ವಿಗ್ರಹ ಶಿಲ್ಪಿ, ನಿರ್ಮಿತಿ ಯೋಜನಾ ನಿರ್ದೇಶಕ, ಇಂಜಿನಿಯರ್ ಮೇಲೆ ಚಾರ್ಚ್ !ಕನ್ನಡಪ್ರಭ ವಾರ್ತೆ ಕಾರ್ಕಳಇಲ್ಲಿನ ಬೈಲೂರು ಗ್ರಾಮದ ಉಮಿಕಲ್ ಬೆಟ್ಟದ ಮೇಲೆ 10 ಕೋಟಿ ರು. ವೆಚ್ಚದಲ್ಲಿ ಸ್ಥಾಪಿಸಲಾಗಿರುವ 35 ಅಡಿ ಎತ್ತರದ ಪರಶುರಾಮ ದೇವರ ವಿಗ್ರಹ ಕೊನೆಗೂ ನಕಲಿ ಎಂದು ಸಾಬೀತಾಗಿದ್ದು, ಈ ಬಗ್ಗೆ ಶಿಲ್ಪಿ ಮತ್ತು ಉಡುಪಿ ನಿರ್ಮಿತಿ ಕೇಂದ್ರದ ಇಬ್ಬರು ಅಧಿಕಾರಿಗಳ ಮೇಲೆ ಕಾರ್ಕಳ ತಾಲೂಕು ನ್ಯಾಯಾಲಯದಲ್ಲಿ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿದೆ.2024ರಲ್ಲಿ ಕೃಷ್ಣ ಶೆಟ್ಟಿ ನೀಡಿದ ದೂರಿನಂತೆ ಈ ಪ್ರಕರಣದ ತನಿಖೆ ನಡೆಯತ್ತಿದೆ. ಬೆಂಗಳೂರಿನ ಕ್ರಿಶ್ ಆರ್ಟ್ ವರ್ಲ್ಡ್ ನ ಶಿಲ್ಪಿ ಕೃಷ್ಣ ನಾಯ್ಕ್ ಅವರು ಕಂಚಿನ ಪರಶುರಾಮ್ ಮೂರ್ತಿಯನ್ನು ಸ್ಥಾಪಿಸಲು ಉಡುಪಿ ನಿರ್ಮಿತಿ ಕೇಂದ್ರದಿಂದ ಹಣ ಪಡೆದುಕೊಂಡಿದ್ದರು. ಆದರೆ ಅವರು ಕಂಚಿನ ಮೂರ್ತಿಯ ಬದಲಿಗೆ ಹಿತ್ತಾಳೆಯಿಂದ ವಿಗ್ರಹ ನಿರ್ಮಿಸಿದ್ದಾರೆ ಎಂದು ವರದಿ ನೀಡಿದ್ದಾರೆ.ಈ ಹಿನ್ನೆಲೆಯಲ್ಲಿ ನಿರ್ಮಿತಿಯ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಮತ್ತು ಎಂಜಿನಿಯರ್ ಸಚಿನ್ ವೈ. ಕುಮಾರ್ ಅವರು ವಿಗ್ರಹ ನಿರ್ಮಾಣದ ವರ್ಕ್ ಆರ್ಡರ್‌ನಲ್ಲಿದ್ದ ಷರತ್ತುಗಳನ್ನು ಪಾಲಿಸಿಲ್ಲ ಹಾಗೂ ವಿಗ್ರಹದ ಸೊಂಟದಿಂದ ಮೇಲ್ಭಾಗವನ್ನು ಉಮ್ಮಿಕಲ್ ಬೆಟ್ಟದಿಂದ ತೆಗೆದುಕೊಂಡು ಹೋಗಿ ಮಣಿಪಾಲದಲ್ಲಿರುವ ನಿರ್ಮಿತಿ ಕೇಂದ್ರದ ಶೆಡ್‌ನಲ್ಲಿ ಇರಿಸಿದ್ದರು ಮತ್ತು ಅದನ್ನು ದುರಸ್ತಿ ಮಾಡಲು ಶಿಲ್ಪಿ ಕೃಷ್ಣ ನಾಯ್ಕ್ ಅವರಿಗೆ ಹಸ್ತಾಂತರ ಮಾಡಿದ್ದಾಗಿ, ತಪ್ಪು ಮಾಹಿತಿಯನ್ನು ನೀಡಿದ್ದರು.ಇದೀಗ ಕಾರ್ಕಳ ಪೊಲೀಸರು ಶಿಲ್ಪಿ ಕೃಷ್ಣ ನಾಯ್ಕ, ನಿರ್ಮಿತಿ ಕೇಂದ್ರದ ಅರುಣ ಕುಮಾರ್ ಹಾಗೂ ಸಚಿನ್ ವೈ. ಕುಮಾರ್ ಅವರು ಅಪರಾಧಿಕ ಒಳಸಂಚು, ನಂಬಿಕೆ ದ್ರೋಹ ಮತ್ತು ವಂಚನೆ ಎಸಗಿ, ಸಾಕ್ಷಿ ನಾಶ ಮಾಡಿರುತ್ತಾರೆ ಎಂದು ಅವರ ವಿರುದ್ದ ಕಾರ್ಕಳ ತಾಲೂಕು ನ್ಯಾಯಾಲಯಕ್ಕೆ 1231 ಪುಟಗಳ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದಾರೆ.