ಕಾರ್ಕಳ: ಮುಂದಿನ ವರ್ಷ ನಡೆಯಲಿರುವ ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಮಹೋತ್ಸವ ಅಂಗವಾಗಿ ಏ.19ರಂದು ಮಸ್ತಕಾಭಿಷೇಕ ಕಾರ್ಯಾಲಯ ಉದ್ಘಾಟನೆ ಹಾಗೂ ಮಹಾಮಸ್ತಕಾಭಿಷೇಕ ದಿನಾಂಕ ಘೋಷಣೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಮಹಾಮಸ್ತಕಾಭಿಷೇಕ ಸಮಿತಿ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ತಿಳಿಸಿದರು.ನಗರದ ಮಸ್ತಕಾಭಿಷೇಕ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮಹತ್ವದ ಕಾರ್ಯಕ್ರಮವು ಬಾಹುಬಲಿ ಪ್ರವಚನ ಮಂದಿರದಲ್ಲಿ ನಡೆಯಲಿದ್ದು, ಧಾರ್ಮಿಕ ಹಾಗೂ ಸಾಮಾಜಿಕವಾಗಿ ಅಪಾರ ಮಹತ್ವ ಹೊಂದಿದೆ ಎಂದು ಹೇಳಿದರು. ಕಾರ್ಕಳದ ಐತಿಹಾಸಿಕ ಹಾಗೂ ಆಧ್ಯಾತ್ಮಿಕ ಪರಂಪರೆಯ ಪ್ರತೀಕವಾಗಿರುವ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕವು ದೇಶದ ನಾನಾ ಭಾಗಗಳಿಂದ ಭಕ್ತರನ್ನು ಆಕರ್ಷಿಸುವ ಮಹೋತ್ಸವವಾಗಿದ್ದು, ಇದರ ಸಿದ್ಧತೆಗಳನ್ನು ಸಮಿತಿ ವ್ಯವಸ್ಥಿತವಾಗಿ ಕೈಗೊಂಡಿದೆ ಎಂದರು.ಪರಮಪೂಜ್ಯ ‘ರಾಜಗುರು’, ‘ಧ್ಯಾನಯೋಗಿ’ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ರಾಜ್ಯದ ಯೋಜನಾ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಸುಧಾಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಶಾಸಕ ವಿ. ಸುನಿಲ್ ಕುಮಾರ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.ಮಹಾಮಸ್ತಕಾಭಿಷೇಕ ಸಮಿತಿ ಕಚೇರಿಯ ಉದ್ಘಾಟನೆ ನಡೆಯಲಿದ್ದು, ಮಹೋತ್ಸವದ ವಿವಿಧ ಕಾರ್ಯಕ್ರಮಗಳ ಯೋಜನೆ ಹಾಗೂ ಸಮನ್ವಯ ಕಾರ್ಯಗಳನ್ನು ಈ ಕಚೇರಿ ಮೂಲಕ ಚುರುಕುಗೊಳಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪರಮಪೂಜ್ಯ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರು ಆಶೀರ್ವಚನ ನೀಡಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಪುಷ್ಪರಾಜ್ ಜೈನ್ , ಸಹ ಕೋಶಾಧಿಕಾರಿ ಪ್ರಭಾತ್ ಕುಮಾರ್, ಉಪಾಧ್ಯಕ್ಷರಾದ ಅನಂತರಾಜ ಪೂವಾಣಿ , ಸಂಪತ್ ಸಾಮ್ರಾಜ್ಯ , ಸುಧೀರ್ ಪಡಿವಾಳ್ , ಕೆ ಜಯಕೀರ್ತಿ ಕಡಂಬ , ಕಾರ್ಯದರ್ಶಿಗಳಾದ ಹೇಮಚಂದ್ರ ಜೈನ್, ಸುನಿಲ್ ಕುಮಾರ್ ಬಜಗೊಳಿ, ಮಹವೀರ ಹೆಗ್ಡೆ ಮುಡಾರು, ಭರತ ಕುಮಾರ್ ಜೈನ್, ಶೀತಲ್ ಜೈನ್, ಸುಭಾಷ್ಚಂದ್ರ ಚೌಟ, ಶಾಂತಿರಾಜ ಜೈನ್, ಮಹೇಂದ್ರ ವರ್ಮ ಜೈನ್, ಶಿಶುಪಾಲ ಜೈನ್, ಜೊತೆ ಕಾರ್ಯದರ್ಶಿ ಗಳಾದ ಶಶಿಕಾಲ ಹೆಗ್ಡೆ, ಹರ್ಷಿಣಿ ವಿಜಯರಾಜ್, ಮೋಹಿನಿ ವರ್ದಮಾನ್, ನಿರಂಜನ್ ಜೈನ್, ಪೃತ್ವಿರಾಜ್ ಹೆಗ್ಡೆ , ಅದಿರಾಜ ಅಜ್ರಿ ಸಾಂತ್ರಬೆಟ್ಟು, ಅಮೃತ ಮಲ್ಲಿ, ಪ್ರಭಾಕರ ಅತಿಲಾರಿ , ದೀಪಕ್ ಜೈನ್ , ಅಶೋಕ್ ಕುಮಾರ್ ಬಲ್ಳಾಲ್, ವಿನಯ ಅರಿಗ, ವಿನಯ್ ಉದಯ ಕುಮಾರ್, ವಿಖ್ಯಾತ್ ಜೈನ್ , ಚಂದ್ರಕಿರ್ತಿ ಜೈನ್, ಧನಂಜಯ ಜೈನ್ ಉಪಸ್ಥಿತರಿದ್ದರು.ಹೆಚ್ಚಿನ ಅನುದಾನ ನಿರೀಕ್ಷೆ: ಡಾ.ಎಂಎನ್‌ಆರ್: ಕಳೆದ ಮಹಾಮಸ್ತಕಾಭಿಷೇಕದ ಸಂದರ್ಭ ಸರ್ಕಾರದಿಂದ ₹7 ಕೋಟಿ ಅನುದಾನ ಲಭ್ಯವಾಗಿದ್ದು, ಈ ಬಾರಿ ಇನ್ನಷ್ಟು ಹೆಚ್ಚಿನ ಅನುದಾನ ದೊರೆಯುವ ನಿರೀಕ್ಷೆ ಇದೆ ಎಂದು ಡಾ. ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.
ಇದಲ್ಲದೆ, ಕಾರ್ಕಳದ ದಾನಶಾಲೆ ರಸ್ತೆ ದ್ವಿಪಥ ಅಭಿವೃದ್ಧಿಗಾಗಿ ₹2.5 ಕೋಟಿ ಅನುದಾನ ಬಿಡುಗಡೆ ಮಾಡುವ ಪ್ರಸ್ತಾವನೆಯೂ ಸರ್ಕಾರದ ಮುಂದಿದೆ ಎಂದು ತಿಳಿಸಿದರು.