ಕಾಂಗ್ರೆಸ್‌ನಿಂದ ಕಾರ್ಕಳ ಪ್ರವಾಸೋದ್ಯಮ ಕಗ್ಗೊಲೆ: ಸುನಿಲ್ ಕುಮಾರ್

KannadaprabhaNewsNetwork |  
Published : Nov 14, 2024, 12:50 AM IST
32 | Kannada Prabha

ಸಾರಾಂಶ

ವಿಗ್ರಹದ ಶಿಲ್ಪಿಗೆ 2.05 ಕೋಟಿ ರು.ಗಳಲ್ಲಿ ಕೇವಲ 1.25 ಕೋಟಿ ರು. ಮಾತ್ರ ನೀಡಲಾಗಿದೆ. ಆದರೂ ಆತ ಅವ್ಯವಹಾರ ಮಾಡಿದ್ದಾನೆ ಎಂದು ಪೊಲೀಸು ಬಂಧಿಸಿ ಜೈಲಿಗೆ ತಳ್ಳಿದ್ದಾರೆ. ರಾಜಕೀಯಕ್ಕೆ ಅಮಾಯಕ ಕಲಾವಿದನ ಹೊಟ್ಟೆಗೆ ಹೊಡೆದಿದ್ದಾರೆ ಎಂದು ವಿಷಾದಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಕಾರ್ಕಳದ ಉಮಿಕಲ್ ಬೆಟ್ಟದ ಪರಶುರಾಮ ಥೀಮ್ ಪಾರ್ಕಿನಲ್ಲಿ ನಡೆದಿದೆ ಎಂದು ಆರೋಪಿಸಲಾಗುತ್ತಿರುವ ಅವ್ಯಹಾರದ ಬಗ್ಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಯಾವುದೇ ತನಿಖೆ ಮಾಡಿದರೂ ಎದುರಿಸಲು ತಾನು ಸಿದ್ಧ ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಹೇಳಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಥೀಮ್‌ ಪಾರ್ಕ್ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡಿ, ಕಾರ್ಕಳದಲ್ಲಿ ತೀವ್ರಗತಿಯಲ್ಲಿ ಅಭಿವೃದ್ಧಿ ಹೊಂದುತಿದ್ದ ಪ್ರವಾಸೋದ್ಯಮವನ್ನು ಕಾಂಗ್ರೆಸ್ ನಾಯಕರು ಕಗ್ಗೊಲೆ ಮಾಡಿದ್ದಾರೆ. ಈ ಸುಳ್ಳು ಸುದ್ದಿ ಹರಡಿದವರ ಮೇಲೆಯೂ ತನಿಖೆಯಾಗಲಿ ಎಂದು ಅವರು ಆಗ್ರಹಿಸಿದರು. ಇಲ್ಲಿ ಸ್ಥಾಪನೆಯಾದ ಪರಶುರಾಮನ ವಿಗ್ರಹ ನಕಲಿ ಅಲ್ಲ, ಅದರಲ್ಲಿ ಶೇ. 80 ಕಂಚು ಮತ್ತು ಶೇ.20 ಝಿಂಕ್ ಇದೆ ಎಂದು ಎನ್‌ಐಟಿಕೆ ತಜ್ಞರೇ ವರದಿ ನೀಡಿದ್ದಾರೆ. ಇದನ್ನು ನ್ಯಾಯಾಲಯವೂ ಒಪ್ಪಿಕೊಂಡಿದೆ. ಆದರೂ ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿ ಉದಯಕುಮಾರ್ ಶೆಟ್ಟಿ ಮುನಿಯಾಲು ಅವರು ವಿಗ್ರಹ ಕಂಚಿನದಲ್ಲ, ಫೈಬರ್‌ನದ್ದು ಎಂದು ವಿಧಾನಸಭಾ ಚುನಾವಣೆಯ ಸೋಲಿನ ಹತಾಶೆಯಿಂದ ಸುಳ್ಳು ಸುದ್ದಿ ಹರಡುತ್ತಾ ಜನರ ಮತ್ತು ತನಿಖೆಯ ದಿಕ್ಕು ತಪ್ಪಿಸುತಿದ್ದಾರೆ ಎಂದವರು ಹೇಳಿದರು.ವಿಗ್ರಹವನ್ನು ಕಳ್ಳತನ ಮಾಡಲಾಗಿದೆ ಎಂದು ಕಾಂಗ್ರೆಸ್ಸಿನವರು ಆರೋಪಿಸುತಿದ್ದಾರೆ, ವಿಗ್ರಹವನ್ನು ಪುನಃವಿನ್ಯಾಸಗೊಳಿಸಲು ತೆರವು ಮಾಡುವುದಕ್ಕೆ ಜಿಲ್ಲಾಧಿಕಾರಿಯೇ ಅನುಮತಿ ನೀಡಿದ್ದಾರೆ, ಪೊಲೀಸ್ ರಕ್ಷಣೆಯಲ್ಲಿಯೇ ತೆರವುಗೊಳಿಸಲಾಗಿದೆ. ಹಾಗಿರುವಾಗ ಕಳ್ಳತನ ಹೇಗಾಗುತ್ತದೆ ಎಂದು ಪ್ರಶ್ನಿಸಿದ ಸುನಿಲ್ ಕುಮಾರ್, ಅವರದ್ದೇ ಸರ್ಕಾರವಿದೆ, ಕಳ್ಳತನವಾಗಿದ್ದರೆ ಡಿಸಿ ಮತ್ತು ಪೊಲೀಸರ ಮೇಲೆ ಕ್ರಮ ಕೈಗೊಳ್ಳಲಿ ಎಂದು ಸವಾಲು ಹಾಕಿದರು.

ಜನರ ಧಾರ್ಮಿಕ ಭಾವನಗೆ ಧಕ್ಕೆ ಹೇಗಾಗುತ್ತದೆ, ಥೀಮ್ ಪಾರ್ಕ್ ಧಾರ್ಮಿಕ ಸ್ಥಳವೇ ಅಲ್ಲ, ಇಲ್ಲಿ ಪೂಜೆ ನಡೆಯುವುದಿಲ್ಲ, ಇದು ಪ್ರವಾಸೋದ್ಯಮಕ್ಕಾಗಿಯೇ ನಿರ್ಮಿಸಿದ ಪಾರ್ಕ್‌. ನಾನು ಕ್ಷಮೆ ಕೇಳುವುದಿಲ್ಲ, ಕಾರ್ಕಳದಲ್ಲಿ ಅಭಿವೃದ್ಧಿ ಬೇಕು ಎಂದೇ ನನ್ನನ್ನು ಗೆಲ್ಲಿಸಿದ್ದಾರೆ, ಅಭಿವೃದ್ಧಿಗೆ ಪ್ರವಾಸೋದ್ಯಮಕ್ಕೆ ಅಡ್ಡಗಾಲು ಹಾಕುತ್ತಿರುವವರು ಕ್ಷಮೆ ಕೇಳಲಿ, ಪ್ರಾಯಶ್ಚಿತ್ತ ಮಾಡಿಕೊಳ್ಳಲಿ ಎಂದು ಸುನಿಲ್‌ ಕುಮಾರ್‌ ಹೇಳಿದರು.

ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ, ಆದರೂ ಉದ್ಘಾಟನೆ ಮಾಡಿದ್ದರಲ್ಲಿ ತಪ್ಪೇನೂ ಇಲ್ಲ, ಯೋಜನೆ ಪೂರ್ಣಗೊಂಡು ಇನ್ನೂ ಸರ್ಕಾರಕ್ಕೆ ಹಸ್ತಾಂತರವೂ ಆಗಿಲ್ಲ, 11 ಕೋಟಿ ರು. ಕಾಮಗಾರಿಗೆ 6 ಕೋಟಿ ರು. ಬಿಡುಗಡೆಯಾಗಿ ಇನ್ನೂ 5 ಕೋಟಿ ಬಾಕಿ ಇದೆ. ಆದಕ್ಕೆ ಮೊದಲೇ ಅವ್ಯವಹಾರದ ಕೇಸು ಹಾಕಲಾಗಿದೆ, ಸರ್ಕಾರಿ ಯೋಜನೆಯೊಂದಕ್ಕೆ ಖಾಸಗಿಯವರು ನೀಡಿದ ದೂರಿಗೆ ಎಫ್ಐಆರ್ ಹಾಕುವ ಮೂಲಕ ಜಿಲ್ಲಾಡಳಿತ ಪೊಲೀಸ್ ಇಲಾಖೆ ಹೊಸ ಪರಂಪರೆಗೆ ನಾಂದಿ ಹಾಕಿದೆ ಎಂದವರು ಆಸಮಾಧಾನ ವ್ಯಕ್ತಪಡಿಸಿದರು.

ವಿಗ್ರಹದ ಶಿಲ್ಪಿಗೆ 2.05 ಕೋಟಿ ರು.ಗಳಲ್ಲಿ ಕೇವಲ 1.25 ಕೋಟಿ ರು. ಮಾತ್ರ ನೀಡಲಾಗಿದೆ. ಆದರೂ ಆತ ಅವ್ಯವಹಾರ ಮಾಡಿದ್ದಾನೆ ಎಂದು ಪೊಲೀಸು ಬಂಧಿಸಿ ಜೈಲಿಗೆ ತಳ್ಳಿದ್ದಾರೆ. ರಾಜಕೀಯಕ್ಕೆ ಅಮಾಯಕ ಕಲಾವಿದನ ಹೊಟ್ಟೆಗೆ ಹೊಡೆದಿದ್ದಾರೆ ಎಂದು ವಿಷಾದಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸುಮಿತ್‌ ಶೆಟ್ಟಿ ಬೈಲೂರು, ತಾಪಂ ಮಾಜಿ ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ, ಎರ್ಲಪಾಡಿ ಗ್ರಾಪಂ ಅಧ್ಯಕ್ಷ ಸುನಿಲ್‌ ಹೆಗ್ಡೆ, ಬೈಲೂರು ಗ್ರಾಪಂ ಅಧ್ಯಕ್ಷೆ ಸುಜಾತಾ ಪೂಜಾರಿ, ನೀರೆ ಗ್ರಾಪಂ ಅದ್ಯಕ್ಷ ಸಚ್ಚಿದಾನಂದ ಪ್ರಭು, ಪರಶುರಾಮ ಥೀಮ್‌ ಪಾರ್ಕ್‌ ಹೋರಾಟ ಸಮಿತಿಯ ಅಧ್ಯಕ್ಷ ಸಚ್ಚಿದಾನಂದ ಶೆಟ್ಟಿ, ಬೈಲೂರು ಗ್ರಾಪಂ ಉಪಾಧ್ಯಕ್ಷ ಸಂತೋಷ್‌, ಯುವ ಮೋರ್ಚದ ಗುರುರಾಜ್‌ ಮಾಡ, ರಾಕೇಶ್‌ ಶೆಟ್ಟಿ ಕುಕ್ಕುಂದೂರು ಇದ್ದರು.--------------ಶಿಲ್ಪಿ ಬಂಧನವಾದರೆ ಸಾಲದು, ರೂವಾರಿಗಳೂ ಜೈಲು ಸೇರಬೇಕು: ಮುನಿಯಾಲುಕನ್ನಡಪ್ರಭ ವಾರ್ತೆ ಉಡುಪಿಕಾರ್ಕಳ ಉಮಿಕಲ್ ಬೆಟ್ಟದ ಮೇಲೆ ನಿರ್ಮಿಸಲಾದ ಪರಶುರಾಮ ಥೀಮ್ ಪಾರ್ಕ್‌ನ ಅವ್ಯಹಾರದಲ್ಲಿ ಭಾಗಿಯಾದ ಅಧಿಕಾರಿಯೊಬ್ಬರು ಅಮಾನತಾಗಿದ್ದಾರೆ, ಶಿಲ್ಪಿ ಜೈಲಿನಲ್ಲಿದ್ದಾರೆ, ಹಗರಣದ ಪ್ರಮುಖ ರೂವಾರಿಯೂ ಜೈಲು ಸೇರಬೇಕು ಎಂದು ಕಾಂಗ್ರೆಸ್‌ ನಾಯಕ ಉದಯಕುಮಾರ್ ಶೆಟ್ಟಿ ಮುನಿಯಾಲು ಆಗ್ರಹಿಸಿದ್ದಾರೆ.

ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಯೋಜನೆಯ ಗುತ್ತಿಗೆದಾರರಾದ ನಿರ್ಮಿತಿ ಕೇಂದ್ರದ ಅಧಿಕಾರಿ ಅಮಾನತುಗೊಂಡಿದ್ದಾರೆ. ನಕಲಿ ವಿಗ್ರಹ ನಿರ್ಮಿಸಿದ ಶಿಲ್ಪಿ ಕೃಷ್ಣ ನಾಯಕ್‌ನನ್ನು ಪೊಲೀಸರು ಬಂಧಿಸಿದ್ದಾರೆ, ಇದರೊಂದಿಗೆ ಪ್ರಕರಣ ಮುಗಿಯುವುದಿಲ್ಲ. ವಿಗ್ರಹ ನಿರ್ಮಾಣಕ್ಕೆಂದು ಬಿಡುಗಡೆಯಾದ 1.25 ಕೋಟಿ ರು. ಯಾರಿಗೆ ಸಂದಾಯವಾಗಿದೆ ಎಂಬುದು ತನಿಖೆಯಾಗಬೇಕಾಗಿದೆ. ವಿಗ್ರಹಕ್ಕೆ 2022ರ ಡಿ.2ರಂದು ಟೆಂಡರ್ ನೀಡಲಾಗಿತ್ತು, ಆದರೆ ಅದಕ್ಕೂ ಮೊದಲೇ ಸೆಪ್ಟಂಬರ್‌ನಲ್ಲಿ 1.25 ಕೋಟಿ ರು. ಸರ್ಕಾರದಿಂದ ಬಿಡುಗಡೆಯಾಗಿತ್ತು. ಈ ಹಣ ಎಲ್ಲಿಗೆ ಹೋಯಿತು? ಈ ಯೋಜನೆಯ ರೂವಾರಿ ಕಾರ್ಕಳ ಶಾಸಕರು ಉತ್ತರ ನೀಡಬೇಕು ಎಂದವರು ಆಗ್ರಹಿಸಿದರು.

ಕಾರ್ಕಳ ಪುರಸಭೆಯ ಸದಸ್ಯ ವಿವೇಕ್ ಶೆಣೈ, ಮಾಜಿ ಅಧ್ಯಕ್ಷ ಸುಬಿತ್ ಎನ್.ಆರ್., ಮಾಜಿ ತಾ.ಪಂ. ಸದಸ್ಯ ಸುಧಾಕರ ಶೆಟ್ಟಿ, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ್ ರಾವ್ ಉಪಸ್ಥಿತರಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ