ಕನ್ನಡಪ್ರಭ ವಾರ್ತೆ ಶಿವಮೊಗ್ಗ
ದೀಪಾವಳಿ ಹಬ್ಬದಲ್ಲಿ ಎಣ್ಣೆಸ್ನಾನಕ್ಕೆ (ಅಭ್ಯಂಜನ) ವಿಶೇಷ ಮಹತ್ವವಿದೆ. ಅಭ್ಯಂಜನದಿಂದಾಗಿ ದೇಹದ ಮಾಂಸ- ಖಂಡಗಳಿಗೆ ಪುನಶ್ಚೇತನ ದೊರೆಯುತ್ತದೆ. ಚರ್ಮ ಕಾಂತಿಯುತವಾಗುತ್ತದೆ. ಅಲ್ಲದೇ, ಆರೋಗ್ಯ ಹಾಗೂ ಆಯುಸ್ಸು ವೃದ್ಧಿಸುತ್ತದೆ ಎಂದು ಆಯುರ್ವೇದ ಪಂಚಕರ್ಮ ತಜ್ಞ ಶ್ರೀಧರ್ ಹೇಳಿದರು.ತಾಲೂಕಿನ ದುಮ್ಮಳ್ಳಿಯ ಪ್ರಗತಿಪರ ಕೃಷಿಕ ಡಿ.ಸಿ. ರಾಜಣ್ಣ ಅನವರ ತೋಟದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪರೋಪಕಾರಂ ಕುಟುಂಬದ 7ನೇ ವಾರ್ಷಿಕೋತ್ಸವ ಮತ್ತು ದೀಪಾವಳಿ ಪ್ರಯುಕ್ತ ಅಭ್ಯಂಜನ ತೈಲಮರ್ಧನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಹುಪಯೋಗಿ ಅಭ್ಯಂಜನ:ಎಣ್ಣೆಸ್ನಾನದಿಂದ ದೇಹದ ಉಷ್ಣತೆ ನಿಯಂತ್ರಣದಲ್ಲಿ ಇರುತ್ತದೆ. ಕಾರ್ತಿಕ ಮಾಸದಲ್ಲಿ ಚಳಿ ಆರಂಭದಿಂದ ಚರ್ಮದಲ್ಲಿ ಕಾಣಿಸಿಕೊಳ್ಳುವ ಬಿರುಕುಗಳು ನಿವಾರಣೆ ಆಗುತ್ತವೆ. ದೇಹದಲ್ಲಿ ಶೇಖರಣೆಯಾದ ಜಿಡ್ಡಿನ ಅಂಶ ದೂರವಾಗಿ, ದೇಹದ ರೋಗನಿರೋಧಕ ಶಕ್ತಿ ವೃದ್ಧಿಗೆ ಸಹಕಾರಿಯಾಗುತ್ತದೆ. ದೇಹದಲ್ಲಿನ ಮಾಲಿನ್ಯಕಾರಕ, ವಿಷಕಾರಿ ಅಂಶಗಳು ಮತ್ತು ಸತ್ತ ಜೀವಕೋಶಗಳು ಚರ್ಮದಿಂದ ಬೇರೆಯಾಗುತ್ತದೆ ಎಂದು ವಿವರಿಸಿದರು.
ತಲೆ ನೋವು, ಕೈ-ಕಾಲು ನೋವು, ದೇಹದ ಸೆಳೆತದ ತೊಂದರೆಗಳು, ಅಸ್ವಸ್ಥತೆ, ಕೂದಲಿನ ಸಮಸ್ಯೆ, ದೃಷ್ಟಿದೋಷದ ಸಮಸ್ಯೆಗಳಿಂದ ನಮ್ಮನ್ನು ದೂರಗೊಳಿಸುತ್ತದೆ. ಎಣ್ಣೆಸ್ನಾನ ಮಾಡುವುದರಿಂದ, ಪಾದಗಳಿಗೆ ಎಣ್ಣೆ ಹಚ್ಚಿಕೊಳ್ಳುವುದರಿಂದ ನಿದ್ರಾಹೀನತೆ ಸಮಸ್ಯೆ ದೂರವಾಗುತ್ತದೆ. ಆದ್ದರಿಂದ ಆಗಿಂದಾಗ್ಗೆ ಅಭ್ಯಂಜನ ತೈಲಮರ್ಧನ ಉತ್ತಮ ಎಂದು ಸಲಹೆ ನೀಡಿದರು.ಪರೋಪಕಾರಂ ಕುಟುಂಬದ ಕಟ್ಟಾಳು ಶ್ರೀಧರ್ ಎನ್.ಎಂ. ಮಾತನಾಡಿ ಏಳು ವರ್ಷಗಳ ಹಿಂದೆ ದೀಪಾವಳಿ ಸಂದರ್ಭದಲ್ಲಿ ಕೇವಲ ಕೈ ಬೆರಳೆಣಿಕೆಯಷ್ಟು ಜನರಿಂದ ಪ್ರಾರಂಭವಾದ ಪರೋಪಕಾರಂ ಹಣತೆ, ಇಂದು ಅಗಾಧ ಕುಟುಂಬವಾಗಿ ಬೆಳೆದು ಅನೇಕರ ಬದುಕಿನಲ್ಲಿ ಸಾರ್ಥಕ ಜೀವನದ ಭರವಸೆಯ ಬೆಳಕಾಗಿದೆ. ಇದಕ್ಕೆಲ್ಲ ಪರೋಪಕಾರಂ ಕುಟುಂಬದ ಅನೇಕ ನಿಸ್ವಾರ್ಥ ಮನಸ್ಸು ಹಾಗೂ ಸಮಾಜದ ಬಗ್ಗೆ ಪ್ರೇಮ ತುಂಬಿರುವ ಸಜ್ಜನ ಸದಸ್ಯರೇ ಕಾರಣ ಎಂದರು.
ಅಭ್ಯಂಜನ ಮಹತ್ವ ಜಾಗೃತಿ ಉದ್ದೇಶ:ಕ್ರಿಯಾಶೀಲತೆ, ಸೃಜನಶೀಲತೆ ಹಾಗೂ ವೈವಿಧ್ಯತೆಗೆ ಹೆಸರುವಾಸಿಯಾದ ಪರೋಪಕಾರಂ ಕುಟುಂಬದಿಂದ ಈ ಬಾರಿ ಭಾರತೀಯ ಪರಂಪರೆಯಲ್ಲಿ ದೀಪಾವಳಿ ಹಬ್ಬದಂದು ಮಾಡುವ ಅಭ್ಯಂಜನ ಮರ್ಧನಕ್ಕೆ ಇರುವ ಮಹತ್ವವನ್ನು ಮನವರಿಕೆ ಮಾಡಿಕೊಡುವ ಉದ್ದೇಶದಿಂದ ವಿಶೇಷವಾದ ಅಭ್ಯಂಜನ ತೈಲ ಹಾಗೂ ಸಂಪನ್ಮೂಲ ವ್ಯಕ್ತಿಗಳಿಂದ ಅಭ್ಯಂಜನ ತೈಲ ಮರ್ಧನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಪರೋಪಕಾರಂ ಕುಟುಂಬದ ಸದಸ್ಯರಾದ ಮೆಗ್ಗಾನ್ ಆಸ್ಪತ್ರೆ ಶಸ್ತ್ರಚಿಕಿತ್ಸಕ ಡಾ. ಕಿರಣ್ ಶಂಕರ್, ನಿವೃತ್ತ ಶಿಕ್ಷಕ ಬಿ.ಪಾಶ್ವನಾಥ್, ಎನ್.ಎಂ. ರಾಘವೇಂದ್ರ, ಪ್ರಗತಿಪರ ಕೃಷಿಕ ದುಮ್ಮಳ್ಳಿ ಡಿ.ಸಿ. ರಾಜಣ್ಣ, ದಿನೇಶ್ ದಾಸ್ ವೈಷ್ಣವ್ , ರಾಯಲ್ ಲೋಹಿತ್, ಕಿರಣ್ ಆರ್., ನಿವೃತ್ತ ಯೋಧ ವೆಂಕಟೇಶ್, ಸಾರಥಿ ಶಿವಾನಂದ್, ಧನಕುಮಾರ್, ದಯಾನಂದ್, ಜಗದೀಶ್ ಮತ್ತಿತರರು ಭಾಗವಹಿಸಿದ್ದರು.- - -
-12ಎಸ್‌ಎಂಜಿಕೆಪಿ01:ಶಿವಮೊಗ್ಗ ತಾಲೂಕಿನ ದುಮ್ಮಳ್ಳಿಯಲ್ಲಿ ಪ್ರಗತಿಪರ ಕೃಷಿಕ ಡಿ.ಸಿ. ರಾಜಣ್ಣರ ತೋಟದಲ್ಲಿ ಭಾನುವಾರ ದೀಪಾವಳಿ ಪ್ರಯುಕ್ತ ಅಭ್ಯಂಜನ ತೈಲ ಮರ್ಧನ ಕಾರ್ಯಕ್ರಮ ನಡೆಯಿತು.