ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು
ಬಡವರ ಹಾಗೂ ಮಹಿಳೆಯರ ಸಬಲೀಕರಣಕ್ಕೆ ರಾಜ್ಯ ಸರ್ಕಾರ ವಿವಿಧ ಯೋಜನೆ ಹಾಗೂ ಗ್ಯಾರಂಟಿಗಳನ್ನು ನೀಡಿದೆ. ಈ ಗ್ಯಾರಂಟಿಗಳು ನೇರವಾಗಿ ಫಲಾನುಭವಿಗಳಿಗೆ ತಲಪುತ್ತಿದ್ದು, ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯೂ ಸಂಪೂರ್ಣ ಯಶಸ್ವಿಯಾಗಿದೆ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.ಪಟ್ಟಣದ ಕೇಂದ್ರ ಬಸ್ ನಿಲ್ದಾಣದಲ್ಲಿ ಸೋಮವಾರ ಶಕ್ತಿ ಯೋಜನೆಯಡಿ ಐದುನೂರು ಕೋಟಿ ಮಹಿಳಾ ಪ್ರಯಾಣಿಕರು ಸಂಚರಿಸಿದ ಹಿನ್ನೆಲೆಯಲ್ಲಿ ಬಸ್‌ಗಳಿಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಸರ್ಕಾರದ ಎಲ್ಲ ಗ್ಯಾರಂಟಿಗಳು ಯಶಸ್ಸು ಕಂಡಿವೆ. ಶಕ್ತಿ ಯೋಜನೆ ಹಾಗೂ ಗೃಹಲಕ್ಷ್ಮೀ ಯೋಜನೆಗಳು ಜನಮನ ಗೆದ್ದಿವೆ. ಈ ಯೋಜನೆಗಳಿಂದ ಬಡವರಿಗೆ ಹಾಗೂ ಮದ್ಯಮ ವರ್ಗದ ಜನರಿಗೆ ಅನೂಕೂಲವಾಗಿದೆ. ಬಡ ಹೆಣ್ಣುಮಕ್ಕಳಿಗೆ ಈ ಯೋಜನೆಗಳು ಧೈರ್ಯ ತುಂಬಿವೆ ಎಂದು ತಿಳಿಸಿದರು.
ಕಿತ್ತೂರು ಮತಕ್ಷೇತ್ರದ ಅಭಿವೃದ್ಧಿಗೆ ನಾನು ಸದಾ ಸಿದ್ಧನಿದ್ದೇನೆ. ಅನುದಾನದ ವಿಚಾರದಲ್ಲಿ ಈಗಾಗಲೇ ಸರ್ಕಾರದ ಹಾಗೂ ಸಚಿವರ ಗಮನಕ್ಕೂ ತಂದಿದ್ದೇನೆ. ಈ ಹಿಂದೆ ರಾಜ್ಯ ಉಸ್ತುವಾರಿಗಳು ಶಾಸಕರ ಕುಂದುಕೊರತೆಗಳ ಬಗ್ಗೆ ಮಾಹಿತಿ ಕೇಳಿದ್ದರು ಅಲ್ಲಿಯೂ ಕ್ಷೇತ್ರಕ್ಕೆ ಬೇಕಾದ ಅನುದಾನದ ಬಗ್ಗೆ ಗಮನ ಸೆಳೆದಿದ್ದೇನೆ. ಕೆಲವು ಇಲಾಖೆಗಳಿಂದಲೂ ಈಗಾಗಲೇ ಸಕಾರಾತ್ಮಕವಾಗಿ ಉತ್ತರ ದೊರೆತಿದೆ. ಸರ್ಕಾರದ ಅನುದಾನ ತರಲು ಹಾಗೂ ಕಿತ್ತೂರು ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ನಾನು ಸದಾ ಸಿದ್ಧನಿದ್ದೇನೆ ಎಂದು ಸ್ಪಷ್ಟ ಪಡಿಸಿದರು.ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಈಗಾಗಲೇ ಆಯುಕ್ತರನ್ನು ನೇಮಿಸಲಾಗಿದೆ. ಸರ್ಕಾರದ ಹಂತದಲ್ಲಿ ಅಧಿಕಾರಗಳ ಜೊತೆಗೂಡಿ ನೀಲನಕ್ಷೆ ರಚಿಸಿ ಅಭಿವೃದ್ಧಿಗೆ ಅವಶ್ಯವಿರುವ ಅನುದಾನ ತರಲು ಸಿದ್ಧ ಹಾಗೂ ಬಸ್ ಡಿಪೋ ಕಾರ್ಯಾರಂಭವೂ ಕೆಲವು ಕಾರಣಗಳಿಂದ ವಿಳಂಬಗೊಂಡಿದೆ ಅದನ್ನು ಕೂಡ ಅಧಿಕಾರಿಗಳ ಹಾಗೂ ಸಚಿವರ ಜೊತೆ ಚರ್ಚೆ ನಡೆಸಿದ್ದು ಇಂಧನದ ಪರವಾನಗಿ ಸಿಕ್ಕ ಕೂಡಲೇ ಬಸ್ ಡಿಪೋ ಕಾರ್ಯಾರಂಭ ಮಾಡಲಿದೆ ಎಂದು ಹೇಳಿದರು.
ಈ ವೇಳೆ ಪಪಂ ಅಧ್ಯಕ್ಷ ಜೈಸಿದ್ದರಾಮ ಮಾರಿಹಾಳ, ತಹಸೀಲ್ದಾರ್ ಕಲ್ಲಗೌಡ ಪಾಟೀಲ, ಸಿಪಿಐ ಶಿವಾನಂದ ಗುಡುಗನಟ್ಟಿ, ಪಿಎಸೈ ಪ್ರವೀಣ ಗಂಗೋಳ, ಪ್ರವೀಣ ಕೋಟಿ, ನಿಯಂತ್ರಣಾಧಿಕಾರಿ ಶಂಕರ ಮೇಲಿನಮನಿ, ವೀರಪ್ಪ ಸರ್ದಾರ, ಮುಖಂಡರಾದ ಆಶ್ಪಾಕ ಹವಾಲ್ದಾರ, ಅನೀಲ ಎಮ್ಮಿ, ಕೃಷ್ಣಾ ಬಾಳೇಕುಂದರಗಿ, ಎನ್.ಎಸ್.ಗಲಗಲಿ, ಶಂಕರ ಇಟಗಿ ಸೇರಿ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಗ್ಯಾರಂಟಿ ಯೋಜನೆಗಳ ಸದಸ್ಯರು, ಪಪಂ ಸದಸ್ಯರು ಸೇರಿದಂತೆ ಇತರರು ಇದ್ದರು.