ಕಾರ್ಗಿಲ್‌ ಯುದ್ಧ ಪಾಕ್‌ ಕುತಂತ್ರದ ಫಲ: ಲೆ.ಕ. ಕಾವೇರಪ್ಪ

KannadaprabhaNewsNetwork |  
Published : Jul 28, 2026, 02:45 AM IST
ಯೋಧರಿಗೆ ಗೌರವಾಪ೯ಣೆ  | Kannada Prabha

ಸಾರಾಂಶ

ಕಾರ್ಗಿಲ್ ಯುದ್ಧದಲ್ಲಿ ಮಡಿದ ಹುತಾತ್ಮ ಯೋಧರಿಗೆ ‘ಪುಷ್ಪ ನಮನ-ಗಾನ ನಮನ- ಗೌರವ ನಮನ’ ಸಲ್ಲಿಸುವ ಹೃದಯ ಸ್ಪರ್ಶಿ ‘ಕಾರ್ಗಿಲ್ ವಿಜಯ್ ದಿವಸ್’ ಕಾರ್ಯಕ್ರಮ ನಗರದ ಗೌಡ ಸಮಾಜದ ಸಭಾಂಗಣದಲ್ಲಿ ಜಿಲ್ಲೆಯ 143 ಸಂಘ ಸಂಸ್ಥೆಗಳ ಒಗ್ಗೂಡುವಿಕೆಯೊಂದಿಗೆ ಭಾವನಾತ್ಮಕವಾಗಿ ಜರುಗಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕಾರ್ಗಿಲ್ ಯುದ್ಧದಲ್ಲಿ ಮಡಿದ ಹುತಾತ್ಮ ಯೋಧರಿಗೆ ‘ಪುಷ್ಪ ನಮನ-ಗಾನ ನಮನ- ಗೌರವ ನಮನ’ ಸಲ್ಲಿಸುವ ಹೃದಯ ಸ್ಪರ್ಶಿ ‘ಕಾರ್ಗಿಲ್ ವಿಜಯ್ ದಿವಸ್’ ಕಾರ್ಯಕ್ರಮ ನಗರದ ಗೌಡ ಸಮಾಜದ ಸಭಾಂಗಣದಲ್ಲಿ ಜಿಲ್ಲೆಯ 143 ಸಂಘ ಸಂಸ್ಥೆಗಳ ಒಗ್ಗೂಡುವಿಕೆಯೊಂದಿಗೆ ಭಾವನಾತ್ಮಕವಾಗಿ ಜರುಗಿತು.

ನೂರಾರು ಸಂಖ್ಯೆಯಲ್ಲಿ ಸೇರಿದ್ದ ದೇಶಪ್ರೇಮಿಗಳು ಈ ವಿನೂತನ ಕಾರ್ಯಕ್ರಮ ಮೂಲಕ ರಾಷ್ಟ್ರಪ್ರೇಮ ಅಭಿವ್ಯಕ್ತಗೊಳಿಸಿದರು.ಕೊಡಗು ಪತ್ರಕರ್ತರ ಸಂಘ ಮತ್ತು ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ನಗರದ ಗೌಡ ಸಮಾಜದ ಸಭಾಂಗಣದಲ್ಲಿ ಆಯೋಜಿಸಿದ ತೃತೀಯ ವರ್ಷದ 27ನೇ ಕಾರ್ಗಿಲ್ ವಿಜಯ್ ದಿವಸ್ ಹುತಾತ್ಮ ಯೋಧರ ಸಂಸ್ಮರಣಾ ಕಾರ್ಯಕ್ರಮಕ್ಕೆ ನಗರದ ಆರ್ಮಿ ಕ್ಯಾಂಟೀನ್ ನ ಹಿರಿಯ ವ್ಯವಸ್ಥಾಪಕ ಲೆಫ್ಟಿನೆಂಟ್ ಕರ್ನಲ್ ಮೊಳ್ಳೇರ ಎಸ್. ಕಾವೇರಿಯಪ್ಪ (ನಿವೃತ್ತ) ಅವರು, ಹುತಾತ್ಮರ ಪ್ರತೀಕವಾಗಿ ನಿಲ್ಲಿಸಲಾಗಿದ್ದ ಸ್ಮಾರಕಕ್ಕೆ ಪುಷ್ಪ ನಮನ ಮೂಲಕ ಚಾಲನೆ ನೀಡಿದರು. ಮಡಿಕೇರಿ ಶಾಸಕ ಡಾ. ಮಂಥರ್ ಗೌಡ, ವಿಧಾನ ಸಭೆಯ ಮಾಜಿ ಸಭಾಧ್ಯಕ್ಷ ಕೆ.ಜಿ. ಬೋಪಯ್ಯ, ಮಡಿಕೇರಿ ನಗರಸಭೆ ಅಧ್ಯಕ್ಷೆ ಪಿ. ಕಲಾವತಿ, ಆಗ್ರಾದ ಪ್ಯಾರಾ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಕೊಡಗಿನ ಯೋಧ ಯತೀಶ್, ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಎಚ್.ಟಿ., ಕಾರ್ಯದರ್ಶಿ ಸುರೇಶ್ ಬಿಳಿಗೇರಿ, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪಿ.ಆರ್. ರಾಜೇಶ್ , ಕಾರ್ಯದರ್ಶಿ ಚೇತನ್ ಜಿ.ಡಿ., ರೋಟರಿ ಸಹಾಯಕ ಗವರ್ನರ್ ಎಚ್.ಎಸ್. ವಸಂತ್ ಕುಮಾರ್, ವಲಯ ಸೇನಾನಿ ಪೊನ್ನಚ್ಚನ ಮಧುಸೂದನ್, ಡಿವೈಎಸ್ಪಿ ಸೂರಜ್ ಹುತಾತ್ಮ ಯೋಧ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು.ಕಾರ್ಯಕ್ರಮ ಉದ್ಘಾಟಿಸಿದ ಲೆ.ಕ. ಮೊಳ್ಳೇರ ಎಸ್. ಕಾವೇರಪ್ಪ ಮಾತನಾಡಿ, ಪ್ರತಿಯೊಬ್ಬರು ದೇಶಪ್ರೇಮ, ವಿನಮ್ರತೆ, ನಿಷ್ಠೆ ಮತ್ತು ಶಿಸ್ತಿನೊಂದಿಗೆ ತಮ್ಮ ಕ್ಷೇತ್ರಗಳಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳುವ ಮೂಲಕ ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.ಕಾರ್ಗಿಲ್ ಯುದ್ಧದ ಸಂದರ್ಭ ತಾವು ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದುದನ್ನು ಸ್ಮರಿಸಿಕೊಂಡ ಅವರು, ಕಾರ್ಗಿಲ್ ಯುದ್ಧವು ನಮ್ಮ ಗುಪ್ತಚರ ಮಾಹಿತಿಯ ವೈಫಲ್ಯದಿಂದ ನಡೆಯಿತೆನ್ನುವ ಆರೋಪವಿದೆ. ಪಾಕ್ ಕುತಂತ್ರದಿಂದ ನಡೆದಿದೆ ಎಂದರು.ಹುತಾತ್ಮ ಯೋಧರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದ ಶಾಸಕ ಡಾ. ಮಂತರ್‌ ಗೌಡ ಮಾತನಾಡಿ, ಯುದ್ಧದ ಸಂದರ್ಭಗಳಲ್ಲಿ ನಾವೇ ಆತಂಕಕ್ಕೊಳಗಾಗುತ್ತೇವೆ. ಆದರೆ ಯೋಧರು ಸ್ವತಃ ಯುದ್ಧ ಭೂಮಿಯಲ್ಲಿ ಕೆಚ್ಚೆದೆಯಿಂದ ಪರಿಸ್ಥಿತಿಗಳನ್ನು ಎದುರಿಸಿ ನಡೆಸುವ ಹೋರಾಟ, ಬಲಿದಾನಗಳ ಮೂಲಕ ರಾಷ್ಟ್ರ ರಕ್ಷಣೆ ಮಾಡುವುದು ಮಹತ್ತರವಾದುದು. ಇಂತಹ ಯೋಧರನ್ನು ಸ್ಮರಿಸುವುದು, ಗೌರವಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು. ಯಾವುದೇ ಇಲಾಖೆಯಲ್ಲಿ ಸೈನಿಕರಿಗೆ ಅಗತ್ಯ ಕೆಲಸ ಕಾರ್ಯಗಳು ನಡೆಯದೆ ಅಗೌರದಿಂದ ನಡೆಸಿಕೊಳ್ಳಲಾಗಿದೆ ಎಂದಾದಲ್ಲಿ ತನಗೆ ತಿಳಿಸಿ, ಆ ಸಂದರ್ಭ ತಾನು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತೇನೆ ಎಂದು ಶಾಸಕರು ಭರವಸೆ ನೀಡಿದರು. ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪಿ.ಆರ್. ರಾಜೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಚಾಲಕ ಅನಿಲ್ ಎಚ್.ಟಿ. ಮಾತನಾಡಿದರು.ಅನುರಣಿಸಿದ ದೇಶ ಭಕ್ತಿ ಗೀತೆ: ಪ್ರತಿಯೊಬ್ಬರ ಮನದಲ್ಲಿ ರಾಷ್ಟ್ರಭಕ್ತಿಯನ್ನು ಪ್ರೇರೇಪಿಸುವಂತೆ ಭಾರತೀಯ ವೀರರೇ ಎಂಬ ಭಾವಪೂರ್ಣ ದೇಶಭಕ್ತಿಯ ಮೂಲಕ ಕೊಡಗು ಪತ್ರಿಕಾ ಭವನ ಟ್ರಸ್ಟ್ ನ ಟ್ರಸ್ಟಿ ಜಿ. ಚಿದ್ವಿಲಾಸ್ ಯೋಧರ ಗಾನ ನಮನಕ್ಕೆ ಮುನ್ನುಡಿ ನೀಡಿದರು. ಕನ್ನಡ ಮತ್ತು ಸಂಸ್ಕೖತಿ ಇಲಾಖೆ ಕೊಡಗು ಜಿಲ್ಲೆಯ ಸಹಯೋಗದಲ್ಲಿ ಮೈಸೂರಿನ ರಾಜೇಶ್ ಪಡಿಯಾರ್ ಹಾಗೂ ಡಾ. ರಶ್ಮಿ ಅವರ ಸಂಗೀತ ತಂಡ ವಿವಿಧ ದೇಶ ಭಕ್ತಿ ಗೀತೆಗಳನ್ನು ಪ್ರಸ್ತುತಪಡಿಸಿದರು.ಕೊಡಗಿನ ವಿಕ್ರಂ ಜಾದೂಗಾರ್ ಕೈಚಳಕ ಪ್ರದರ್ಶಿಸಿದರು. ಕೊಡಗು ಪತ್ರಕರ್ತರ ಸಂಘದ ನಿರ್ದೇಶಕ ವಿನೋದ್ ಮೂಡಗದ್ದೆ ನಿರೂಪಿಸಿ, ರೋಟರಿ ಮಿಸ್ಟಿ ಹಿಲ್ಸ್ ನಿರ್ದೇಶಕ ಬಿ.ಜಿ. ಅನಂತ ಶಯನ ಉದ್ಘಾಟಕರ ಪರಿಚಯ ಮಾಡಿದರು. ಮಾಜಿ ಯೋಧರು, ಸುಂಟಿಕೊಪ್ಪದ ವಿಶೇಷ ಚೇತನರ ಸ್ವಸ್ಥ ಶಾಲಾ ವಿದ್ಯಾರ್ಥಿಗಳು ಯೋಧರ ಸ್ಮಾರಕಕ್ಕೆ ಪುಪ್ಪ ನಮನ ಸಲ್ಲಿಸಿದರು.

ರಾಜಕೀಯ ನೇತಾರರ ಒಗ್ಗಟ್ಟು!

ಕಾರ್ಯಕ್ರಮ ಜಿಲ್ಲೆಯ ಪ್ರಮುಖ ರಾಜಕೀಯ ಪಕ್ಷಗಳ ನಾಯಕರನ್ನು ಒಂದೇ ವೇದಿಕೆಯಲ್ಲಿ ನಿಲ್ಲಿಸುವಲ್ಲಿ ಸಫಲವಾಯಿತು. ಕಾಂಗ್ರೆಸ್‌ ಪ್ರತಿನಿಧಿಸುವ ಶಾಸಕ ಡಾ. ಮಂತರ್ ಗೌಡ, ಮುಡಾ ಅಧ್ಯಕ್ಷ ರಾಜೇಶ್ ಬಿ.ವೈ., ಬಿಜೆಪಿಯ ಮಾಜಿ ಶಾಸಕ ಕೆ.ಜಿ. ಬೋಪಯ್ಯ, ಜಿಲ್ಲಾಧ್ಯಕ್ಷ ನಾಪಂಡ ರವಿಕಾಳಪ್ಪ, ಎಸ್ ಡಿಪಿಐನಿಂದ ಅಮೀನ್ ಮೊಯ್ಸಿನ್ ನೇತೃತ್ವದ ಸದಸ್ಯರು ಹುತಾತ್ಮ ಯೋಧರಿಗೆ ಪುಷ್ಪಾಂಜಲಿ ಸಲ್ಲಿಸಿದರು. ಎಲ್ಲ ರಾಜಕೀಯ ನೇತಾರರು ಒಟ್ಟಾಗಿ ಪುಷ್ಪ ನಮನ ಸಲ್ಲಿಸಿದಾಗ ಸೇರಿದ್ದ ಜನರು ಕರತಾಡನದ ಮೂಲಕ ರಾಜಕಾರಣಿಗಳ ಒಗ್ಗಟ್ಟಿಗೆ ಮೆಚ್ಚುಗ ಸೂಚಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಲನಚಿತ್ರ ಪ್ರಶಸ್ತಿ ಪುರಸ್ಕೃತರಿಗೆ ರೋಹನ್‌ ಕಾರ್ಪೋರೇಷನ್‌ ಸನ್ಮಾನ
ವಿದ್ಯಾಸಂಸ್ಥೆ ಬೆಳವಣಿಗೆಗೆ ಎಲ್ಲರ ಸಹಭಾಗಿತ್ವ ಅಗತ್ಯ: ಸೀತಾರಾಮ ರೈ