ಒಂದನೇ ತರಗತಿ ದಾಖಲಾತಿಗೆ ಸರ್ಕಾರ 60 ದಿನಗಳ ವಯೋಮಿತಿ ಸಡಿಲಿಸಿರುವುದು 2026-27ನೇ ಸಾಲಿಗೆ ಮಾತ್ರ ಸೀಮಿತ. ಹಾಗಾಗಿ ಮುಂದೆಯೂ ಈ ರೀತಿ ವಯೋಮಿತಿ ಸಡಿಲಿಕೆ ಸಿಗುತ್ತದೆ ಎಂದು ಪೋಷಕರು ಭಾವಿಸದೆ ಎಲ್‌ಕೆಜಿ ದಾಖಲಾತಿ ವೇಳೆಯಲ್ಲೇ ಮಕ್ಕಳ ವಯಸ್ಸಿನ ವಿಚಾರದಲ್ಲಿ ಎಚ್ಚರ ವಹಿಸುವುದು ಉತ್ತಮ.
ಬೆಂಗಳೂರು : ಒಂದನೇ ತರಗತಿ ದಾಖಲಾತಿಗೆ ಸರ್ಕಾರ 60 ದಿನಗಳ ವಯೋಮಿತಿ ಸಡಿಲಿಸಿರುವುದು 2026-27ನೇ ಸಾಲಿಗೆ ಮಾತ್ರ ಸೀಮಿತ. ಹಾಗಾಗಿ ಮುಂದೆಯೂ ಈ ರೀತಿ ವಯೋಮಿತಿ ಸಡಿಲಿಕೆ ಸಿಗುತ್ತದೆ ಎಂದು ಪೋಷಕರು ಭಾವಿಸದೆ ಎಲ್‌ಕೆಜಿ ದಾಖಲಾತಿ ವೇಳೆಯಲ್ಲೇ ಮಕ್ಕಳ ವಯಸ್ಸಿನ ವಿಚಾರದಲ್ಲಿ ಎಚ್ಚರ ವಹಿಸುವುದು ಉತ್ತಮ.
ತಮ್ಮ ಮಕ್ಕಳು 1ನೇ ತರಗತಿಗೆ ಬಂದಾಗ 6 ವರ್ಷ ಪೂರ್ಣಗೊಳ್ಳದ ಕಾರಣಕ್ಕೆ ಪ್ರವೇಶ ವಂಚಿತರಾಗುವುದನ್ನು ತಪ್ಪಿಸಲು ಪ್ರಹಸನ ಪಡುವ ಬದಲು ಎಲ್‌ಕೆಜಿಗೆ ಮಗುವನ್ನು ದಾಖಲಿಸುವಾಗಲೇ 4 ವರ್ಷ ಪೂರ್ಣಗೊಂಡಿದೆಯೇ ಎಂಬುದನ್ನು ಗಮನಿಸುವುದು ಒಳ್ಳೆಯದು. ಏಕೆಂದರೆ ಕಡ್ಡಾಯ 6 ವರ್ಷ ವಯೋಮಿತಿ ಕಟ್ಟುನಿಟ್ಟಾಗಿ ಜಾರಿಯಾದರೆ ಮುಂದೆ ಎಷ್ಟೇ ಪ್ರಹಸನ ಪಟ್ಟರೂ ವಯೋಮಿತಿ ಸಡಿಲಿಕೆ ಸಿಗದೆಯೂ ಹೋಗಬಹುದು ಎನ್ನುತ್ತಾರೆ ಶಿಕ್ಷಣ ಇಲಾಖೆ ಅಧಿಕಾರಿಗಳು.
ಒಂದು ವೇಳೆ ಎಲ್‌ಕೆಜಿಗೂ ಮೊದಲೇ ನರ್ಸರಿಗೆ ಮಕ್ಕಳನ್ನು ದಾಖಲಿಸುವುದಾದರೆ 3 ವರ್ಷ ಪೂರ್ಣಗೊಂಡಿರುವ ಮಕ್ಕಳನ್ನು ದಾಖಲಿಸುವುದು ಒಳ್ಳೆಯದು. ಈ ಸಂಬಂಧ ಕಳೆದ ಸಾಲಿನಲ್ಲೇ (2025-26) ಸರ್ಕಾರವೂ ಸ್ಪಷ್ಟ ಆದೇಶ ಮಾಡಿದೆ. ಇದರಿಂದ ಮಗು ತನ್ನ 5ನೇ ವರ್ಷದಲ್ಲಿ ಎಲ್‌ಕೆಜಿಯನ್ನು, 6ನೇ ವರ್ಷದಲ್ಲಿ ಯುಕೆಜಿ ಪೂರೈಸುತ್ತದೆ. 1ನೇ ತರಗತಿಗೆ ಬರುವಷ್ಟರಲ್ಲಿ 6 ವರ್ಷ ಪೂರ್ಣಗೊಳ್ಳುವುದರಿಂದ ಪ್ರವೇಶಕ್ಕೆ ವಯೋಮಿತಿಯ ಸಮಸ್ಯೆ ಉದ್ಭವಿಸುವುದಿಲ್ಲ. ತಪ್ಪಿದರೆ ಯುಕೆಜಿಯಲ್ಲೇ ಎರಡು ವರ್ಷ ವ್ಯಾಸಂಗ ಮಾಡಬೇಕಾಗುತ್ತದೆ. ಅನಗತ್ಯವಾಗಿ ಖಾಸಗಿ ಶಾಲೆಗಳಲ್ಲಿ ದುಬಾರಿ ಶುಲ್ಕವನ್ನೂ ಪಾವತಿಸಬೇಕಾಗುತ್ತದೆ ಎಂದು ಶಿಕ್ಷಣ ತಜ್ಞರು ಸಲಹೆ ನೀಡುತ್ತಾರೆ.
ಇದೇ ವೇಳೆ ಇನ್ನು, 2026-27ನೇ ಸಾಲಿಗೆ ಅನ್ವಯಿಸಿ 1ನೇ ತರಗತಿ ದಾಖಲಾತಿಗೆ ನೀಡಿರುವ 60 ದಿನಗಳ ವಯೋಮಿತಿ ಸಡಿಲಿಕೆ ರಾಜ್ಯದ ಸಿಬಿಎಸ್‌ಇ, ಐಸಿಎಸ್‌ಇ ಶಾಲೆಗಳಿಗೂ ಅನ್ವಯಿಸುತ್ತದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಆದರೆ, ಕೆಲ ಖಾಸಗಿ ಶಾಲೆಗಳು ಪೂರ್ವ ಪ್ರಾಥಮಿಕ ತರಗತಿಗೆ ಲಭ್ಯ ಸೀಟುಗಳ ಭರ್ತಿ ಸಲುವಾಗಿ ಪೋಷಕರಿಗೆ ಈ ಬಗ್ಗೆ ಮಾಹಿತಿ ನೀಡದೆ ಮುಂದೆ 1ನೇ ತರಗತಿ ಪ್ರವೇಶಕ್ಕೆ ವಯೋಮಿತಿ ಸಮಸ್ಯೆ ಉದ್ಬವಿಸಬಹುದಾದ ಕಡಿಮೆ ವಯಸ್ಸಿನ ಮಕ್ಕಳನ್ನೂ ನರ್ಸರಿ, ಎಲ್‌ಕೆಜಿಗೆ ದಾಖಲಿಸಿಕೊಳ್ಳುತ್ತಿವೆ. ಈ ಬಗ್ಗೆ ಪೋಷಕರು ಮೊದಲೇ ಎಚ್ಚರ ವಹಿಸಿದರೆ ಮುಂದೆ ವಯೋಮಿತಿ ಸಮಸ್ಯೆ ತಪ್ಪಿಸಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ವಯೋಮಿತಿ ಸಡಿಲಿಕೆ ಸಿಬಿಎಸ್‌ಇ, ಐಸಿಎಸ್‌ಇ ಶಾಲೆಗಳಿಗೂ ಅನ್ವಯ
ಕಾನೂನಾತ್ಮಕವಾಗಿ ರಾಜ್ಯ ಸರ್ಕಾರ ಕಾಲಕಾಲಕ್ಕೆ ಹೊರಡಿಸುವ ಆದೇಶಗಳನ್ನು ಅನುಸರಿಸುವ ಷರತ್ತಿಗೆ ಒಳಪಟ್ಟು ಆ ಶಾಲೆಗಳು ನಮ್ಮಿಂದ ನಿರಾಕ್ಷೇಪಣಾ ಪತ್ರ(ಎನ್‌ಒಸಿ) ಪದ್ಧತಿ ಪಡೆದಿರುತ್ತವೆ. ಹಾಗಾಗಿ ವಯೋಮಿತ ಸಡಿಲಿಕೆ ಪಾಲಿಸುವುದು ಸಿಬಿಎಸ್‌ಇ, ಐಸಿಎಸ್‌ಇ ಹಾಗೂ ಇತರೆ ಯಾವುದೇ ಪಠ್ಯಕ್ರಮದ ಶಾಲೆಗಳಿಗೂ ಅನ್ವಯ ಎಂದು ತಿಳಿಸಿದ್ದಾರೆ.

