ಹಬ್ಬದ ಖರೀದಿಗೆ ಬರದ ಕರಿನೆರಳು

KannadaprabhaNewsNetwork | Published : Nov 13, 2023 1:15 AM

ಸಾರಾಂಶ

ಬರದ ಕರಿನೆರಳಿನ ನಡುವೆಯೂ ದೀಪಾವಳಿಯ ಸಂಭ್ರಮ ಎದ್ದು ಕಾಣುತ್ತಿದ್ದ ಖರೀದಿಗೆ ಅಲ್ಪ ಹಿನ್ನಡೆಯಾಗಿದ್ದರೂ ವ್ಯಾಪಾರ ಇದ್ದೇ ಇದೆ. ಇನ್ನು ಇದೇ ಮೊದಲ ಬಾರಿ ಪಟಾಕಿ ಮಾರಾಟಕ್ಕೆ ಅವಕಾಶ ಇಲ್ಲದಿರುವುದರಿಂದ ಪಟಾಕಿ ಸದ್ದು ಕೇಳಿಸುತ್ತಲೇ ಇಲ್ಲ.

ಕನ್ನಡಪ್ರಭ ವಾರ್ತೆ ಕೊಪ್ಪಳ

ಬರದ ಕರಿನೆರಳಿನ ನಡುವೆಯೂ ದೀಪಾವಳಿಯ ಸಂಭ್ರಮ ಎದ್ದು ಕಾಣುತ್ತಿದ್ದ ಖರೀದಿಗೆ ಅಲ್ಪ ಹಿನ್ನಡೆಯಾಗಿದ್ದರೂ ವ್ಯಾಪಾರ ಇದ್ದೇ ಇದೆ. ಇನ್ನು ಇದೇ ಮೊದಲ ಬಾರಿ ಪಟಾಕಿ ಮಾರಾಟಕ್ಕೆ ಅವಕಾಶ ಇಲ್ಲದಿರುವುದರಿಂದ ಪಟಾಕಿ ಸದ್ದು ಕೇಳಿಸುತ್ತಲೇ ಇಲ್ಲ.ಬರ ಇರುವುದರಿಂದ ಈ ಬಾರಿ ಹೂವು, ಹಣ್ಣು ಸೇರಿದಂತೆ ಎಲ್ಲವೂ ದುಬಾರಿಯಾಗಿದೆ. ಆದರೂ ಆಚರಣೆ ಬಿಡಲು ಆಗುವುದಿಲ್ಲ ಎಂದು ಖರೀದಿ ಮಾಡುತ್ತಿದ್ದಾರೆ. ಆದರೆ, ಖರೀದಿಯಲ್ಲಿ ಸ್ವಲ್ಪ ಕಡಿಮೆ ಮಾಡಿದರೂ ಖರೀದಿಯಂತೂ ಮಾಡಿಯೇ ಮಾಡುತ್ತಿರುವುದರಿಂದ ಬರದ ನಡುವೆಯೂ ಹಬ್ಬದ ಖರೀದಿ ಕಂಡು ಬಂದಿತು.ನಗರದ ತಾಲೂಕು ಕ್ರೀಡಾಂಗಣದಲ್ಲಿ ಬಾಲೆ ಕಂಬ, ಅಡಿಕೆಹೂವಿನ ಗಿಡ, ವೀಳ್ಯದೆಲೆ, ಮಾವಿನ ತೋರಣ ಸೇರಿದಂತೆ ಎಲ್ಲವೂ ಭರ್ಜರಿಯಾಗಿ ಮಾರಾಟವಾಗುತ್ತಿರುವುದು ಕಂಡು ಬಂದಿತು.ವ್ಯಾಪಾರ ಚೋಲೋ ಇಲ್ಲ ಅನ್ನಕ್ಕಾಗಲ್ಲರಿ, ನಾನು ತಂದಿದ್ದ ಒಂಡು ಲೋಡ್ ಬಾಳೆಗಿಡಗಳು ಮಾರಾಟವಾಗಿವೆ. ಹಾಗೆ ನನ್ನ ಜೊತೆಯಲ್ಲಿ ಬಂದಿದ್ದ ಒಂದು ಟ್ರ್ಯಾಕ್ಟರ್ ಮಾವಿನ ತೋರಣವು ಖರ್ಚಾಗಿವೆ. ಕಳೆದ ವರ್ಷ ನಾವು ಎರಡು ದಿನಗಳ ಕಾಲ ತೆಗೆದುಕೊಂಡಿದ್ದವು. ಈ ಬಾರಿ ಒಂದೇ ದಿನಕ್ಕೆ ಖಾಲಿಯಾಗಿವೆ ಎನ್ನುತ್ತಾರೆ ಮಹಾಂತಪ್ಪ.ಇನ್ನು ಬಟ್ಟೆ ಅಂಗಡಿಯಲ್ಲಿಯೂ ವ್ಯಾಪಾರ ಜೋರಾಗಿ ನಡೆಯುತ್ತಿತ್ತು. ನಾಲ್ಕಾರು ದಿನಗಳಿಂದ ಬಟ್ಟೆ ಅಂಗಡಿಗಳಲ್ಲಿ ಕಾಲು ಇಡಲು ಜಾಗ ಇಲ್ಲದಂತೆ ವ್ಯಾಪಾರ ನಡೆಯುತ್ತಿದ್ದವು.ರಾಜ್ಯ ಸರ್ಕಾರ ಪಟಾಕಿ ಸುಡುವುದನ್ನು ಮತ್ತು ಮಾರಾಟ ಮಾಡುವುದನ್ನು ನಿಷೇಧ ಮಾಡಿರುವುದರಿಂದ ದೀಪಾವಳಿ ನಿಮಿತ್ತ ತಲೆ ಎತ್ತುತ್ತಿದ್ದ ಪಟಾಕಿ ಅಂಗಡಿಗಳು ಈ ಬಾರಿ ಕಂಡು ಬರಲಿಲ್ಲ. ಇಡೀ ನಗರದಾದ್ಯಂತ ಎಲ್ಲಿಯೂ ಒಂದು ಪಟಾಕಿ ಅಂಗಡಿಗಳು ಇರಲಿಲ್ಲ. ಅಂಗಡಿಗಳೇ ಇಲ್ಲವಾದ್ದರಿಂದ ಖರೀದಿಯ ಪ್ರಶ್ನೆಯೇ ಬರಲಿಲ್ಲ. ಕೆಲವೊಬ್ಬರು ಪಟಾಕಿ ಅಂಗಡಿಗಳನ್ನು ಹುಡುಕಾಟ ನಡೆಸಿದ್ದು ಉಂಟು.ದೀಪಾವಳಿ ಬರುವ ಮುನ್ನವೇ ಪಟಾಕಿಗಳನ್ನು ಜಪ್ತು ಮಾಡಿ, ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡಿದ್ದನ್ನು ವಶಪಡಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಪಟಾಕಿ ಮಾರಾಟಕ್ಕೆ ಸಂಪೂರ್ಣ ಬ್ರೇಕ್ ಬಿದ್ದಿದೆ. ಇನ್ನು ಈ ಕುರಿತು ಪೊಲೀಸರು ಸಹ ಜಾಗೃತಿ ಮೂಡಿಸಿದ್ದರಿಂದ ಪಟಾಕಿಯ ಮಾರಾಟವೂ ಇರಲಿಲ್ಲ ಮತ್ತು ನಗರದಲ್ಲಿ ದೀಪಾವಳಿ ನಿಮಿತ್ಯ ಪಟಾಕಿಯನ್ನು ಸುಡುತ್ತಿರುವುದು ಕಂಡು ಬರಲಿಲ್ಲ.

Share this article