ರಾಜ್ಯದ 17 ಜಿಲ್ಲೆಗಳಲ್ಲಿ ಮಂಗಳವಾರ ಆಲಿಕಲ್ಲು ಮಳೆಯಾಗಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು:
ರಾಜಧಾನಿ ಬೆಂಗಳೂರು, ಬೆಳಗಾವಿ, ವಿಜಯಪುರ, ವಿಜಯನಗರ, ಧಾರವಾಡ, ಚಾಮರಾಜನಗರ, ಹಾವೇರಿ ಸೇರಿ ರಾಜ್ಯದ 17 ಜಿಲ್ಲೆಗಳಲ್ಲಿ ಮಂಗಳವಾರ ಆಲಿಕಲ್ಲು ಮಳೆಯಾಗಿದ್ದು, ರಾಜ್ಯದ ಬಹುತೇಕ ಪ್ರದೇಶ ಕೆಲ ಕಾಲ ಆಲಿಕಲ್ಲಿನಿಂದ ಆವೃತವಾಗಿ ‘ಕಾಶ್ಮೀರ’ದಂತೆ ಭಾಸವಾಯಿತು. ಯುಗಾದಿಗೂ ಮುನ್ನ ಸುರಿದ ಆಲಿಕಲ್ಲು ಸಹಿತ ಅಕಾಲಿಕ ಮಳೆ ಬಿಸಿಲಿನಿಂದ ಬಸವಳಿದಿದ್ದ ಜನರಿಗೆ ತಂಪನ್ನೆರೆದರೆ, ದ್ರಾಕ್ಷಿ, ದಾಳಿಂಬೆ, ಕಾಫಿ, ಮಾವು ಸೇರಿ ತೋಟಗಾರಿಕಾ ಬೆಳೆಗಳಿಗೆ ಹಾನಿ ಸಂಭವಿಸುವ ಆತಂಕ ಉಂಟು ಮಾಡಿದೆ. ಈ ಮಧ್ಯೆ, ಗದಗ ಜಿಲ್ಲೆ ರೋಣ ತಾಲೂಕಿನ ಮೆಣಸಗಿ ಗ್ರಾಮ ಸಮೀಪದ ಬೆಣ್ಣೆ ಹಳ್ಳ ಬಳಿ ಸಿಡಿಲು ಬಡಿದು ನಿಂಗಪ್ಪ ರಾಮಪ್ಪ ಅಮಾತಿ (58) ಎಂಬ ರೈತ ಮೃತಪಟ್ಟಿದ್ದಾರೆ.
ಉತ್ತರ ಕರ್ನಾಟಕದ ಹಲವೆಡೆ ಮಂಗಳವಾರ ಸಂಜೆ ಭಾರೀ ಆಲಿಕಲ್ಲು ಮಳೆ ಸುರಿದಿದೆ. ಕಲಘಟಗಿ, ಹುಬ್ಬಳ್ಳಿ, ಕುಂದಗೋಳ ತಾಲೂಕುಗಳ ಗ್ರಾಮೀಣ ಪ್ರದೇಶಗಳಲ್ಲಿ ಸುರಿದ ಆಲಿಕಲ್ಲು ಮಳೆ ಕಾಶ್ಮೀರದ ವಾತಾವರಣ ಸೃಷ್ಟಿಸಿತು. ಕಲಘಟಗಿ, ಕುಂದಗೋಳ ತಾಲೂಕಿನ ಹಲವೆಡೆ ಆಲಿಕಲ್ಲು ರಾಶಿ, ರಾಶಿ ಬಿದ್ದಿದ್ದು ಕಾಶ್ಮೀರದ ಹಿಮದಂತೆ ಕಾಣಿಸಿತು. ಮನೆಯ ಮೇಲ್ಚಾವಣಿ ಆಲಿಕಲ್ಲು ರಾಶಿಯಿಂದ ಬಿಳಿ ಬಣ್ಣಕ್ಕೆ ತಿರುಗಿತ್ತು. ನಿರಂತರವಾಗಿ ಆಲಿಕಲ್ಲು ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯುಂಟಾಯಿತು.
ಲಕ್ಷ್ಮೇಶ್ವರ, ಗಜೇಂದ್ರಗಡ, ಶಿರಹಟ್ಟಿ, ರೋಣ ಸೇರಿ ಗದಗ ಜಿಲ್ಲೆಯಾದ್ಯಂತ ಗುಡುಗು, ಮಿಂಚು ಹಾಗೂ ಸಿಡಿಲಿನ ಅಬ್ಬರದೊಂದಿಗೆ ಆಲಿಕಲ್ಲು ಮಳೆಯಾಗಿದೆ. ವಿಜಯಪುರ ಜಿಲ್ಲೆಯಾದ್ಯಂತ ಸಂಜೆ 7ರ ವೇಳೆಗೆ ಭಾರೀ ಮಳೆ ಸುರಿದಿದ್ದು, ಹಲವೆಡೆ ವಿದ್ಯುತ್ ಕಂಬಗಳು ಧರೆಗುರುಳಿವೆ. ಇದೇ ವೇಳೆ, ಬೆಂಗಳೂರು ನಗರ, ಉತ್ತರ ಕನ್ನಡ, ಕೊಪ್ಪಳ, ವಿಜಯಪುರ, ಹಾವೇರಿ, ವಿಜಯನಗರ, ಬಳ್ಳಾರಿ ಜಿಲ್ಲೆಯ ಹಲವೆಡೆಯೂ ಆಲಿಕಲ್ಲು ಸಹಿತ ಮಳೆಯಾಗಿದೆ.
ಯಳಂದೂರು ಸೇರಿ ಚಾಮರಾಜನಗರ ಜಿಲ್ಲೆಯ ಹಲವೆಡೆ ಅರ್ಧ ಗಂಟೆ ಕಾಲ ಆಲಿಕಲ್ಲು ಸಹಿತ ಮಳೆ ಸುರಿದಿದ್ದು, ಆಲಿಕಲ್ಲಿನಿಂದ ಇಡೀ ರಸ್ತೆಗಳು ಮುತ್ತಿನಮಣಿಗಳ ಹಾಗೆ ಹೊಳೆಯುತ್ತಿದ್ದವು. ಚರಂಡಿಯಲ್ಲೂ ನೀರಿನೊಂದಿಗೆ ಹಿಮ ಹೋಗುವ ಹಾಗೆ ಭಾಸವಾಗುತ್ತಿತ್ತು.ಮುಂದಿನ 4 ದಿನ ರಾಜ್ಯದ ವಿವಿಧೆಡೆ ಮಳೆ ಮುನ್ಸೂಚನೆ:
ಮುಂದಿನ ನಾಲ್ಕು ದಿನಗಳವರೆಗೆ ಉತ್ತರ ಒಳನಾಡು, ದಕ್ಷಿಣ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮೋಡ ಮುಸುಕಿದ ವಾತಾವರಣ ಇರಲಿದ್ದು, ಚದುರಿದಂತೆ ಮಳೆಯಾಗಲಿದೆ. ಕೆಲ ಪ್ರದೇಶಗಳಲ್ಲಿ ಜೋರಾದ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.