ಕೋಗಿಲು ಶೆಡ್ ತೆರವಿನಲ್ಲಿ ಕೆಂಗಣ್ಣಿಗೆ ಗುರಿಯಾದ ಕರಿಗೌಡ

KannadaprabhaNewsNetwork |  
Published : Feb 07, 2026, 04:15 AM ISTUpdated : Feb 07, 2026, 08:54 AM IST
bengaluru Kogilu Layout

ಸಾರಾಂಶ

ಯಲಹಂಕದ ಕೋಗಿಲು ಬಡಾವಣೆಯಲ್ಲಿ ಬಡವರು ವಾಸವಿದ್ದ ಶೆಡ್‌ಗಳ ತೆರವುಗೊಳಿಸುವ ಸೂಕ್ಷ್ಮ ವಿಚಾರದಲ್ಲಿ ವ್ಯಾಪ್ತಿ ಮೀರುವ ಮೂಲಕ ರಾಜ್ಯ ಸರ್ಕಾರಕ್ಕೆ ಮುಜುಗರ ಉಂಟು ಮಾಡಿರುವ ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ಕಂಪನಿ (ಬಿಎಸ್‌‌‌‌‌ಡಬ್ಲ್ಯುಎಂಎಲ್) ವಿರುದ್ಧ ತೀವ್ರ ಆಕ್ಷೇಪ ಕೇಳಿ ಬಂದಿದೆ.

 ಬೆಂಗಳೂರು :  ಯಲಹಂಕದ ಕೋಗಿಲು ಬಡಾವಣೆಯಲ್ಲಿ ಬಡವರು ವಾಸವಿದ್ದ ಶೆಡ್‌ಗಳ ತೆರವುಗೊಳಿಸುವ ಸೂಕ್ಷ್ಮ ವಿಚಾರದಲ್ಲಿ ವ್ಯಾಪ್ತಿ ಮೀರುವ ಮೂಲಕ ರಾಜ್ಯ ಸರ್ಕಾರಕ್ಕೆ ಮುಜುಗರ ಉಂಟು ಮಾಡಿರುವ ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ಕಂಪನಿ (ಬಿಎಸ್‌‌‌‌‌ಡಬ್ಲ್ಯುಎಂಎಲ್) ವಿರುದ್ಧ ತೀವ್ರ ಆಕ್ಷೇಪ ಕೇಳಿ ಬಂದಿದೆ.

ಕೆಲ ವರ್ಷಗಳ ಹಿಂದೆ ವಾಸೀಂ ಮತ್ತು ಫಕೀರ್ ಕಾಲೋನಿಗಳಲ್ಲಿ ಬಡ ಜನರು ನಿರ್ಮಿಸಿದ್ದ ಶೆಡ್‌ಗಳನ್ನು ಯಾವುದೇ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳದೇ ಬಿಎಸ್‌‌‌‌‌ಡಬ್ಲ್ಯುಎಂಎಲ್‌ ಸಿಇಒ ಕರಿಗೌಡ ಮುಂದಾಳತ್ವದಲ್ಲಿ ತೆರವು ಕಾರ್ಯಾಚರಣೆಯನ್ನು ಕೈಗೊಂಡಿತ್ತು. ಇದರಿಂದಾಗಿ ಹಲವು ವರ್ಷಗಳಿಂದ ಅಲ್ಲಿ ನೆಲೆಸಿದ್ದ ನೂರಾರು ಬಡ ಜನರು ರಾತ್ರೋರಾತ್ರಿ ಬೀದಿಗೆ ಬಿದ್ದರು. ಸಂಸ್ಥೆಯ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ಮತ್ತು ಆಕ್ರೋಶ ವ್ಯಕ್ತವಾಗಿದೆ. ದೇಶದೆಲ್ಲೆಡೆ ಸುದ್ದಿ ಮಾಡಿದ್ದ ಈ ಘಟನೆಯಿಂದ ರಾಜ್ಯ ಸರ್ಕಾರ ತೀವ್ರ ಮುಜುಗರಕ್ಕೆ ಒಳಗಾಗಿದೆ.

ಇನ್ನು ಘಟನೆಯ ನಂತರ ಹೈಕೋರ್ಟ್‌ಗೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ, ವಾಸೀಂ ಕಾಲೋನಿ ಮತ್ತು ಫಕೀರ್ ಕಾಲೋನಿಗಳಲ್ಲಿ ಜನರು ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿದ್ದರೂ ಅವುಗಳನ್ನು ತೆರವುಗೊಳಿಸುವಾಗ ಸಮೀಕ್ಷೆ ನಡೆಸಿ, ಪ್ರಕ್ರಿಯೆ ಪಾಲಿಸಬೇಕಿತ್ತು ಎಂದು ಮೌಖಿಕ ಅಭಿಪ್ರಾಯ ನೀಡಿದೆ.

ಸರ್ಕಾರಕ್ಕೆ ಆರ್ಥಿಕ ನಷ್ಟ:

ಇನ್ನು ಬಿಎಸ್‌‌‌‌‌ಡಬ್ಲ್ಯುಎಂಎಲ್‌‌ನಿಂದ ಶೆಡ್‌ಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯಿಂದ ಸಾರ್ವಜನಿಕರ ಮನೆಗಳು ನಾಶವಾಗಿದ್ದು, ನಿವಾಸಿಗಳಿಗೆ ಪುನರ್ವಸತಿಯನ್ನು ಸರ್ಕಾರವೇ ಕಲ್ಪಿಸಬೇಕಿದೆ. ಇದರಿಂದ ಸರ್ಕಾರಕ್ಕೂ ಆರ್ಥಿಕ ನಷ್ಟ ಉಂಟಾಗುವಂತಾಗಿದೆ. ಅಲ್ಲದೆ, ಇಂತಹ ಇರುಸು ಮುರುಸು ಪರಿಸ್ಥಿತಿಗೆ ಸಿಲುಕಿ ದೇಶಾದ್ಯಂತ ಸರ್ಕಾರಕ್ಕೆ ಮುಜುಗರ ಉಂಟಾಗಿರುವುದು ಕಾಂಗ್ರೆಸ್ ವಲಯದಲ್ಲಿ ತೀವ್ರ ಬೇಸರ ವ್ಯಕ್ತವಾಗಿದೆ.

ಘಟನೆಯ ಹಿನ್ನೆಲೆಯನ್ನು ಪರಿಶೀಲಿಸಿದಾಗ ಸಂಸ್ಥೆ ಕೂಡ ತೆರವು ಕಾರ್ಯಾಚರಣೆ ವೇಳೆ ಹಲವು ಲೋಪದೋಷ ಎಸಗಿದೆ. ಬಿಬಿಎಂಪಿ ಹೆಸರಿನಲ್ಲಿತ್ತು ಎನ್ನಲಾದ ಆ ಸ್ಥಳವನ್ನು ಬಿಎಸ್‌‌‌ಡಬ್ಲ್ಯುಎಂಎಲ್ ತನ್ನ ಸುಪರ್ದಿಗೆ ಪಡೆದಿರುವ ಯಾವುದೇ ದಾಖಲೆಗಳು ಲಭ್ಯವಿಲ್ಲ. ಹೀಗಾಗಿ, ಸುಪರ್ದಿಗೆ ಪಡೆಯದೇ ಆ ಜಮೀನಿನ ಅತಿಕ್ರಮಣ ತೆರವು ಮಾಡಿರುವುದು ಕಾನೂನುಬಾಹಿರ ಕ್ರಮವಾಗಿದೆ. ಆ ಸ್ಥಳದಲ್ಲಿ 2013ರಿಂದಲೇ ಅತಿಕ್ರಮಣ ಜಾರಿಯಲ್ಲಿದೆ ಎಂದು ನ್ಯಾಯಾಲಯಕ್ಕೆ ದಾಖಲೆ ಸಲ್ಲಿಕೆಯಾಗಿದೆ. 

 ಒಂದು ವೇಳೆ ಬಿಎಸ್‌‌‌‌ಡಬ್ಲ್ಯುಎಂಎಲ್ ಸುಪರ್ದಿಗೆ ಪಡೆದಿದ್ದರೆ ಆ ಬಗ್ಗೆ ಸಂಸ್ಥೆಯ ಅಧಿಕಾರಿಗಳು ಸರ್ಕಾರದ ಗಮನಕ್ಕೆ ತಂದಿಲ್ಲ ಎಂದು ಆರೋಪಿಸಲಾಗುತ್ತಿದೆ. ಹೀಗಾಗಿ, ತೆರವು ಕಾರ್ಯಾಚರಣೆಗೆ ಅಧಿಕೃತವಾಗಿ ಯಾವುದೇ ತಯಾರಿ ನಡೆಸಿಲ್ಲ. ಅನಧಿಕೃತ ಮತ್ತು ಖಾಸಗಿ ಮೂಲಗಳಿಂದ ತೆರವು ಕಾರ್ಯಾಚರಣೆ ಕೈಗೊಳ್ಳುವುದು ಕಾನೂನುಬಾಹಿರ. ಸೂಕ್ತ ಕಾನೂನು ಕ್ರಮ ಅನುಸರಿಸದೇ ಗುಡಿಸಲುಗಳ ತೆರವುಗೊಳಿಸುವ ಕಾರ್ಯಾಚರಣೆ ನಡೆಸಿ ಸರ್ಕಾರಕ್ಕೆ ಮುಜುಗರ ಉಂಟು ಮಾಡಿದ್ದಲ್ಲದೇ ಪುನರ್ವಸತಿಯ ಆರ್ಥಿಕ ನಷ್ಟಕ್ಕೆ ಬಿಎಸ್‌‌‌ಡಬ್ಲ್ಯುಎಂಎಲ್ ಕಾರಣವಾಗಿದೆ. ಸರ್ಕಾರಕ್ಕೆ ಆಗಿರುವ ನಷ್ಟವನ್ನು ಅಧಿಕಾರಿಗಳಿಂದಲೇ ವಸೂಲು ಮಾಡಲು ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಸ್ವಯಂ ತೆರವು ಮಾಡುವ ಅಧಿಕಾರವಿಲ್ಲ

ನೂರಾರು ಜನರು ವಾಸವಿರುವ ಮನೆಗಳನ್ನು ತೆರವುಗೊಳಿಸುವ ಸೂಕ್ಷ್ಮ ವಿಚಾರವನ್ನು ಸರ್ಕಾರಕ್ಕೆ ಗಮನಕ್ಕೆ ತರಬೇಕಿತ್ತು. ಒತ್ತುವರಿ ತೆರವು ಕಾರ್ಯಾಚರಣೆಯನ್ನು ಕಂದಾಯ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಮೂಲಕ ಕ್ರಮಬದ್ಧವಾಗಿ ನಡೆಸಬೇಕಿತ್ತು. ನಿಯಮ ಪಾಲಿಸದೆ ಏಕಪಕ್ಷೀಯ ನಿರ್ಧಾರ ಕೈಗೊಂಡಿರುವ ಆರೋಪ ಕೇಳಿ ಬಂದಿದೆ. ಬಿಎಸ್‌‌ಡಬ್ಲ್ಯುಎಂಎಲ್ ಸಂಸ್ಥೆಯು ಕಂಪನಿ ಕಾಯ್ದೆಯಡಿ ಸ್ಥಾಪಿತ ಸಂಸ್ಥೆಯಾಗಿದೆ. ಇದಕ್ಕೆ ಸ್ವಯಂ ತೆರವು ಕಾರ್ಯಾಚರಣೆ ಕೈಗೊಳ್ಳುವ ಅಧಿಕಾರ ಇಲ್ಲ. ತೆರವು ಕಾರ್ಯಾಚರಣೆಗೆ ಬಳಸಿರುವ ಯಂತ್ರಗಳು ಮತ್ತು ಕಾರ್ಮಿಕರು ಬಿಎಸ್‌‌‌ಡಬ್ಲ್ಯುಎಂಎಲ್ ಸಂಸ್ಥೆಗೆ ಒಳಪಟ್ಟಿಲ್ಲ. ಸಂಸ್ಥೆಯು ಯಾವುದೇ ಸಂಸ್ಥೆಗೆ ಯಂತ್ರಗಳು ಮತ್ತು ಕಾರ್ಮಿಕರ ಸರಬರಾಜಿಗೆ ಕಾರ್ಯಾದೇಶ ನೀಡಿಲ್ಲ ಎಂದು ಹೇಳಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಲಕ್ಷ್ಮೀ ಹೆಬ್ಬಾಳಕರ್‌ ಬ್ಯಾಟಿಂಗ್‌ಗೆ ಶಾಸಕ ಆಸೀಫ್ ಸೇಠ್ ಬೋಲ್ಡ್‌
ಮೆಟ್ರೋ ದರ ಏರಿಸಿದ್ದು ನಾವಲ್ಲ, ಕೇಂದ್ರ : ಸಿಎಂ ಸಿದ್ದರಾಮಯ್ಯ