ಒಳಿತು ಕೆಡಕಿನ ಸಂತೆ: ಡಾ. ಕೆ. ವೆಂಕಟೇಶ