ಇಂದು ದೆಹಲಿಯಲ್ಲಿ ಕರ್ನಾಟಕ ಭವನ ಲೋಕಾರ್ಪಣೆ

KannadaprabhaNewsNetwork | Published : Apr 2, 2025 1:00 AM

ಸಾರಾಂಶ

ನವದೆಹಲಿಯಲ್ಲಿ ಬುಧವಾರ ಕರ್ನಾಟಕ ಭವನ ಉದ್ಘಾಟನೆಯಾಗಲಿದೆ. ಅವೈಜ್ಞಾನಿಕವಾಗಿ, ದುಪ್ಪಟ್ಟು ವೆಚ್ಚದಲ್ಲಿ ಬರೋಬ್ಬರಿ 5 ವರ್ಷಗಳ ಸಮಯದಲ್ಲಿ ನೂತನ ಕರ್ನಾಟಕ ಭವನ ನಿರ್ಮಾಣ ಮಾಡಲಾಗಿದೆ ಎಂಬ ಆರೋಪಗಳ ನಡುವೆಯೇ ಭವನ ಬುಧವಾರ ಲೋಕಾರ್ಪಣೆಗೊಳ್ಳಲಿದೆ.

ಕನ್ನಡಪ್ರಭ ವಾರ್ತೆ ನವದೆಹಲಿ ನವದೆಹಲಿಯಲ್ಲಿ ಬುಧವಾರ ಕರ್ನಾಟಕ ಭವನ ಉದ್ಘಾಟನೆಯಾಗಲಿದೆ. ಅವೈಜ್ಞಾನಿಕವಾಗಿ, ದುಪ್ಪಟ್ಟು ವೆಚ್ಚದಲ್ಲಿ ಬರೋಬ್ಬರಿ 5 ವರ್ಷಗಳ ಸಮಯದಲ್ಲಿ ನೂತನ ಕರ್ನಾಟಕ ಭವನ ನಿರ್ಮಾಣ ಮಾಡಲಾಗಿದೆ ಎಂಬ ಆರೋಪಗಳ ನಡುವೆಯೇ ಭವನ ಬುಧವಾರ ಲೋಕಾರ್ಪಣೆಗೊಳ್ಳಲಿದೆ.

ಕರ್ನಾಟಕ ಭವನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟಿಸಲಿದ್ದಾರೆ. ಸಂಸತ್ ಅಧಿವೇಶನ ನಡೆಯುವಾಗಲೇ ಭವನ ಉದ್ಘಾಟನೆ ಮಾಡಿದರೆ ಸಂಸದರು ಮತ್ತು ಕೇಂದ್ರ ಮಂತ್ರಿಗಳು ಎಲ್ಲರೂ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂಬ ನಿರೀಕ್ಷೆಯೊಂದಿಗೆ ಬುಧವಾರಕ್ಕೆ ಕಾರ್ಯಕ್ರಮ ನಿಗದಿ ಪಡಿಸಲಾಗಿದೆ.₹138 ಕೋಟಿ ವೆಚ್ಚದಲ್ಲಿ ನಿರ್ಮಾಣ:

₹81 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಬೇಕು ಎಂದು ಹೊರಟ ಕರ್ನಾಟಕ ಸರ್ಕಾರ, ಕೊನೆಗೆ ₹138 ಕೋಟಿ ವೆಚ್ಚದಲ್ಲಿ ಕಟ್ಟಡ ಕಾಮಗಾರಿ ಮುಗಿಸಿದೆ. ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಸರ್ಕಾರದಿಂದ ಶುರುವಾಗಿ ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ಬರೋಬ್ಬರಿ 5 ವರ್ಷಗಳಲ್ಲಿ ಸರ್ಕಾರ ಬದಲಾದಂತೆ ನಿರ್ಮಾಣ ವೆಚ್ಚ ಬದಲಾಗಿದ್ದು ಆಶ್ಚರ್ಯವೇ ಸರಿ.ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ಅವಧಿಯಲ್ಲಿ ಅಂದಿನ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು ಭೂಮಿ ಪೂಜೆ ಮಾಡಿದ್ದರು. ಸರ್ಕಾರ ಬದಲಾದಂತೆ ಕಾಮಗಾರಿ ಆರಂಭಕ್ಕೆ ಗ್ರಹಣ ಹಿಡಿದಿತ್ತು. ಬಳಿಕ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕಾಲದಲ್ಲಿ ಮತ್ತೊಮ್ಮೆ ಭೂಮಿ ಪೂಜೆ ಮಾಡಲಾಗಿತ್ತು. ಕೊರೋನಾ ಸಂಕಷ್ಟ, ಮಾಲಿನ್ಯ ಸಂಕಷ್ಟ ಹಾಗೂ ಅಧಿಕಾರಿ ವರ್ಗಗಳ ನಿರ್ಲಕ್ಷ್ಯದಿಂದಾಗಿ ಕಟ್ಟಡ ಕಾಮಗಾರಿ ಆರಂಭವಾಗಿರಲಿಲ್ಲ.

ಅಂತಿಮವಾಗಿ ಸತೀಶ್ ಜಾರಕಿಹೊಳಿ ಅವರು ಲೋಕೋಪಯೋಗಿ ಸಚಿವರಾದ ಬಳಿಕ ಹಲವು ಬದಲಾವಣೆಗಳೊಂದಿಗೆ ಕಾಮಗಾರಿಯ ಕೆಲಸ ವೇಗ ಪಡೆಯಿತು.ಸಿಎಂಗೆ ವಿಶೇಷ ಸೂಟು:

7 ಅಂತಸ್ತುಗಳಲ್ಲಿ ಬೃಹತ್ ಕಟ್ಟಡ ನಿರ್ಮಾಣ ಮಾಡಲಾಗಿದೆ. ಮಲ್ಲಿಗೆ ಮತ್ತು ಸಂಪಿಗೆ ಎಂಬ ಎರಡು ವಿಶೇಷ ಸೂಟ್ ಗಳನ್ನು ನಿರ್ಮಾಣ ಮಾಡಲಾಗಿದ್ದು, ಇದರಲ್ಲಿ ಮುಖ್ಯಮಂತ್ರಿಗೆ ಪ್ರತ್ಯೇಕವಾಗಿ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ. ಉಳಿದಂತೆ ರಾಜ್ಯಪಾಲರು, ಮುಖ್ಯ ನ್ಯಾಯಮೂರ್ತಿಗಳು, ಮಂತ್ರಿಗಳಿಗೆ ಸೇರಿ 53 ಅತಿಥಿಗಳು ವಾಸ್ತವ್ಯ ಮಾಡಲು ವ್ಯವಸ್ಥೆ ಮಾಡಲಾಗಿದೆ. ದೆಹಲಿಯ ವಿಶೇಷ ಪ್ರತಿನಿಧಿಗಳು, ನಿವಾಸಿ ಆಯುಕ್ತರ ಕಚೇರಿಗಳು, ಇತರ ಆಡಳಿತ ಕಚೇರಿಗಳನ್ನು ಒಂದೇ ಸೂರಿನಡಿ ತರಲಾಗಿದೆ.

Share this article