ಕನ್ನಡಪ್ರಭ ವಾರ್ತೆ ಮಂಗಳೂರು
ರಾಜ್ಯೋತ್ಸವ ಪ್ರಶಸ್ತಿಯ ಮೂಲಕ ತನಗೆ ದೊರೆತ 5 ಲಕ್ಷ ರು. ಮೊತ್ತಕ್ಕೆ ಇನ್ನಷ್ಟು ಹಣ ಸೇರಿಸಿ ಚಾರ್ಮಾಡಿ ಭಾಗದಲ್ಲಿ ಇನ್ನಷ್ಟು ಜನಸೇವೆಗೆ ಅನುಕೂಲವಾಗುವಂತೆ ಆ್ಯಂಬುಲೆನ್ಸ್ ಖರೀದಿಸುವುದಾಗಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಾರ್ಮಾಡಿ ಹಸನಬ್ಬ ಹೇಳಿದ್ದಾರೆ.ಜಮೀಯ್ಯತುಲ್ ಫಲಾಹ್ ಸಂಸ್ಥೆಯ ವತಿಯಂದ ಕಂಕನಾಡಿಯ ಜಮೀಯ್ಯತುಲ್ ಫಲಾಹ್ ಸಭಾಂಗಣದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ನನ್ನ ಸೇವೆಯನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ. ಪ್ರಶಸ್ತಿಯಿಂದ ದೊರೆತ ಮೊತ್ತವನ್ನು ಕೂಡ ಸಮಾಜ ಸೇವೆಗೆ ಮೀಸಲಿಡುವುದಾಗಿ ತಿಳಿಸಿದರು.ಮುಖ್ಯ ಅತಿಥಿ, ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ. ಬಾವ ಮಾತನಾಡಿ, ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳು ಶಿಕ್ಷಣದಲ್ಲಿ ಇವತ್ತು ಮುಂದುವರಿದಿದ್ದಾರೆ. ಆದರೆ ಬಹುತೇಕ ಗಂಡು ಮಕ್ಕಳು ಉನ್ನತ ಶಿಕ್ಷಣದ ಕಡೆಗೆ ಗಮನ ನೀಡದೆ ವಿದೇಶಕ್ಕೆ ತೆರಳಿ ಗಳಿಕೆಯತ್ತ ಗಮನ ಹರಿಸಿದ್ದಾರೆ. ಇದು ಸರಿಯಲ್ಲ, ಗಂಡು ಮಕ್ಕಳು ಕೂಡ ಉನ್ನತ ಶಿಕ್ಷಣದ ಕಡೆಗೆ ಹೆಚ್ಚಿನ ಗಮನ ನೀಡಬೇಕಾಗಿದೆ. ಆ ಮೂಲಕ ಸಮುದಾಯವು ಶಿಕ್ಷಣದಲ್ಲಿ ಇನ್ನಷ್ಟು ಪ್ರಗತಿ ಸಾಧಿಸಬೇಕಾಗಿದೆ ಎಂದು ಸಲಹೆ ನೀಡಿದರು.ದ.ಕ. ಮತ್ತು ಉಡುಪಿ ಜಿಲ್ಲಾ ಜಮೀಯ್ಯತುಲ್ ಸಂಸ್ಥೆಯ ಅಧ್ಯಕ್ಷ ಶಾಹುಲ್ ಹಮೀದ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಬ್ದುಲ್ಲಾ ಪರ್ಕಳ, ಹಸನಬ್ಬ ಚಾರ್ಮಾಡಿ ಮತ್ತು ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್) ಪರವಾಗಿ ಅಧ್ಯಕ್ಷ ಮೂಸಬ್ಬ ಹಾಜಿ ಅವರನ್ನು ಸನ್ಮಾನಿಸಲಾಯಿತು.ಅವಿಭಜಿತ ಜಿಲ್ಲೆಯಲ್ಲಿ ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಸಾಧಕರಾದ ಆಯಿಷಾ ಬಾನು, ಇಬ್ರಾಹಿಂ ಅಡ್ಕಸ್ಥಳ, ಬದ್ರುದ್ದೀನ್ ಫರೀದ್ ನಗರ, ಮುಹಮ್ಮದ್ ಇಸ್ಮಾಯಿಲ್ ಜಿ., ಕೆ.ಪಿ. ಅಹ್ಮದ್, ಅಬ್ದುಲ್ ಕರೀಮ್ ಬ್ಯಾರಿ, ಮುಹಮ್ಮದ್ ರಫಿ, ಬಾವಾ ಜಾನ್ ಬೆಂಗ್ರೆ, ಕೆನರಾ ಯೂತ್ ಕೌನ್ಸಿಲ್ ಸಿವೈಸಿ ಕಾಟಿಪಳ್ಳ ಅವರನ್ನು ಅಭಿನಂದಿಸಲಾಯಿತು.
ಕಣಚೂರು ಮೆಡಿಕಲ್ ಕಾಲೇಜಿನ ಅಧ್ಯಕ್ಷ ಡಾ.ಯು.ಕೆ. ಮೋನು ಕಣಚೂರು, ಮುಸ್ಲಿಂ ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಸೌದಿ ಅರೇಬಿಯಾ ಎಕ್ಸ್‌ಪರ್ಟೈಸಿ ಕಾಂಟ್ರಾಕ್ಟ್ ಕಂಪೆನಿ ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಕರ್ನಿರೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಜಮೀಯ್ಯತುಲ್ ಫಲಾಹ್ ಸಂಸ್ಥೆಯ ಅಧ್ಯಕ್ಷ ಶಾಹುಲ್ ಹಮೀದ್ ಕೆ.ಕೆ, ಕೋಶಾಧಿಕಾರಿ ಕೆ.ಎಂ.ಸಿದ್ದೀಕ್, ಎನ್‌ಆರ್‌ಸಿಸಿ ಅಮೀರ್ ಶಾಹುಲ್ ಹಮೀದ್ ವೇದಿಕೆಯಲ್ಲಿದ್ದರು.