ಕಾರಜೋಳ ಬರೀ ಎಂಪಿ ಅಲ್ಲ, ಕ್ಯಾಬಿನೆಟ್‌ನಲ್ಲಿ ಮಿನಿಸ್ಟರ್ ಆಗ್ತಾರೆ

KannadaprabhaNewsNetwork |  
Published : Apr 17, 2024, 01:23 AM IST
ಚಿತ್ರದುರ್ಗ ಮೂರನೇ ಪುಟದ ಲೀಡ್ | Kannada Prabha

ಸಾರಾಂಶ

ಚಿತ್ರದುರ್ಗ ಲೋಕಸಭೆ ಕ್ಷೇತ್ರದಿಂದ ಗೋವಿಂದ ಕಾರಜೋಳ ಅವರನ್ನು ಗೆಲ್ಲಿಸಿ ಕಳಿಸಿಕೊಟ್ಟರೆ ಅವರು ಕೇವಲ ಎಂಪಿಯಾಗಿರುವುದಿಲ್ಲ, ಬದಲಾಗಿ ಮೋದಿ ಕ್ಯಾಬಿನೆಟ್‌ನಲ್ಲಿ ಮಿನಿಸ್ಟರ್ ಆಗಿರುತ್ತಾರೆ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.

ಚಿತ್ರದುರ್ಗ: ಚಿತ್ರದುರ್ಗ ಲೋಕಸಭೆ ಕ್ಷೇತ್ರದಿಂದ ಗೋವಿಂದ ಕಾರಜೋಳ ಅವರನ್ನು ಗೆಲ್ಲಿಸಿ ಕಳಿಸಿಕೊಟ್ಟರೆ ಅವರು ಕೇವಲ ಎಂಪಿಯಾಗಿರುವುದಿಲ್ಲ, ಬದಲಾಗಿ ಮೋದಿ ಕ್ಯಾಬಿನೆಟ್‌ನಲ್ಲಿ ಮಿನಿಸ್ಟರ್ ಆಗಿರುತ್ತಾರೆ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.

ಇಲ್ಲಿನ ಎಸ್.ಜಿ ಕನ್ವೆನ್‍ಷನ್ ಹಾಲ್‍ನಲ್ಲಿ ಮಂಗಳವಾರ ನಡೆದ ವೀರಶೈವ ಲಿಂಗಾಯಿತ ಮುಖಂಡರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗೋವಿಂದ ಕಾರಜೋಳ ಅವರಂತಹ ಅನುಭವಿಗಳ ಸೇವೆ ಚಿತ್ರದುರ್ಗ ಕ್ಷೇತ್ರಕ್ಕೆ ಬೇಕಾಗಿದೆ. ಗೋವಿಂದ ಕಾರಜೋಳ ಬಸವ ತತ್ವ ಅನುಸರಿಸಿ ಬದುಕು ನಡೆಸುತ್ತಿದ್ದಾರೆ. ಸಾವಿರಾರು ವಚನಗಳನ್ನು ಗೋವಿಂದ ಕಾರಜೋಳ ಹೇಳಬಲ್ಲರು. ಕಾರಜೋಳ ಇಲ್ಲಿ ಸ್ಪರ್ಧೆ ಮಾಡಿದ್ದು, ಚಿತ್ರದುರ್ಗ ಭಾಗದ ಜನರ ಸೌಭಾಗ್ಯ ಮೋದಿ ಹಾಗೂ ಯಡಿಯೂರಪ್ಪ ಅವರ ಆಶೀರ್ವಾದದಿಂದ ಕೇಂದ್ರದಲ್ಲಿ ಸಚಿವರಾಗುತ್ತಾರೆ ಎಂದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಹತ್ತು ವರ್ಷಗಳ ಕಾಲ ಅತ್ಯುತ್ತಮ ಆಡಳಿತ ನೀಡಿದ ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕೆಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ. ಮಧ್ಯ ಕರ್ನಾಟಕದ ಬಯಲುಸೀಮೆ ಚಿತ್ರದುರ್ಗ ಜಿಲ್ಲೆಗೆ ಅಪ್ಪರ ಭದ್ರಾ ಯೋಜನೆಗಾಗಿ ಐದು ಸಾವಿರದ ಮುನ್ನೂರು ಕೋಟಿ ರು.ಗಳನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿದೆ. ಇಂದಲ್ಲ ನಾಳೆ ಆ ಹಣ ಬಂದೆ ಬರುತ್ತದೆ. ರೈತರಿಗಾಗಿ ಜಾರಿಗೆ ತಂದ ಕಿಸಾನ್ ಸಮ್ಮಾನ್ ಯೋಜನೆಯನ್ನು ರದ್ದುಪಡಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ಎನ್ನುವುದನ್ನು ಸಾಬೀತುಪಡಿಸಿದೆ ಎಂದು ಹೇಳಿದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ರಾಜ್ಯದ 28 ಕ್ಷೇತ್ರಗಳಲ್ಲಿಯೂ ಸುತ್ತಾಡಿ ನಮ್ಮ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಈ ಶಕ್ತಿಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಕಾರ್ಯಕರ್ತರು ಮನೆ ಮನೆಗೆ ಹೋಗಿ ಕೇಂದ್ರ ಸರ್ಕಾರದ ಸಾಧನೆಗಳನ್ನು ತಿಳಿಸಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಗೆಲುವಿಗೆ ಶ್ರಮಿಸುವಂತೆ ಬಿ.ಎಸ್.ಯಡಿಯೂರಪ್ಪ ಕರೆ ನೀಡಿದರು.

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಜನರ ಸೇವೆ ಮಾಡಲು ಭಗವಂತ ಅವಕಾಶ ಕೊಟ್ಟಿದ್ದಾನೆಂದುಕೊಂಡು ಸ್ಪರ್ಧೆಗಿಳಿದಿದ್ದೇನೆ. ಜಿಲ್ಲೆಯಲ್ಲಿ ನೀರಿನ ಸಮಸ್ಯೆಯಿದೆ. ಭದ್ರಾ ಮೇಲ್ದಂಡೆಗಾಗಿಗ ಕೇಂದ್ರ ಸರ್ಕಾರ ಮಂಜೂರು ಮಾಡಿರುವ ಐದು ಸಾವಿರದ ಮುನ್ನೂರು ಕೋಟಿ ರು.ಗಳನ್ನು ತಂದೆ ತರುತ್ತೇನೆ. ಅದಕ್ಕಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿ ಪಾರ್ಲಿಮೆಂಟ್‍ಗೆ ಕಳಿಸಿಕೊಡಿ. ನಿಮ್ಮಗಳ ಪ್ರೀತಿ ವಿಶ್ವಾಸಕ್ಕೆ ಧಕ್ಕೆಯಾಗದಂತೆ ಕೆಲಸ ಮಾಡುತ್ತೇನೆ. ಮತ್ತೊಮ್ಮೆ ನರೇಂದ್ರಮೋದಿರವರ ಕೈಬಲಪಡಿಸಿ ದೇಶದ ಪ್ರಧಾನಿಯನ್ನಾಗಿಸಿ ಎಂದು ಅಭ್ಯರ್ಥಿ ಗೋವಿಂದ ಕಾರಜೋಳ ವಿನಂತಿಸಿದರು.

ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಮಾತನಾಡಿ, ಜಗತ್ತು ಕಂಡ ಅಭಿವೃದ್ದಿಯ ಹರಿಕಾರ ನರೇಂದ್ರಮೋದಿ ಮೂರನೆ ಬಾರಿಗೆ ದೇಶದ ಪ್ರಧಾನಿಯಾಗಲೇಬೇಕಾಗಿರುವುದರಿಂದ ಇದೆ ತಿಂಗಳ 26 ರಂದು ನಡೆಯುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳರನ್ನು ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ ಎಂದು ವೀರಶೈವ ಲಿಂಗಾಯಿತ ಮುಖಂಡರುಗಳಲ್ಲಿ ಮನವಿ ಮಾಡಿದರು.

ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಪ್ರಾಸ್ತಾವಿಕ ಮಾತನಾಡಿದರು.ಮಾಜಿ ಶಾಸಕರುಗಳಾದ ಎಸ್.ಕೆ.ಬಸವರಾಜನ್, ನೇರ್ಲಗುಂಟೆ ತಿಪ್ಪೇಸ್ವಾಮಿ, ಚುನಾವಣೆ ಸಂಚಾಲಕ ಎಸ್.ಲಿಂಗಮೂರ್ತಿ, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಕೆ.ಟಿ.ಕುಮಾರ ಸ್ವಾಮಿ, ಮಾಧುರಿ ಗಿರೀಶ್, ಸುರೇಶ್ ಸಿದ್ದಾಪುರ, ಸಂಪತ್‍ ಕುಮಾರ್, ಬಾಳೆಕಾಯಿ ರಾಂದಾಸ್ ಸೇರಿದಂತೆ ಹಲವು ಮುಖಂಡರುಗಳು ವೇದಿಕೆಯಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಈ ಸಾಲಲ್ಲಿ ಅಬಕಾರಿ ರಾಜಸ್ವ ಟಾರ್ಗೆಟ್‌ ಕಷ್ಟ? 11 ತಿಂಗಳಲ್ಲಿ ಮದ್ಯ ಮಾರಾಟ ಗಣನೀಯ ಕುಸಿತ
ನಾಳೆ ಸಿದ್ದರಾಮಯ್ಯ ಬಜೆಟ್‌ : ವಲಯವಾರು ನಿರೀಕ್ಷೆಗಳೇನು?