ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ಹಗರಣ ಸಿಐಡಿಗೆ

KannadaprabhaNewsNetwork |  
Published : Feb 09, 2024, 01:45 AM ISTUpdated : Feb 09, 2024, 03:57 PM IST
ಹಾನಿಗೀಡಾಗ ಪ್ರತಿಮೆ ಭಾಗ | Kannada Prabha

ಸಾರಾಂಶ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ತಕ್ಷಣ ಪಕ್ಷದ ಸ್ಥಳೀಯ ಕಾರ್ಯಕರ್ತರು ಈ ಅವ್ಯವಹಾರದ ಬಗ್ಗೆ ತೀವ್ರ ಹೋರಾಟಗಳನ್ನು ನಡೆಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ.

ಕನ್ನಡಪ್ರಭ ವಾರ್ತೆ ಕಾರ್ಕಳ

ಕೊನೆಗೂ ರಾಜ್ಯ ಸರ್ಕಾರ ಇಲ್ಲಿನ ಪರಶುರಾಮ ಥೀಮ್ ಪಾರ್ಕ್ ಅವ್ಯವಹಾರ ಹಗರಣವನ್ನು ಸಿಐಡಿಗೆ ಒಪ್ಪಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ತಕ್ಷಣ ಪಕ್ಷದ ಸ್ಥಳೀಯ ಕಾರ್ಯಕರ್ತರು ಈ ಅವ್ಯವಹಾರದ ಬಗ್ಗೆ ತೀವ್ರ ಹೋರಾಟಗಳನ್ನು ನಡೆಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. 

ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಇದೀಗ ಪಕ್ಷದ ಕಾರ್ಯಕರ್ತರು, ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ, ಈ ಅವ್ಯವಹಾರ ತನಿಖೆಯಾಗದೆ ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ ಎಂದು ಬೆದರಿಕೆ ಹಾಕಿದ ಪರಿಣಾಮ, 6 ತಿಂಗಳ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಗರಣವನ್ನು ಸಿಐಡಿಗೆ ಒಪ್ಪಿಸಿ ಆದೇಶ ಹೊರಡಿಸಿದ್ದಾರೆ.

ಏನಿದು ವಿವಾದ?: ಕಾರ್ಕಳದ ಶಾಸಕ ಸುನಿಲ್ ಕುಮಾರ್ ಮುತುವರ್ಜಿಯಲ್ಲಿ, ಇಲ್ಲಿನ ಎರ್ಲಪಾಡಿ ಗ್ರಾ.ಪಂ.ನ ಉಮಿಕಲ್ ಬೆಟ್ಟ ಎಂಬಲ್ಲಿನ ಭಾರಿ ಬಂಡೆಕಲ್ಲಿನ ಮೇಲೆ ದೇಶದಲ್ಲಿಯೇ ಅತಿ ದೊಡ್ಡ 33 ಅಡಿ ಎತ್ತರದ ಕಂಚಿನ ಪರಶುರಾಮ ವಿಗ್ರಹವನ್ನು, ಸುಮಾರು 10 ಕೋಟಿ ರು.ಗೂ ಹೆಚ್ಚು ವೆಚ್ಚದಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸ್ಥಾಪಿಸಲಾಗಿತ್ತು.

ನಿರ್ಮಿತಿ ಕೇಂದ್ರವು ನಿರ್ಮಿಸಿದ್ದ ಈ ವಿಗ್ರಹ, ತೆರೆದ ಸಭಾಂಗಣ, ಮ್ಯೂಸಿಯಂಗಳನ್ನೊಳಗೊಂಡ ಥೀಮ್ ಪಾರ್ಕನ್ನು ವಿಧಾನಸಭಾ ಚುನಾವಣೆಗೆ ಕೆಲವೇ ದಿನ ಮೊದಲು ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು.

ಗೋಮಾಳದಲ್ಲಿ ನಕಲಿ ಮೂರ್ತಿ: ಗೋಮಾಳ ಭೂಮಿಯಲ್ಲಿ ಈ ಥೀಮ್ ಪಾರ್ಕ್ ನಿರ್ಮಾಣಗೊಂಡಿದೆ ಎಂದು ಕಾಂಗ್ರೆಸ್ ಆರಂಭದಲ್ಲಿಯೇ ಆರೋಪಿಸಿತ್ತು. 

ಉದ್ಘಾಟನೆಗೊಂಡ ಕೆಲವೇ ದಿನಗಳಲ್ಲಿ ನಿರ್ಮಿತಿ ಕೇಂದ್ರ 33 ಅಡಿ ಎತ್ತರದ ಪರಶುರಾಮ ವಿಗ್ರಹವನ್ನು ದುರಸ್ತಿಗೆಂದು ಅಲ್ಲಿಂದ ತೆರವುಗೊಳಿಸಿದ್ದು ಇನ್ನೂ ಮರುಸ್ಥಾಪಿಸಿಲ್ಲ. ಇದರಿಂದ ಈ ಮೂರ್ತಿ ಕಂಚಿನದ್ದಲ್ಲ, ನಕಲಿಯಾಗಿದೆ. 

ವಿಧಾನಸಭಾ ಚುನಾವಣೆಯಲ್ಲಿ ಮತಗಳಿಕೆಗಾಗಿ ನಕಲಿ ವಿಗ್ರಹವನ್ನು ಸ್ಥಾಪಿಸಿ, 10 ಕೋಟಿ ರು.ಗಳ ಅವ್ಯವಹಾರ ನಡೆಸಲಾಗಿದೆ ಎಂದು ಆರೋಪಿ ಕಾಂಗ್ರೆಸ್ ಅನೇಕ ಬಾರಿ ಮನವಿ, ಧರಣಿ, ಪ್ರತಿಭಟನೆ ಮಾಡಿತ್ತು. ಸಿಐಡಿ ತನಿಖೆಗೆ ಆಗ್ರಹಿಸಿತ್ತು.

ಸ್ಥಳಕ್ಕೆ ಉಸ್ತುವಾರಿ ಸಚಿವೆ ಭೇಟಿ ನೀಡಿದ್ದರೂ ತನಿಖೆಗೆ ಸರ್ಕಾರ ಹಿಂದೇಟು ಹಾಕುತಿದ್ದುದು, ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ತನ್ನದೇ ಕಾರ್ಯಕರ್ತರ ಬೆದರಿಕೆಗೆ ಮಣಿದ ರಾಜ್ಯ ಸರ್ಕಾರ ಹಗರಣವನ್ನು ಸಿಐಡಿಗೆ ಹಸ್ತಾಂತರಿಸಿದೆ.

ತನಿಖೆಗೆ ಶಾಸಕ ಸುನಿಲ್ ಕುಮಾರ್ ಸ್ವಾಗತಪರಶುರಾಮ ಥೀಮ್ ಪಾರ್ಕ್ ಬಗ್ಗೆ ಕೇಳಿ ಬಂದಿರುವ ಆರೋಪಗಳ ಬಗ್ಗೆ ಸಿಐಡಿ ತನಿಖೆಯನ್ನು ಸ್ವಾಗತಿಸುವುದಾಗಿ ಕಾರ್ಕಳ ಶಾಸಕ ಸುನಿಲ್ ಕುಮಾರ್ ಹೇಳಿದ್ದಾರೆ.

ಥೀಮ್ ಪಾರ್ಕ್‌ಗೆ ಸಂಬಂಧಿಸಿದ ಅನಗತ್ಯ ಸುಳ್ಳು ಊಹಾಪೋಹಗಳಿಗೆ ಒಂದು ಪೂರ್ಣ ವಿರಾಮ ಬೇಕಾಗಿದೆ. ತನಿಖೆ ನಡೆಸುವಂತೆ ಆರು ತಿಂಗಳಿಂದ ನಾನು ಒತ್ತಾಯಿಸುತಿದ್ದೇನೆ. 

ಸರ್ಕಾರ ಆದಷ್ಟು ಬೇಗ ತನಿಖೆಯನ್ನು ಪೂರ್ಣಗೊಳಿಸಿ ಥೀಮ್ ಪಾರ್ಕನ್ನು ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲಿ ಮತ್ತು ಯೋಜನೆಗೆ ಬಾಕಿ ಇರುವ ಅನುದಾನವನ್ನು ಬಿಡುಗಡೆ ಮಾಡಲಿ ಎಂದಿರುವ ಶಾಸಕರು ಸಿಐಡಿ ತನಿಖೆಗೆ ಮುತುವರ್ಜಿ ವಹಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ವಿಶೇಷ ಧನ್ಯವಾದಗಳು ಎಂದಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪೋಲಿಯೋ ಲಸಿಕೆ ಹಾಕಿಸಿ ಅಂಗವಿಕಲತೆ ಹೋಗಲಾಡಿಸಿ: ಪೂರ್ಣಿಮಾ
ಬಡವರಿಗೆ ನಲ್ಲೂರು ಕುಟುಂಬ ಕೊಡುಗೆ ಅಪಾರ: ಓಂಕಾರ ಶ್ರೀ