ಕನ್ನಡಪ್ರಭ ವಾರ್ತೆ ದಾವಣಗೆರೆ
ರಂಗಭೂಮಿ ಟ್ರಸ್ಟ್ ಕೊಡಗು ಹಾಗೂ ಪ್ರೇರಣಾ ಯುವ ಸಂಸ್ಥೆಯಿಂದ ದೇಶಭಕ್ತಿಯ ಸಾಕ್ಷಿಪ್ರಜ್ಞೆ ವೀರ ಸಾವರ್ಕರ್ ಬದುಕಿನ ಕಥಾನಕ ಕರಿನೀರ ವೀರ ನಾಟಕ ಪ್ರದರ್ಶನ ಫೆ.10 ಮತ್ತು 11ರಂದು ನಗರದ ಎಂಸಿಸಿ ಬಿ ಬ್ಲಾಕ್‌ನ ಪದ್ಮಶ್ರೀ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ನಡೆಯಲಿದೆ.ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರೇರಣಾ ಅಧ್ಯಕ್ಷ, ಮಾಜಿ ಮೇಯರ್ ಎಸ್.ಟಿ.ವೀರೇಶ, ಫೆ.10ರ ಸಂಜೆ 6ಕ್ಕೆ ರಂಗಕರ್ಮಿ ಚಿಂದೋಡಿ ಚಂದ್ರಧರ್ ಸೇರಿದಂತೆ ಅನೇಕ ಗಣ್ಯರ ನೇತೃತ್ವದಲ್ಲಿ ನಾಟಕ ಪ್ರದರ್ಶನ ಉದ್ಘಾಟನೆಗೊಳ್ಳಲಿದೆ ಎಂದರು.
ಇತ್ತೀಚಿನ ದಿನಮಾನಗಳಲ್ಲಿ ರಂಗಭೂಮಿ ಚಟುವಟಿಕೆಗಳು ಕ್ಷೀಣಿಸುತ್ತಿವೆ. ಒಂದು ಕಾಲದಲ್ಲಿ ದಾವಣಗೆರೆ ರಂಗಭೂಮಿಯ ತವರು ಮನೆಯಾಗಿದ್ದ ದಾವಣಗೆರೆಯಲ್ಲಿ ವರ್ಷವಿಡೀ ನಾಟಕ ಪ್ರದರ್ಶನಗಳು ಇರುತ್ತಿದ್ದವು. ಒಮ್ಮೆಗೆ 3-4 ಕಂಪನಿಗಳು ನಾಟಕ ಪ್ರದರ್ಶನ ಕಾಣುತ್ತಿದ್ದ ಊರು ಇದು. ಈಗ ರಂಗಭೂಮಿಗೂ ಸಂಕಷ್ಟ ಬಂದೊದಗಿದೆ. ಇಂತಹ ಪರಿಸ್ಥಿತಿಯಲ್ಲಿ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸವನ್ನು ನಮ್ಮ ದಾವಣಗೆರೆ ಜನತೆ ಮಾಡುತ್ತಾರೆಂಬ ವಿಶ್ವಾಸ ನಮಗಿದೆ ಎಂದು ವೀರೇಶ ಹೇಳಿದರು.ಎರಡೂ ದಿನ ಸಂಜೆ 6ರಿಂದ ರಂಗಾಯಣದ ಮಾಜಿ ಅಧ್ಯಕ್ಷರಾದ ಅಡ್ಡಂಡ ಕಾರ್ಯಪ್ಪ ರಚನೆ, ಪರಿಕಲ್ಪನೆ, ವಿನ್ಯಾಸ, ನಿರ್ದೇಶನದಲ್ಲಿ ಕರಿನೀರ ವೀರ ನಾಟಕ ಪ್ರದರ್ಶನವಾಗಲಿದೆ. ಸುಬ್ರಹ್ಮಣ್ಯ ಮೈಸೂರು, ಗಜಾನನ ನಾಯ್ಕ ಸಂಗೀತ ನೀಡಿದ್ದು, ಅನಿತಾ ಕಾರ್ಯಪ್ಪ ವಸ್ತ್ರ ವಿನ್ಯಾಸ ಮಾಡಿದ್ದಾರೆ. ಮಂಜುನಾಥ ಶಿಲ್ಪಿ ರಂಗ ಸಹಕಾರ ನೀಡಿದ್ದಾರೆ. ವೀರ ಸಾವರ್ಕರ್‌ರ ನೈಜ ಇತಿಹಾಸ, ದೇಶದ ಸ್ವಾತಂತ್ರ್ಯಕ್ಕೆ ಸಾವರ್ಕರ್ ನೀಡಿದ ಕೊಡುಗೆ, ಸಾಹಸಗಾಥೆಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ 2 ಗಂಟೆಗಳ ಈ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಈಗಾಗಲೇ ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ, ಧಾರವಾಡ, ಶಿಕಾರಿಪುರ ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ವೀರ ಸಾವರ್ಕರ್ ಕುರಿತ ಕರಿನೀರ ವೀರ ನಾಟಕ ಪ್ರದರ್ಶನಗೊಂಡಿದೆ. ಇದೇ ಮೊದಲ ಬಾರಿಗೆ ದಾವಣಗೆರೆಯಲ್ಲಿ ಈ ನಾಟಕ ಪ್ರದರ್ಶನ ಆಯೋಜಿಸಲಾಗಿದೆ. ನಾಟ ವೀಕ್ಷಣೆಗೆ 100 ರು. ಪ್ರವೇಶ ಶುಲ್ಕ ನಿಗದಿಪಡಿಸಿದೆ. ಪಾಸ್‌ಗಳು ಹೊಟೆಲ್ ಸವಿಡೈನ್, ಲವ್ ಫುಡ್‌ನಲ್ಲಿ ಲಭ್ಯವಾಗಲಿವೆ. ಹೆಚ್ಚಿನ ಮಾಹಿತಿಗೆ ಮೊ-98444-22677 ಅಥವಾ 99457-97433ಗೆ ಸಂಪರ್ಕಿಸುವಂತೆ ಅವರು ಮನವಿ ಮಾಡಿದರು.ಪಾಲಿಕೆ ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ, ಸದಸ್ಯ ಆರ್.ಶಿವಾನಂದ, ಪ್ರೇರಣಾ ಯುವ ಸಂಸ್ಥೆ ನಿರ್ದೇಶಖರಾದ ಅಶೋಕ, ಸಚಿನ್ ವರ್ಣೇಕರ್ ಇತರರು ಇದ್ದರು.