ಬಳ್ಳಾರಿ: ಕರ್ನಾಟಕ ಬಯಲಾಟ ಅಕಾಡೆಮಿ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜರುಗಿದ ಎರಡು ದಿನಗಳ ಕರ್ನಾಟಕ-ಆಂಧ್ರ ಗಡಿ ಪ್ರದೇಶದ ಕನ್ನಡ ಬಯಲಾಟಗಳು ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮಕ್ಕೆ ಭಾನುವಾರ ಸಂಭ್ರಮದ ತೆರೆಬಿತ್ತು.
ಎರಡು ದಿನಗಳ ವಿಚಾರ ಸಂಕಿರಣದಲ್ಲಿ ಬಯಲಾಟ ಹಿನ್ನಲೆ, ಸಧ್ಯದ ಸ್ಥಿತಿಗತಿಗಳು, ಬಯಲಾಟ ಮಹಿಳಾ ಕಲಾವಿದೆಯರು ಎದುರಿಸುತ್ತಿರುವ ಸಂಕಷ್ಟಗಳು, ಕನ್ನಡ ಹಾಗೂ ತೆಲುಗು ಭಾಷಾ ಬಾಂಧ್ಯವಕ್ಕೆ ಬಯಲಾಟ ನೀಡಿರುವ ಕೊಡುಗೆ ಕುರಿತು ವಿದ್ವಾಂಸರು ವಿಷಯ ಮಂಡಿಸಿದರು.
ಮೊದಲ ದಿನ ಲೇಖಕ ಡಾ.ಜಾಜಿ ದೇವೇಂದ್ರಪ್ಪ ಅವರು ಕರ್ನಾಟಕ-ಆಂಧ್ರ ಭಾಷಾ ಬಾಂಧವ್ಯ ಕುರಿತು ವಿಷಯ ಮಂಡಿಸಿದರೆ, ಬಯಲಾಟಗಳು; ಬಹುತ್ವ ಸಂಸ್ಕೃತಿ ಕುರಿತು ಹಂಪಿ ಕನ್ನಡ ವಿವಿಯ ಪ್ರಾಧ್ಯಾಪಕ ಡಾ.ವೆಂಕಟಗಿರಿ ದಳವಾಯಿ ಅವರು ಮಾತನಾಡಿದರು.ಎರಡೇ ದಿನದ ಗೋಷ್ಠಿಯಲ್ಲಿ ಬಯಲಾಟ ಕಲಾವಿದರ ಸ್ಥಿತಿಗತಿ; ಮುನ್ನೋಟ ಕುರಿತು ಮಾತನಾಡಿದ ಬಯಲಾಟ ಅಕಾಡೆಮಿ ಸದಸ್ಯ ಹಾಗೂ ಚಿಂತಕ ಡಾ.ಅರುಣ ಜೋಳದ ಕೂಡ್ಲಿಗಿ ಸೌಹಾರ್ದ, ಸಾಮರಸ್ಯ ಗಟ್ಟಿಗೊಳಿಸಲು ಪೂರಕವಾಗಿರಬೇಕಾದ ಬಯಲಾಟಗಳು ಜಾತಿವಾರು ಸೀಮಿತವಾಗುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿದರು.
ಕನ್ನಡ ಬಯಲಾಟದಲ್ಲಿ ಮಹಿಳೆ ಪಾತ್ರ ಕುರಿತು ಮಾತನಾಡಿದ ಉಪನ್ಯಾಸಕಿ ಡಾ.ಬಿ.ಎಸ್.ಪೂರ್ಣಿಮಾ, ಶತಶತಮಾನಗಳಿಂದಲೂ ಕನ್ನಡ-ತೆಲುಗು ಭಾಷಿಕರ ನಡುವಿನ ವೈವಾಹಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಂಬಂಧಗಳ ಕುರಿತು ವಿವರಿಸಿದರು.
ಬಯಲಾಟ ಅಕಾಡೆಮಿ ಸದಸ್ಯೆ ಡಾ.ಎಚ್.ಆರ್.ಚೇತನಾ ಮಾತನಾಡಿದರು.
ಮಸ್ಕಿಯ ಗೋನುವಾರ ತಂಡವು ಮಹಿಷಾಸುರ ಮರ್ಧಿನಿ ಬಯಲಾಟ ಪ್ರದರ್ಶಿಸಿದರೆ, ವಿಜಯನಗರ ಜಿಲ್ಲೆ ಮಲಪನಗುಡಿಯ ವೀರೇಶ್ವರ ಬಯಲಾಟ ಮಂಡಳಿಯು ವೀರಾಭಿಮನ್ಯು ಕಾಳಗ, ಬಳ್ಳಾರಿ ತಾಲೂಕು ಹಂದಿಹಾಳು ಶಿವಪ್ಪತಾತ ಕಲಾ ಸಂಘ ಜಮದಗ್ನಿ ಕಥೆ, ಕೊಪ್ಪಳ ಜಿಲ್ಲೆ ಗಂಗಾವತಿಯ ಶ್ರೀನೀಲಕಂಠೇಶ್ವರ ಸಾಂಸ್ಕೃತಿಕ ಕಲಾವೇದಿಕೆಯಿಂದ ಶಿವನ ತಪೋಭಂಗ, ಆಂಧ್ರಪ್ರದೇಶದ ಆದೋನಿಯ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಕಲಾ ತಂಡ ಮಹಿಳಾ ದರ್ಬಾರ್ ಹಾಗೂ ರಾಯಚೂರು ಜಿಲ್ಲೆಯ ಯಾಪಲದಿನ್ನಿಯ ಅಂಗಯ್ಯಸ್ವಾಮಿ ಬಯಲಾ ಕಲಾ ಸಂಘದಿಂದ ವೀರೋಚಿತ ಕಥೆ ಬಯಲಾಟ ಪ್ರದರ್ಶನಗೊಂಡವು. ಕಾರ್ಯಕ್ರಮ ಸಂಯೋಜಕ ಹಾಗೂ ಹಿರಿಯ ಲೇಖಕ ಡಾ.ಜಾಜಿ ದೇವೇಂದ್ರಪ್ಪ ಹಾಗೂ ಡಾ.ಎ.ಎನ್.ಸಿದ್ದೇಶ್ವರಿ ಕಾರ್ಯಕ್ರಮ ನಿರ್ವಹಿಸಿದರು.ಕಸಾಪ ಗೌರವ ಕಾರ್ಯದರ್ಶಿ ಡಾ.ಶಿವಲಿಂಗಪ್ಪ ಹಂದಿಹಾಳು, ಸನ್ಮಾರ್ಗ ಗೆಳೆಯರ ಬಳಗದ ಚಂದ್ರಶೇಖರ ಆಚಾರ್ ಕಪ್ಪಗಲ್ ಇದ್ದರು.