ಕಾರ್ಕಳದ ಪರಶುರಾಮ ಮೂರ್ತಿ ರಾತ್ರೋರಾತ್ರಿ ತೆರವು: ಕಾಂಗ್ರೆಸ್‌ ಆರೋಪ

KannadaprabhaNewsNetwork | Published : Oct 14, 2023 1:00 AM

ಸಾರಾಂಶ

ಕಾರ್ಕಳದ ಉಮಿಕಲ್ಲ್‌ ಬೆಟ್ಟದಲ್ಲಿದ್ದ ಪರಶುರಾಮ ಮೂರ್ತಿ ತೆರವು- ಕಾಂಗ್ರೆಸ್ಸ್‌ ಆರೋಪ
ಕನ್ನಡಪ್ರಭ ವಾರ್ತೆ ಕಾರ್ಕಳ ಕಾರ್ಕಳದ ಬೈಲೂರಿನ ವಿವಾದಿತ ಪರಶುರಾಮ ಮೂರ್ತಿಯನ್ನು ಪ್ಲಾಸ್ಟಿಕ್‌ನಿಂದ ಮುಚ್ಚಿಟ್ಟ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದರೆ, ಆ ಮೂರ್ತಿಯನ್ನೇ ಅಲ್ಲಿಂದ ತೆರವು ಮಾಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಆ ಮೂಲಕ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಕೆಸರೆರಚಾಟ ಆರಂಭವಾಗಿದೆ. ಬೆಟ್ಟದ ಮೇಲೆ ಕಾಮಗಾರಿಯನ್ನು ಸುಗಮವಾಗಿ ನಡೆಸುವ ಸಲುವಾಗಿ ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಲಾಗಿದೆ. ಪ್ರವಾಸಿಗರಿಗೆ, ವೀಕ್ಷಕರಿಗೆ ನವೆಂಬರ್ ತಿಂಗಳ ಅಂತ್ಯದವರೆಗೆ ಬೆಟ್ಟಕ್ಕ ತೆರಳದಂತೆ ನಿರ್ಬಂಧಿಸಿ ಕಾರ್ಕಳ ತಹಸೀಲ್ದಾರ್‌ ಆದೇಶ ಹೊರಡಿಸಿದ್ದಾರೆ. ಇನ್ನೊಂದೆಡೆ ಕಾಮಗಾರಿ ಅವ್ಯವಹಾರದ ಬಗ್ಗೆ ಪ್ರತಿಭಟನೆ ನಡೆಸಲು ಅ.14ರಂದು ಕಾಂಗ್ರೆಸ್ ಪಕ್ಷದ ಸಭೆ ಕರೆಯಲಾಗಿದೆ. ಇತ್ತೀಚೆಗೆ ಉಡುಪಿ ಜಿಲ್ಲೆ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು, ಪರಶುರಾಮ ಥೀಮ್ ಪಾರ್ಕ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪರಶುರಾಮ ವಿವಾದಿತ ಮೂರ್ತಿಯ ಕಾಲಿನ ಭಾಗ ಅಸಲಿಯಾಗಿದ್ದು ಮೇಲಿನ ಭಾಗವು ನಕಲಿಯಾಗಿದೆ ಎಂದು ಹೇಳಿದ್ದರು. ಪರಶುರಾಮ ಥೀಮ್ ಪಾರ್ಕ್ ನಿರ್ಮಾಣಕ್ಕೆ ತಡೆ ಅರ್ಜಿ ತಿರಸ್ಕಾರ: ಪರಶುರಾಮ ಥೀಮ್ ಪಾರ್ಕನ್ನು ಗೋಮಾಳ ಜಾಗದಲ್ಲಿ ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿ ಇದಕ್ಕೆ ತಡೆ ನೀಡಬೇಕು ಎಂದು ಪ್ರಮೋದ್ ಮುತಾಲಿಕ್ ಮತ್ತು ಬೆಂಗಳೂರಿನ ಎಸ್. ಭಾಸ್ಕರನ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಪೀಠ ಅರ್ಜಿಯನ್ನು ವಜಾ ಮಾಡಿತ್ತು. ಪ್ರಮೋದ್ ಮುತಾಲಿಕ್ ಧಾರವಾಡ ಹಾಗೂ ಎಸ್. ಭಾಸ್ಕರನ್ ಬೆಂಗಳೂರಿನವರು. ಕಲ್ಪನೆಗಳ ಆಧಾರದಲ್ಲಿ ಈ ಅರ್ಜಿ ಹಾಕಲಾಗಿದೆ. ಮೂರ್ತಿ ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ಈ ಮೊದಲೇ ಆಕ್ಷೇಪ ಹಾಕದೆ, ಕಾಮಗಾರಿ ಮುಗಿಯುವ ಹಂತದಲ್ಲಿ ತಡವಾಗಿ ಕೋರ್ಟ್‌ಗೆ ಬಂದಿದ್ದಾರೆ ಎಂದು ಪೀಠ ಹೇಳಿತ್ತು. ಸಮಾನ ಮನಸ್ಕರ ತಂಡದಿಂದ ಪ್ರತಿಭಟನೆ: ಕಾರ್ಕಳ ಪರಶುರಾಮ ಪ್ರತಿಮೆಯ ನೈಜತೆ ಹಾಗೂ ಸಾರ್ವಜನಿಕವಾಗಿ ಗುಣಮಟ್ಟ ಪರಿಶೀಲನೆಯನ್ನು ಸಾರ್ವಜನಿಕ ಸಮ್ಮುಖದಲ್ಲಿ ಮಾಡಬೇಕು ಅದರ ಸತ್ಯಾಸತ್ಯತೆಯನ್ನು ಕಾರ್ಕಳ ಜನತೆಗೆ ತಿಳಿಸಬೇಕು ಎಂದು ಸಮಾನ ಮನಸ್ಕರ ತಂಡವೊಂದು ಕಾರ್ಕಳ ತಹಸೀಲ್ದಾರ್‌ ಕಚೇರಿ ಹಾಗೂ ಪರಶುರಾಮ ಥೀಮ್ ಪಾರ್ಕ್ ಬಳಿ ಕಳೆದ ತಿಂಗಳು ಪ್ರತಿಭಟನೆ ನಡೆಸಿತ್ತು. ರಾತೋರಾತ್ರಿ ಪರಶುರಾಮ ಮೂರ್ತಿಯನ್ನೇ ವಾಹನ ಮೂಲಕ ತೆಗೆದುಕೊಂಡು ಹೋಗಲಾಗಿದೆ. ಜನರ ಧಾರ್ಮಿಕ ಭಾವನಗೆ ಧಕ್ಕೆ ತರಲಾಗಿದೆ. ಸಾರ್ವಜನಿಕರಿಗೆ ನಕಲಿ ಮೂರ್ತಿಯ ರಹಸ್ಯ ಕೆಲವೇ ದಿನಗಳಲ್ಲಿ ಬಯಲಾಗಲಿದೆ. ಇನ್ನೊಂದೆಡೆ ಕಾಮಗಾರಿ ಅವ್ಯವಹಾರದ ಬಗ್ಗೆ ಪ್ರತಿಭಟನೆ ನಡೆಸಲು ಅ.14 ರಂದು ಕಾಂಗ್ರೇಸ್ ಸಭೆ ಕರೆದಿದೆ ಎಂದು ಬ್ಲಾಕ್ ಕಾಂಗ್ರೆಸ್‌ ವಕ್ತಾರ ಶುಭದರಾವ್ ಹೇಳಿದ್ದಾರೆ.

Share this article