)
ಕಾರ್ಕಳ: ವಿಪರೀತ ಉರಿ ಬಿಸಿಲು ಮತ್ತು ಭಾರಿ ಸೆಖೆಯಿಂದ ಕಂಗೆಟ್ಟಿದ್ದ ಕಾರ್ಕಳ ಹಾಗೂ ಹೆಬ್ರಿ ತಾಲೂಕಿನ ಜನತೆಗೆ ಶುಕ್ರವಾರ ಸಂಜೆ ಸುರಿದ ಮಳೆ ನೆಮ್ಮದಿ ತಂದಿದೆ. ಕಾರ್ಕಳ ತಾಲೂಕಿನ ಅಜೆಕಾರು, ಶಿರ್ಲಾಲು, ಕೆರುವಾಶೆ, ಮಾಳ, ನೂರಲ್ ಬೆಟ್ಟು, ಹೆರ್ಮುಂಡೆ ಹಾಗೂ ಬಜಗೋಳಿ ಭಾಗಗಳಲ್ಲಿ ಗುಡುಗು ಮತ್ತು ಮಿಂಚಿನ ಸಹಿತ ಭಾರಿ ಮಳೆಯಾಗಿದ್ದು, ಸುಡು ಬಿಸಿಲಿನಿಂದ ಕಾದಿದ್ದ ಭೂಮಿಯನ್ನು ತಂಪಾಗಿಸಿದೆ. ಬೆಳಿಗ್ಗೆಯಿಂದಲೇ ಸೆಖೆಯ ಬೇಗೆಯಲ್ಲಿ ಬೆಂದಿದ್ದ ಜನರಿಗೆ ಸಂಜೆ ವೇಳೆಗೆ ಸುರಿದ ಮಳೆ ಹೊಸ ಚೈತನ್ಯ ನೀಡಿದೆ.ಹೆಬ್ರಿ ತಾಲೂಕಿನ ಮುನಿಯಾಲು, ಅಂಡಾರು, ಮುದ್ರಾಡಿ, ಕಬ್ಬಿನಾಲೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲೂ ಉತ್ತಮ ಮಳೆಯಾದ ವರದಿಯಾಗಿದೆ. ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣ ಕಂಡುಬಂದಿದ್ದು, ಸಂಜೆ ವೇಳೆಗೆ ಏಕಾಏಕಿ ಆರಂಭವಾದ ಮಳೆಯು ಕೆಲ ಕಾಲ ಜೋರಾಗಿ ಸುರಿಯಿತು. ಕಳೆದ ಕೆಲವು ದಿನಗಳಿಂದ ಹೆಚ್ಚಾದ ತಾಪಮಾನದಿಂದಾಗಿ ಜನಜೀವನ ತೊಂದರೆಗೊಳಗಾಗಿತ್ತು ಮತ್ತು ಕುಡಿಯುವ ನೀರಿನ ಆತಂಕವೂ ಎದುರಾಗಿತ್ತು. ಈಗ ಸುರಿದಿರುವ ಈ ಮಳೆಯು ವಾತಾವರಣವನ್ನು ತಂಪಾಗಿಸುವ ಮೂಲಕ ಬೇಸಿಗೆಯ ದಗೆಯನ್ನು ದೂರ ಮಾಡಿದೆ. ಈ ಮಳೆಯಿಂದಾಗಿ ಅಡಕೆ, ತೆಂಗಿನ ತೋಟಗಳಿಗೂ ಜೀವ ಕಳೆ ಬಂದಂತಾಗಿದ್ದು, ಕೃಷಿಕರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಒಟ್ಟಾರೆಯಾಗಿ ಕಾರ್ಕಳ ಮತ್ತು ಹೆಬ್ರಿ ಪರಿಸರದ ಜನತೆ ವರುಣನ ಆಗಮನದಿಂದ ನಿಟ್ಟುಸಿರು ಬಿಡುವಂತಾಗಿದೆ.
ಕಡ್ತಲ ಗ್ರಾಮದ ಆನಂದ ನಾಯಕ್ ಅವರ ಅಡಕೆ ತೋಟದಲ್ಲಿ ಹಲವು ಅಡಕೆ ಮರಗಳು ಮುರಿದುಬಿದ್ದು, ಅಂದಾಜು 10,000 ರು.ನಷ್ಟು ನಷ್ಟ ಉಂಟಾಗಿದೆ.