ಹೊಸಪೇಟೆ: ವಾಲ್ಮೀಕಿ ಸಮಾಜದ ನಾಯಕ ಹಾಗೂ ಮಾಜಿ ಸಚಿವ ಬಿ. ಶ್ರೀರಾಮುಲು ಅವರಿಗೆ ವಾಲ್ಮೀಕಿ ನಾಯಕ ಸಮಾಜ ರಾಜಕೀಯ ಶಕ್ತಿ ನೀಡಲಿದೆ. ಶಾಸಕ ಜನಾರ್ದನ ರೆಡ್ಡಿ ಅವರು ಉದ್ದಟತನದ ಹೇಳಿಕೆ ನೀಡಬಾರದು. ಜನಾರ್ದನ ರೆಡ್ಡಿ ವಿರುದ್ಧ ಸಮಾಜ ಒಂದಾಗಿ ಕರ್ನಾಟಕ ಬಂದ್ ಕರೆಗೂ ಮುಂದಾಗಲಿದೆ ಎಂದು ಹೊಸಪೇಟೆ ತಾಲೂಕು ವಾಲ್ಮೀಕಿ ನಾಯಕ ಸಂಘದ ಪ್ರ. ಕಾರ್ಯದರ್ಶಿ ದೇವರಮನೆ ಶ್ರೀನಿವಾಸ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀಗಳ ಜೊತೆಗೂ ಚರ್ಚೆ ನಡೆದಿದೆ. ಜನಾರ್ದನ ರೆಡ್ಡಿ ಅವರು ಹೀಗೆ ಹೇಳಿಕೆ ನೀಡುತ್ತ ಸಾಗಿದರೆ ರಾಜ್ಯದಲ್ಲಿ ನಾಲ್ಕನೇ ಬಲಿಷ್ಠ ಸಮುದಾಯವಾಗಿರುವ ವಾಲ್ಮೀಕಿ ಸಮಾಜ ಕರ್ನಾಟಕ ಬಂದ್ ಕರೆ ಕೂಡ ನೀಡಲಿದೆ. ಸಮಾಜದ ಬಲಿಷ್ಠ ನಾಯಕ ಹಾಗೂ ರಾಜಕೀಯ ಮುಖಂಡ ಬಿ. ಶ್ರೀರಾಮುಲು ಅವರ ವಿರುದ್ಧ ಈ ರೀತಿ ಹೇಳಿಕೆ ನೀಡಿರುವುದು ಸರಿಯಲ್ಲ. ಅವರ ತೇಜೋವಧೆ ಮಾಡಲು ಇಂತಹ ಹೇಳಿಕೆಗಳನ್ನು ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಜನಾರ್ದನ ರೆಡ್ಡಿ ಅವರಿಗೆ ಆಶ್ರಯ ನೀಡಿದ್ದೆ ಶ್ರೀರಾಮುಲು ಕುಟುಂಬ ಎಂಬುದನ್ನು ಮರೆಯಬಾರದು. ಈಗ ಗಣಿ ಲೂಟಿ ಮಾಡಿ, ಬೇನಾಮಿ ಆಸ್ತಿ ಮಾಡಿಕೊಂಡು ಈ ರೀತಿ ಹೇಳಿಕೆ ನೀಡುವುದಲ್ಲ. ಜನಾರ್ದನ ರೆಡ್ಡಿ ಜಾತಕ ಎಲ್ಲರಿಗೂ ಗೊತ್ತಿದೆ. ವಾಲ್ಮೀಕಿ ನಾಯಕ ಸಮಾಜದ ನಾಯಕನ ವಿರುದ್ಧ ಹೇಳಿಕೆ ನೀಡಿರುವುದನ್ನು ಸಮಾಜ ಪಕ್ಷಾತೀತವಾಗಿ ಖಂಡಿಸುತ್ತದೆ. ನಮಗೆ ಶ್ರೀರಾಮುಲು ಅವರು ಯಾವುದೇ ಪಕ್ಷದಲ್ಲಿರಲಿ ಮುಖ್ಯವಲ್ಲ, ಸಮಾಜದ ಓರ್ವ ನಾಯಕನಿಗೆ ಈ ರೀತಿ ಅವಹೇಳನ ಮಾಡಿರುವುದನ್ನು ನಾವು ಸಹಿಸುವುದಿಲ್ಲ. ಶಾಸಕ ಜನಾರ್ದನ ರೆಡ್ಡಿ ವಿರುದ್ಧ ಸರ್ಕಾರ ಎಫ್‌ಐಆರ್ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಶ್ರೀರಾಮುಲು, ಜನಾರ್ದನ ರೆಡ್ಡಿ ಅವರ ಮಧ್ಯೆ ಆಸ್ತಿ ಜಗಳ ಇಲ್ಲವೇ ಇಲ್ಲ. ಬಳ್ಳಾರಿಯಲ್ಲಿ ರೆಡ್ಡಿ ಅವರ ಪತ್ನಿ ಅರುಣಾ ಲಕ್ಷ್ಮೀ ಅವರನ್ನು ಗೆಲ್ಲಿಸಲಿಲ್ಲ ಎಂಬ ಒಂದೇ ಒಂದು ಕಾರಣಕ್ಕೆ ಈಗ ತಗಾದೆ ತೆಗೆದಿದ್ದಾರೆ. ಶ್ರೀರಾಮುಲು ಅವರು ರಾಜಕೀಯದಲ್ಲಿ ಸೋತಿರಬಹುದು. ಸಮಾಜ ಅವರ ಬೆನ್ನಿಗೆ ನಿಂತು ಮತ್ತೆ ರಾಜಕೀಯ ಶಕ್ತಿ ತುಂಬಲಿದೆ ಎಂದರು.ವಾಲ್ಮೀಕಿ ಗುರುಪೀಠದ ಧರ್ಮದರ್ಶಿ ಜಂಬಯ್ಯ ನಾಯಕ, ಮುಖಂಡರಾದ ಗುಜ್ಜಲ ಶ್ರೀನಾಥ್, ತಾರಿಹಳ್ಳಿ ಜಂಬುನಾಥ, ಶ್ರೀಕಂಠ, ಓಬಯ್ಯ ಮತ್ತಿತರರಿದ್ದರು.