ಕಾರ್ಕಳ: ಭುವನೇಂದ್ರ ಕಾಲೇಜಿನ ಐಕ್ಯೂಎಸಿ ಆಶ್ರಯದಲ್ಲಿ, ಲಲಿತ ಕಲಾ ಸಂಘ ಮತ್ತು ಮಾಹೆಯ ಸಾಂಸ್ಕೃತಿಕ ಸಮನ್ವಯ ಸಮಿತಿಯ ಸಹಯೋಗದೊಂದಿಗೆ ಸ್ಪಿಕ್ ಮೆಕೆ ವತಿಯಿಂದ ಒಡಿಸ್ಸಿ ಶಾಸ್ತ್ರೀಯ ನೃತ್ಯ ಪ್ರದರ್ಶನವು ಭುವನೇಂದ್ರ ಕಾಲೇಜಿನ ಶ್ರೀರಾಮಕೃಷ್ಣ ಸಭಾಂಗಣದಲ್ಲಿ ಜರುಗಿತು.ಕಾರ್ಯಕ್ರಮ ಉದ್ಘಾಟಿಸಿದ ಅಂತಾರಾಷ್ಟ್ರೀಯ ಖ್ಯಾತಿಯ ಒಡಿಸ್ಸಿ ನೃತ್ಯಗುರು ರಾಹುಲ್ ಆಚಾರ್ಯ ಮಾತನಾಡಿ, ಪುರಾತನ ನಾಗರಿಕತೆಯಿಂದಲೇ ನೃತ್ಯಪ್ರಕಾರಗಳು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗಗಳಾಗಿವೆ. ನವರಸಗಳನ್ನು ಪ್ರತಿಬಿಂಬಿಸುವ ಆಂಗಿಕ ಅಭಿನಯದ ಒಡಿಸ್ಸಿ ನೃತ್ಯವು ಭಾರತದ ಪ್ರಮುಖ ಶಾಸ್ತ್ರೀಯ ನೃತ್ಯಪ್ರಕಾರವೆಂದು ಜಗತ್ತಿನ ಒಪ್ಪಿಗೆ ಪಡೆದಿದೆ. ಒಡಿಶಾದ ದೇವಾಲಯಗಳಲ್ಲಿ ಉದ್ಭವಿಸಿದ ಈ ನೃತ್ಯ ಇಂದು ಜಗತ್ತಿನೆಲ್ಲೆಡೆ ಪ್ರಸಾರಗೊಂಡಿದೆ. ಆಧ್ಯಾತ್ಮಿಕ ನೆಲೆಯಲ್ಲಿ ವಿಶೇಷ ಸ್ಥಾನ ಹೊಂದಿರುವ ಈ ನೃತ್ಯ, ಕರಾವಳಿಯ ಈ ಭಾಗದಲ್ಲೂ ಪ್ರಸ್ತುತಗೊಳ್ಳುತ್ತಿರುವುದು ನನಗೆ ವಿಶೇಷ ಸಂತೋಷ ಎಂದರು.
ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ. ಈಶ್ವರ ಭಟ್, ಐಕ್ಯೂಎಸಿ ಸಂಯೋಜಕ ಪ್ರೊ. ಲಕ್ಷ್ಮೀ ನಾರಾಯಣ ಕೆ.ಎಸ್., ಲಲಿತ ಕಲಾ ಸಂಘದ ಸಹಸಂಯೋಜಕರಾದ ಶಿವಾನಂದ ನಾಯಕ್ ಉಪಸ್ಥಿತರಿದ್ದರು.ಲಲಿತ ಕಲಾ ಸಂಘದ ಸಂಯೋಜಕರಾದ ಪ್ರೊ. ನಂದಕಿಶೋರ್ ಕೆ. ಪ್ರಾಸ್ತಾವಿಕ ಮಾತನಾಡಿದರು. ಅಂತಿಮ ಬಿಕಾಂ ವಿದ್ಯಾರ್ಥಿನಿ ಪೂರ್ವಿ ಆಚಾರ್ಯ ನಿರೂಪಿಸಿದರು. ಅಕ್ಷತಾ ಕೋಟ್ಯಾನ್ ಸ್ವಾಗತಿಸಿದರು. ಅನನ್ಯ ಮಾಧವ್ ವಂದಿಸಿದರು.
ರಾಹುಲ್ ಆಚಾರ್ಯ ಅವರಿಂದ ಒಡಿಸ್ಸಿ ಶಾಸ್ತ್ರೀಯ ನೃತ್ಯ ಪ್ರದರ್ಶನ ನಡೆಯಿತು.