ಕಾರ್ಕಳ: ಹದಗೆಟ್ಟ ರಸ್ತೆ, ಸಂಚಾರ ಸಂಕಷ್ಟ

KannadaprabhaNewsNetwork |  
Published : Jul 08, 2026, 02:45 AM IST
ಆಕ್ರೋಶ | Kannada Prabha

ಸಾರಾಂಶ

ಕಾರ್ಕಳ ಪುರಸಭೆ ವ್ಯಾಪ್ತಿಯ ಬಂಡಿಮಠ ಕಲ್ಲೊಟ್ಟೆ ಪೆರುವಾಜೆ ಕಾರ್ಕಳ ರಸ್ತೆ ಹಾಗೂ ಕಾರ್ಕಳ-ತೆಳ್ಳಾರು ಸಂಪರ್ಕಿಸುವ ಅನಂತಶಯನದಿಂದ ಗುಡ್ಡೆಯಂಗಡಿ ವರೆಗಿನ ಮುಖ್ಯ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸವಾರರು ಮತ್ತು ಪಾದಚಾರಿಗಳು ನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ.

ಕಾರ್ಕಳ: ಕಾರ್ಕಳ ಪುರಸಭೆ ವ್ಯಾಪ್ತಿಯ ಬಂಡಿಮಠ ಕಲ್ಲೊಟ್ಟೆ ಪೆರುವಾಜೆ ಕಾರ್ಕಳ ರಸ್ತೆ ಹಾಗೂ ಕಾರ್ಕಳ-ತೆಳ್ಳಾರು ಸಂಪರ್ಕಿಸುವ ಅನಂತಶಯನದಿಂದ ಗುಡ್ಡೆಯಂಗಡಿ ವರೆಗಿನ ಮುಖ್ಯ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸವಾರರು ಮತ್ತು ಪಾದಚಾರಿಗಳು ನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ.

ನಿರಂತರ ಸುರಿದ ಮಳೆಯಿಂದ ರಸ್ತೆ ಹಲವು ಕಡೆ ಕುಸಿದು, ಸುಮಾರು ಒಂದೂವರೆ ಅಡಿ ಆಳದ ಹೊಂಡಗಳು ನಿರ್ಮಾಣಗೊಂಡಿವೆ. ರಸ್ತೆ ಸಂಪೂರ್ಣ ಹಾಳಾಗಿರುವುದರಿಂದ ದ್ವಿಚಕ್ರ ವಾಹನ ಸವಾರರು ಜೀವಭಯದಲ್ಲೇ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸಣ್ಣ ವಾಹನಗಳು ಮಾತ್ರವಲ್ಲದೆ ಬಸ್‌ಗಳ ಸಂಚಾರವೂ ತೀವ್ರ ಅಸೌಕರ್ಯಕ್ಕೆ ಒಳಗಾಗಿದ್ದು, ಪ್ರಯಾಣಿಕರು ಪ್ರತಿದಿನ ತೊಂದರೆ ಅನುಭವಿಸುತ್ತಿದ್ದಾರೆ.

ಈ ರಸ್ತೆಯಲ್ಲಿ ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ಕಾರ್ಕಳ ನಗರವನ್ನು ತೆಳ್ಳಾರು ಸೇರಿದಂತೆ ಹಲವು ಗ್ರಾಮಗಳಿಗೆ ಸಂಪರ್ಕಿಸುವ ಪ್ರಮುಖ ಮಾರ್ಗವಾಗಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಸಾರ್ವಜನಿಕರು ಇದೇ ರಸ್ತೆಯನ್ನು ಅವಲಂಬಿಸಿದ್ದು, ರಸ್ತೆಯ ದುಸ್ಥಿತಿಯಿಂದ ಶಾಲಾ ಮಕ್ಕಳ ಸುರಕ್ಷಿತ ಸಂಚಾರಕ್ಕೂ ಧಕ್ಕೆಯಾಗಿದೆ.ರಸ್ತೆಯ ಎರಡೂ ಬದಿಗಳಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆನೀರು ರಸ್ತೆಯ ಮೇಲೆಯೇ ನಿಂತು ಡಾಂಬರು ಸಂಪೂರ್ಣ ಕೊಚ್ಚಿಹೋಗಿದೆ. ಹೊಂಡಗಳಲ್ಲಿ ನೀರು ತುಂಬಿರುವುದರಿಂದ ಅವುಗಳ ಆಳ ವಾಹನ ಸವಾರರಿಗೆ ಗೋಚರಿಸದೆ ಅಪಘಾತ ಸಂಭವಿಸುವ ಭೀತಿ ಎದುರಾಗಿದೆ. ಪಾದಚಾರಿಗಳು ಕೂಡ ರಸ್ತೆಯಲ್ಲಿ ನಡೆಯಲು ಪರದಾಡುವಂತಾಗಿದೆ.ಪುರಸಭೆ ವಿರುದ್ಧ ಆಕ್ರೋಶ: ಸ್ಥಳೀಯರು ಹಾಗೂ ವಾಹನ ಸವಾರರು ಪುರಸಭೆಯ ನಿರ್ಲಕ್ಷ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲವು ತಿಂಗಳುಗಳಿಂದ ರಸ್ತೆ ಸಂಪೂರ್ಣ ಹದಗೆಟ್ಟಿದ್ದರೂ ಪುರಸಭೆ ಯಾವುದೇ ಶಾಶ್ವತ ದುರಸ್ತಿ ಕಾಮಗಾರಿ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ. ಮಳೆಯಿಂದ ಹೊಂಡಗಳು ಮತ್ತಷ್ಟು ಆಳವಾಗಿದ್ದು, ಪ್ರತಿದಿನ ಅಪಘಾತದ ಭೀತಿಯಲ್ಲೇ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲಾ ಮಕ್ಕಳು, ವೃದ್ಧರು ಹಾಗೂ ದ್ವಿಚಕ್ರ ವಾಹನ ಸವಾರರು ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ. ಅಪಘಾತ ಸಂಭವಿಸುವ ಮೊದಲು ಅಧಿಕಾರಿಗಳು ಎಚ್ಚೆತ್ತುಕೊಂಡು ರಸ್ತೆ ದುರಸ್ತಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರ ಸುರಕ್ಷತೆಯನ್ನು ಕಡೆಗಣಿಸದೆ, ಹೊಂಡಗಳನ್ನು ಕೂಡಲೇ ಮುಚ್ಚಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಗಿಡ ನೆಟ್ಟು ಕಾಂಗ್ರೆಸ್ ಪ್ರತಿಭಟನೆ: ಕಾರ್ಕಳದ ಬಂಡಿಮಠದಿಂದ ಕಲ್ಲೊಟ್ಟೆ–ಪೆರುವಾಜೆ ಮುಖ್ಯರಸ್ತೆಯ ದುರವಸ್ಥೆಯನ್ನು ಖಂಡಿಸಿ ಕಾಂಗ್ರೆಸ್ ಮುಖಂಡೆ ಪ್ರತಿಮಾ ರಾಣೆ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರಸ್ತೆಯ ಮಧ್ಯೆ ಬಾಳೆಗಿಡ ನೆಟ್ಟು ಪ್ರತಿಭಟನೆ ನಡೆಸಿದರು. *ಪುರಸಭಾ ವ್ಯಾಪ್ತಿಯ ರಸ್ತೆ ಅಭಿವೃದ್ಧಿಗಾಗಿ ₹3.5 ಕೋಟಿ ಹಾಗೂ ಡಾಂಬರೀಕರಣಕ್ಕೆ ₹ 2 ಕೋಟಿ ಮೀಸಲಿರಿಸಲಾಗಿದೆ. ಮಳೆಯಿಂದ ಕಾಮಗಾರಿ ನಡೆಸಲು ಸಾಧ್ಯವಿಲ್ಲ. ರಸ್ತೆ ಹೊಂಡ ಮುಚ್ಚುವ ಕಾರ್ಯ ಪುರಸಭೆ ಮಾಡಬೇಕು. -ವಿ. ಸುನಿಲ್ ಕುಮಾರ್, ಶಾಸಕ, ಕಾರ್ಕಳ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಬಿ ಜಿ ರಾಮ್ ಜಿ ಯೋಜನೆ ಯಶಸ್ವಿಗೆ ಪಿಡಿಒಗಳಿಗೆ ಸಿಇಒ ಸೂಚನೆ
ಎಪಿಎಲ್ ಕಾರ್ಡ್‌ದಾರರಿಗೂ ‘ಆಯುಷ್ಮಾನ್’ ವಿಸ್ತರಣೆ: ಖಾದರ್