ಸಾಗರ : ತಾಲೂಕಿನ ಕಲ್ಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಳಿಕೊಪ್ಪ ಗದ್ದೆಮನೆ ಗ್ರಾಮದಲ್ಲಿ ಭಾನುವಾರ ಅರಣ್ಯ ಇಲಾಖೆ ಅಧಿಕಾರಿಗಳು ಮುಳ್ಳುಹಂದಿಯನ್ನು ಬೇಟೆಯಾಡಿ ಮಾಂಸಕ್ಕಾಗಿ ಬಳಕೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರನ್ನು ಮಾಲುಸಹಿತ ವಶಕ್ಕೆ ಪಡೆದಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಗಸ್ತಿನಲ್ಲಿದ್ದಾಗ ಗದ್ದಮನೆಯ ಈಶ್ವರ ಅವರ ಮನೆಯನ್ನು ತಪಾಸಣೆ ನಡೆಸಿದಾಗ ಮುಳ್ಳುಹಂದಿಯ ಮಾಂಸ ಮತ್ತು ಚರ್ಮ ಪತ್ತೆಯಾಗಿದೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಶ್ವರ್, ರಾಘವೇಂದ್ರ, ಪ್ರಭಾಕರ್ ಮತ್ತು ಶ್ರೀಧರ್ ಅವರನ್ನು ಬಂಧಿಸಲಾಗಿದೆ. ಬಂಧಿತರ ವಿರುದ್ದ ವನ್ಯಜೀವಿ ಸಂರಕ್ಷಣಾ ಕಾಯ್ದೆ 9, 44, 49ಬಿ ಮತ್ತು 51ರಡಿ ಪ್ರಕರಣ ದಾಖಲಿಸಲಾಗಿದೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಕುಮಾರ್ ಕೆಂಚಪ್ಪನವರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್ ಮಾರ್ಗದರ್ಶನದ ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಪಿ.ಅರವಿಂದ್, ಸಹಾಯಕ ವಲಯ ಅರಣ್ಯಾಧಿಕಾರಿ ಅಶೋಕ್, ಗಸ್ತು ಅರಣ್ಯ ಪಾಲಕರಾದ ಅಶೋಕ್, ನಮಿತಾ, ಸತೀಶ್ ಕತ್ತಿಕೈ, ವಾಹನ ಚಾಲಕ ಲೋಕೇಶ್ ಪಾಲ್ಗೊಂಡಿದ್ದರು.