ಅರಸೀಕೆರೆಯಲ್ಲಿ ಸಂಭ್ರಮದಿಂದ ಜರುಗಿದ ಕರಿಯಮ್ಮ, ಮಲ್ಲಿಗಮ್ಮ ಮಹಾ ರಥೋತ್ಸವ

KannadaprabhaNewsNetwork | Updated : May 03 2024, 01:02 AM IST

ಸಾರಾಂಶ

ಅರಸೀಕೆರೆಯ ಗ್ರಾಮದೇವತೆ ಶ್ರೀಕರಿಯಮ್ಮ ಮತ್ತು ಶ್ರೀಮಲ್ಲಿಗಮ್ಮ ದೇವಿಯರ ಮಹಾರಥೋತ್ಸವ ಗುರುವಾರ ಮಧ್ಯಾಹ್ನ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ನೆರವೇರಿತು.

ಸಾವಿರಾರು ಭಕ್ತರ ಸಮ್ಮುಖದಲ್ಲಿ ಇಬ್ಬರು ಗ್ರಾಮದೇವತೆಗಳ ಜಾತ್ರೆ । ಇಂದು ಅಂಬಾರಿ ಮೆರವಣಿಗೆ

ಕನ್ನಡಪ್ರಭ ವಾರ್ತೆ ಅರಸೀಕೆರೆ

ನಗರದ ಗ್ರಾಮದೇವತೆ ಶ್ರೀಕರಿಯಮ್ಮ ಮತ್ತು ಶ್ರೀಮಲ್ಲಿಗಮ್ಮ ದೇವಿಯರ ಮಹಾರಥೋತ್ಸವ ಗುರುವಾರ ಮಧ್ಯಾಹ್ನ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ನೆರವೇರಿತು.

ಜಾತ್ರಾ ಮಹೋತ್ಸವದ ಅಂಗವಾಗಿ ಕಳೆದ ೧ ವಾರದಿಂದ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿ ವಿವಿಧ ಉತ್ಸವಾದಿಗಳು ಧಾರ್ಮಿಕ ಕಾರ್ಯವನ್ನು ಸಾಕ್ಷೀಕರಿಸಿ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡು ಕೃತಾರ್ತರಾದರು.

ನಗರದ ಜನತೆ ಸೇರಿದಂತೆ ಸುತ್ತಮುತ್ತಲಿನ ಊರಿಗಳಿಂದಲೂ ಸಹ, ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಳ್ಳುವುದು ಜಾತ್ರೋತ್ಸವದ ವಿಶೇಷ. ರಥೋತ್ಸವಕ್ಕೂ ಮುನ್ನ, ಮುಂಜಾನೆಯಿಂದಲೇ ದೇವಾಲಯದ ಸಂಪ್ರದಾಯದಂತೆ ವಿಶೇಷ ಪೂಜಾ ಕೈಂಕರ್ಯಗಳು, ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜರುಗಿದವು. ಊರೊಳಗಿನ ಮಲ್ಲಿಗೆಯಮ್ಮ ದೇವಾಲಯ ಹಾಗೂ ಮೂಲ ಸನ್ನಿಧಾನದಲ್ಲಿ ನೆಲೆಸಿರುವ ಕರಿಯಮ್ಮ ದೇವಿ ಸಮೇತ ಪಂಚ ಮಾತೃಕೆಯರ ಮೂಲ ವಿಗ್ರಹಕ್ಕೆ ನಾನಾ ಅಭಿಷೇಕ, ವಿವಿಧ ಅರ್ಚನೆಗಳು ನಡೆದವು.

ಗುರುವಾರ ಬೆಳಿಗ್ಗೆ ಚಿಟ್ಟೆ ಮೇಳ, ಕರಡೇ ವಾದ್ಯ, ತಮಟೆ ಮತ್ತು ಮಂಗಳ ವಾದ್ಯಗಳೊಂದಿಗೆ ಶ್ರೀಮಲ್ಲಿಗಮ್ಮ, ಚೆಲುವರಾಯಸ್ವಾಮಿ, ದೂತರಾಯಸ್ವಾಮಿ ದೇವರುಗಳ ಕುಣಿತವು ಜಾತ್ರೆಯಲ್ಲಿ ನೇರಿದಿದ್ದ ಸಾವಿರಾರು ಭಕ್ತ ಜನರರಿಗೆ ಆಕರ್ಷಣೆಯನ್ನು ನೀಡಿದವು ಮೂಲ ಸನ್ನಿಧಿಯಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ಶಾಸ್ತ್ರೋಕ್ತವಾಗಿ ನಡೆಸುವ ಮೂಲಕ ದೇವಸ್ಥಾನದ ಆವರಣದಲ್ಲಿನ ಮಹಾರಥಕ್ಕೆ ವಿವಿಧ ಬಣ್ಣಗಳಿಂದ ಕೂಡಿದ ಬಾವುಟಗಳು ಮತ್ತು ವಿವಿಧ ಬಗೆಯ ಹೂವು, ಹಾರಗಳಿಂದ ವಿನೂತನವಾಗಿ ಶೃಂಗರಿಸಿ ಸಂಪ್ರದಾಯದಂತೆ ವಿಶೇಷ ವಿಧಿ ವಿಧಾನಗಳಂತೆ ಪೂಜಾ ಕಾರ್ಯಗಳನ್ನು ನಡೆಸಲಾಯಿತು.

ನಂತರ ಕರಿಯಮ್ಮ ಮತ್ತು ಮಲ್ಲಿಗೆಯಮ್ಮ ದೇವಿಯ ಉತ್ಸವ ಮೂರ್ತಿಗಳನ್ನು ನಾನಾ ಪುಷ್ಪಗಳಿಂದ ಅಲಂಕರಿಸಿ, ವಿಶೇಷ ರೀತಿಯಲ್ಲಿ ಸಿಂಗಾರ ಮಾಡಿದ್ದ ರಥದ ಮೇಲೆ ಪ್ರತಿಷ್ಠಾಪಿಸುತ್ತಿದ್ದಂತೆಯೇ ಮಹಾ ಮಂಗಳಾರತಿ ನೆರವೇರಿಸಲಾಯಿತು. ಈ ಶುಭ ಘಳಿಗೆಗಾಗಿ ಕಾಯುತ್ತಿದ್ದ ಭಕ್ತ ಸಮೂಹ, ಗ್ರಾಮ ದೇವತೆಯರ ನಾಮಸ್ಮರಣೆಯೊಂದಿಗೆ ಭಕ್ತಿ ಭಾವದಿಂದ ರಥವನ್ನೆಳೆದು ಪುನೀತರಾದರು.

ಈ ಸಂದರ್ಭದಲ್ಲಿ ನೆರದಿದ್ದ ಸಹಸ್ರಾರು ಭಕ್ತರು ಬಾಳೆಹಣ್ಣು ಹಾಗೂ ದವನ ಪುಷ್ಪಗಳನ್ನು ರಥದ ಮೇಲೆ ಎಸೆದು ತಮ್ಮ ಭಕ್ತಿಯನ್ನು ಸಮರ್ಪಿಸಿದರು. ರಥಾರೋಹಣ ನೇರವೇರಿದ ನಂತರ ದೇವಾಲಯ ಸಮೀಪದಲ್ಲಿ ಮತ್ತು ಅಕ್ಕಪಕ್ಕದ ರಸ್ತೆಯ ಬದಿಗಳಲ್ಲಿ ಸಾರ್ವಜನಿಕರಿಗೆ ಕುಡಿಯಲು ತಂಪಾದ ಪಾನಕ, ನೀರು ಮಜ್ಜಿಗೆ ಹಾಗೂ ಕೊಸಂಬರಿ ಇತ್ಯಾದಿ ಪ್ರಸಾದಗಳನ್ನು ಹಂಚಲಾಯಿತು. ದೇವಾಲಯ ಆಡಳಿತ ಸಮಿತಿಯಿಂದ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಎರ್ಪಡಿಸಲಾಗಿತ್ತು.

ಆನೆ ಅಂಬಾರಿ ಮೆರವಣಿಗೆ:

ಗ್ರಾಮದೇವತೆಗಳನ್ನು ಮೇ.೩ರ ಶುಕ್ರವಾರ ಸಂಜೆ ೪ ಗಂಟೆಗೆ ಮೂಲಸನ್ನಿಧಿಯಿಂದ ಆನೆಯ ಅಂಬಾರಿ ಮೇಲೆ ಪ್ರತಿಷ್ಠಾಪಿಸಿ ಸಕಲ ಬಿರುದಾವಳಿ ಮತ್ತು ಮಂಗಳ ವಾದ್ಯಗಳ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯನ್ನು ನಡೆಸಲಾಗುವುದು ಎಂದು ದೇವಾಲಯ ಆಡಳಿತ ಸಮಿತಿ ತಿಳಿಸಿದೆ. ಆನೆ ಅಂಬಾರಿ ಉತ್ಸವ ನಂತರ ಮಲ್ಲಿಗೆಯಮ್ಮ-ಕರಿಯಮ್ಮ ದೇವಿಯರ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.

Share this article