ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಆಕ್ಷೇಪಾರ್ಹ ಪದ ಬಳಸಿದ ಆರೋಪದ ಮೇರೆಗೆ ಬಿಜೆಪಿಯ ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ ಸದಸ್ಯ ಸಿ.ಟಿ.ರವಿ ಅವರ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿ ಕಲಾಪ ಮುಗಿಯುತ್ತಿದ್ದಂತೆಯೇ ಅವರನ್ನು ಬಂಧಿಸಲಾಗಿದೆ.
ಸುವರ್ಣ ವಿಧಾನಸೌಧ : ವಿಧಾನಮಂಡಲದ ಇತಿಹಾಸದಲ್ಲೇ ಕಂಡು ಕೇಳರಿಯದ ಘಟನೆ ನಡೆದಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಆಕ್ಷೇಪಾರ್ಹ ಪದ ಬಳಸಿದ ಆರೋಪದ ಮೇರೆಗೆ ಬಿಜೆಪಿಯ ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ ಸದಸ್ಯ ಸಿ.ಟಿ.ರವಿ ಅವರ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿ ಕಲಾಪ ಮುಗಿಯುತ್ತಿದ್ದಂತೆಯೇ ಅವರನ್ನು ಬಂಧಿಸಲಾಗಿದೆ.
ಅಂಬೇಡ್ಕರ್ ಕುರಿತ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆ ಹಿನ್ನೆಲೆಯಲ್ಲಿ ವಿಧಾನಪರಿಷತ್ತಿನಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಕೊನೆಗೆ ಸಿ.ಟಿ.ರವಿ ಅವರ ಬಂಧನಕ್ಕೆ ತಿರುಗಿತು. ರವಿ ಅವರನ್ನು ಖಾನಾಪುರ ಠಾಣೆಗೆ ಪೊಲೀಸರು ಕರೆದೊಯ್ದಿದ್ದಾರೆ. ಘಟನೆ ಪರ ಮತ್ತು ವಿರೋಧವಾಗಿ ಉಭಯ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆಯನ್ನೂ ಮುಂದುವರೆಸಿದ್ದಾರೆ. ಕಾಂಗ್ರೆಸ್ ನಾಯಕರು ರವಿ ವಿರುದ್ಧ ಹರಿಹಾಯ್ದರೆ, ಬಿಜೆಪಿ ನಾಯಕರು ಬಂಧನ ಕುರಿತಂತೆ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶುರುವಾಗಿದ್ದು ಹೀಗೆ...:
ಈ ಪ್ರತಿಭಟನೆ ವೇಳೆ ಸದನದ ಕಲಾಪ ಮುಂದೂಡಿದ ಸಂದರ್ಭ ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರಮುಖ ಪ್ರತಿಪಕ್ಷ ಬಿಜೆಪಿಯ ಸದಸ್ಯರ ನಡುವೆ ವಾಕ್ಸಮರ ನಡೆಯಿತು. ಈ ಸಂದರ್ಭ ತಮ್ಮ ವಿರುದ್ಧ ಕೊಲೆಗಾರ ಎಂಬ ಪದ ಬಳಸಿದ್ದರಿಂದ ರವಿ ಅವರು ಆಕ್ರೋಶಗೊಂಡು ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಆಕ್ಷೇಪಾರ್ಹ ಪದ ಬಳಸಿದರು ಎನ್ನಲಾಗಿದೆ. ಇದರಿಂದ ನೊಂದ ಹೆಬ್ಬಾಳ್ಕರ್ ಅವರು ಸದನದಿಂದ ಕಣ್ಣೀರು ಹಾಕಿಕೊಂಡೇ ಹೊರಬಂದು ತಮ್ಮ ಇತರ ಸದಸ್ಯರೊಂದಿಗೆ ಆಗಿರುವ ಘಟನೆ ಹಂಚಿಕೊಂಡರು. ಬಳಿಕ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೂ ದೂರು ನೀಡಿದರು.
ಆದರೆ, ರವಿ ಅವರು ತಾವು ಸಚಿವೆ ಹೆಬ್ಬಾಳ್ಕರ್ ಆರೋಪಿಸಿದಂತೆ ಯಾವುದೇ ಆಕ್ಷೇಪಾರ್ಹ ಬಳಸಿಲ್ಲ ಎಂದು ಸ್ಪಷ್ಟನೆ ನೀಡಿದರೂ ಪ್ರಯೋಜನವಾಗಲಿಲ್ಲ. ಕೆಲಹೊತ್ತಿನ ಬಳಿಕ ರವಿ ಅವರು ಹೊರಗೆ ಹೋಗಿ ವಾಪಸ್ ಸುವರ್ಣ ವಿಧಾನಸೌಧಕ್ಕೆ ವಾಪಸಾಗುವ ಹೊತ್ತಿಗೆ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರಗೊಂಡಿತ್ತು. ಇದರಿಂದ ಕೆಂಡಾಮಂಡಲವಾದ ಹೆಬ್ಬಾಳ್ಕರ್ ಬೆಂಬಲಿಗರು ರವಿ ಅವರ ಕಾರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಜತೆಗೆ ರವಿ ಅವರ ಮೇಲೆ ಹಲ್ಲೆ ಮಾಡುವ ಪ್ರಯತ್ನವೂ ನಡೆಯಿತು. ಮಾರ್ಷಲ್‌ಗಳ ಸಮಯ ಪ್ರಜ್ಞೆಯಿಂದ ಸ್ವಲ್ಪದರಲ್ಲಿಯೇ ರವಿ ಅವರು ಬಚಾವ್ ಆದರು. ಪೊಲೀಸರು ತಕ್ಷಣವೇ ಹಲ್ಲೆ ಮಾಡಲು ಮುಂದಾದವರನ್ನು ವಶಕ್ಕೆ ಪಡೆದು ಕರೆದೊಯ್ದರು. ಬಳಿಕ ರವಿ ಅವರಿಗೆ ರಕ್ಷಣೆ ನೀಡಬೇಕು ಎಂದು ಬಿಜೆಪಿ ಸದಸ್ಯರು ಸಭಾಪತಿಗಳಿಗೆ ಲಿಖಿತ ಮನವಿ ಸಲ್ಲಿಸಿದರು.
ರವಿ ಅವರ ಮೇಲೆ ಹಲ್ಲೆ ಯತ್ನ ನಡೆದ ಹಿನ್ನೆಲೆಯಲ್ಲಿ ಪೊಲೀಸರು ಸಾರ್ವಜನಿಕರನ್ನು ಹೊರಗೆ ಕಳುಹಿಸಲು ಆರಂಭಿಸಿದರು. ಅಷ್ಟೇ ಅಲ್ಲ ಕೆಲವು ಗೇಟ್‌ಗಳಲ್ಲಿ ಸಾರ್ವಜನಿಕರ ಸಂಚಾರವನ್ನು ಸಹ ನಿರ್ಬಂಧಿಸಲಾಯಿತು.
ಇದೇ ವೇಳೆ ಹೆಬ್ಬಾಳ್ಕರ್ ನೀಡಿದ ದೂರಿನ ಅನ್ವಯ ಸಭಾಪತಿಗಳು ರವಿ ಅವರ ಆಕ್ಷೇಪಾರ್ಹ ಹೇಳಿಕೆ ಸಂಬಂಧ ಸಾಕ್ಷ್ಯಗಳನ್ನು ಪರಿಶೀಲಿಸಿದರು. ಕಾಂಗ್ರೆಸ್‌ನ ನಾಗರಾಜ್ ಯಾದವ್, ಡಾ। ಯತೀಂದ್ರ ಸಿದ್ದರಾಮಯ್ಯ, ಉಮಾಶ್ರೀ ಸೇರಿದಂತೆ ಘಟನೆ ವೇಳೆ ಸದನಲ್ಲಿ ಹಾಜರಾಗಿದ್ದ ಕೆಲ ಸದಸ್ಯರನ್ನು ಕರೆಸಿ ಮಾಹಿತಿ ಪಡೆದರು. ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ರವಿ ಅವರನ್ನು ಪ್ರತ್ಯೇಕವಾಗಿ ಕರೆಸಿ ವಿಚಾರಿಸಿದರು. ಸದನದಲ್ಲಿನ ಆಡಿಯೋ, ವಿಡಿಯೋದಲ್ಲಿ ದಾಖಲಾಗಿದೆಯೇ ಎಂಬುದನ್ನು ಪತ್ತೆಹಚ್ಚುವ ಪ್ರಯತ್ನ ನಡೆದರೂ ಯಾವುದೇ ದಾಖಲೆ ಸಿಗಲಿಲ್ಲ. ಅಷ್ಟರ ಹೊತ್ತಿಗೆ ಸಚಿವೆ ಹೆಬ್ಬಾಳ್ಕರ್ ಅವರು ಸುವರ್ಣ ವಿಧಾನಸೌಧಕ್ಕೆ ಸಮೀಪದ ಹಿರೇಬಾಗೇವಾಡಿ ಪೊಲೀಸ್ ಠಾಣೆಗೆ ತಮ್ಮ ಲೆಟರ್ ಹೆಡ್‌ನಲ್ಲಿ ದೂರನ್ನೂ ನೀಡಿದರು.
ಸದರಿ ಘಟನೆ ಹಿನ್ನೆಲೆಯಲ್ಲಿ ಸದನದಲ್ಲಿ ಬೇರೆ ಯಾವುದೇ ಕಲಾಪ ನಡೆಯಲೇ ಇಲ್ಲ. ಸುಮಾರು ನಾಲ್ಕೂವರೆ ಗಂಟೆಗಳ ನಂತರ ಅಂದರೆ ಸಂಜೆ 5.30ಕ್ಕೆ ಮತ್ತೆ ಕಲಾಪ ಆರಂಭವಾಯಿತು.
ಸಭಾಪತಿ ಹೊರಟ್ಟಿ ಮಾತನಾಡಿ, ಸಿ.ಟಿ.ರವಿ ಅವರು ಹೇಳಿಕೆ ಮೂಲಕ ಮಾನಿಹಾನಿ ಮಾಡಿದ್ದಾರೆ ಎಂದು ಲಕ್ಷ್ಮೀ ಹೆಬಾಳ್ಕರ್ ದೂರು ನೀಡಿದ್ದಾರೆ. ಸದನದ ಆವರಣದಲ್ಲಿ ಅಪಮಾನಕಾರ ಭಾಷೆ ಬಳಸಕೂಡದು. ಸದನದ ವ್ಯಾಪ್ತಿಯಲ್ಲಿ ಬರುವ ವಿದ್ಯುನ್ಮಾನ ಮಾಧ್ಯಮಗಳ ಪರಿಶೀಲನೆ ಮಾಡಿದ್ದೇನೆ. ಸಿ.ಟಿ.ರವಿಗೆ ಹೆಬ್ಬಾಳ್ಕರ್ ನೀಡಿದ ದೂರನ್ನು ಓದಿ ತಿಳಿಸಲಾಗಿದೆ. ಆ ರೀತಿ ಪದ ಬಳಸಿಲ್ಲ ಎಂದು ಸಿ.ಟಿ.ರವಿ ಸ್ಪಷ್ಟನೆ ನೀಡಿದ್ದಾರೆ. ಸಭಾಪತಿಯಾಗಿ ಅನುಚಿತ ಪದಗಳು ಹಾಗೂ ಅವಹೇಳನಕಾರಿ ಪದ ಬಳಕೆ ನಾನು ಕಂಡಿಲ್ಲ. ಸಿ.ಟಿ.ರವಿ ಹೇಳಿದ್ದಾರೆ ಎನ್ನಲಾದ ಪದಗಳು ಗೌರವ ತರುವಂಥದ್ದಲ್ಲ. ನಾವು ಇತರರಿಗೆ ಮಾದರಿಯಾಗಿರಬೇಕು. ಹೀಗಾಗಿ ಸದನದ ಎಲ್ಲ ಸದಸ್ಯರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.
ಸದನ ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಬಳಿಕ ಕಾಂಗ್ರೆಸ್ ಸದಸ್ಯರು ಭಾರತ ಮಾತಾಕೀ ಜೈ ಎಂದು ಘೋಷಣೆ ಕೂಗಿದರು. ಇದಕ್ಕೆ ಬಿಜೆಪಿ ಸದಸ್ಯರು ದನಿಗೂಡಿಸಿದರು. ಹೆಣ್ಣು ಮಕ್ಕಳ ಬಗ್ಗೆ ಗೌರವ ಇಲ್ಲದ ನೀವು ಭಾರತ ಮಾತೆಗೆ ಏಕೆ ಜೈಕಾರ ಕೂಗುವಿರಿ ಎಂದು ಕಾಂಗ್ರೆಸ್ ಸದಸ್ಯರು ಬಿಜೆಪಿ ಸದಸ್ಯರು ವಿರುದ್ಧ ವಿರುದ್ಧ ಮತ್ತೆ ಮುಗಿಬಿದ್ದರು. ಸದನದಲ್ಲಿದ್ದ ಸಿ.ಟಿ.ರವಿಗೆ ಧಿಕ್ಕಾರ ಕೂಗಿದರು. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸಿ.ಟಿ.ರವಿಯನ್ನು ಉದ್ದೇಶಿಸಿ, ನಿಮ್ಮ ಮನೆಯಲ್ಲಿ ತಾಯಿ ಇಲ್ಲವೇ, ಹೆಂಡತಿ ಇಲ್ಲವೇ, ಮಗಳು ಇಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಕಾಂಗ್ರೆಸ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಬಸನಗೌಡ ಬಾದರ್ಲಿ, ಐವಾನ್ ಡಿಸೋಜಾ, ಸಚಿವರಾದ ಡಿ.ಕೆ.ಶಿವಕುಮಾರ್, ಬೈರತಿ ಸುರೇಶ್ ಸೇರಿದಂತೆ ಕಾಂಗ್ರೆಸ್ ಸದಸ್ಯರು ರವಿಯನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಅರಿತ ಮಾರ್ಷಲ್‌ಗಳು, ಸಿ.ಟಿ.ರವಿಯನ್ನು ಸುತ್ತುವರೆದು ಸಭಾಪತಿ ಕಚೇರಿ ಕಡೆಗೆ ಕರೆದೊಯ್ದರು. ಕಾಂಗ್ರೆಸ್ ಸದಸ್ಯರು ಬಿಜೆಪಿ ಸದಸ್ಯರತ್ತ ಬಾರದಂತೆ ತಡೆದು ನಿಲ್ಲಿಸಿದರು.
ಅಕ್ಷರಶಃ ಎತ್ತಿಕೊಂಡು ಹೋದ ಖಾಕಿ:
ಇಷ್ಟು ಆಗುವ ಹೊತ್ತಿಗೆ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಸಚಿವೆ ಹೆಬ್ಬಾಳ್ಕರ್ ನೀಡಿದ ದೂರಿನ ಅನ್ವಯ ರವಿ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಬಂಧನಕ್ಕೆ ಕ್ಷಣಗಣನೆ ಆರಂಭವಾಗಿತ್ತು. ರವಿ ಅವರು ಅವರು ಮಾರ್ಷಲ್‌ಗಳ ಭದ್ರತೆಯೊಂದಿಗೆ ಸುವರ್ಣ ವಿಧಾನಸೌಧದ ಪ್ರವೇಶ ದ್ವಾರದಿಂದ ಹೊರನಡೆಯುವಾಗ ಅಲ್ಲಿನ ಮೆಟ್ಟಿಲುಗಳ ಮೇಲೆ ಕುಳಿತು ಧರಣಿ ಆರಂಭಿಸಿದರು. ಬಿಜೆಪಿಯ ಹಲವು ಸದಸ್ಯರು ಸಾಥ್ ನೀಡಿದರು. ಕೆಲಕ್ಷಣಗಳಲ್ಲಿಯೇ ಪೊಲೀಸರು ವಶಕ್ಕೆ ಪಡೆದು ಅಕ್ಷರಶಃ ರವಿ ಮತ್ತಿತರರನ್ನು ಎತ್ತಿಕೊಂಡು ವಾಹನದಲ್ಲಿ ಕೂಡಿಸಿಕೊಂಡು ಹೊರಟರು. ಹಿರೇಬಾಗೇವಾಡಿ ಠಾಣೆಯಲ್ಲಿ ಇತರ ಸದಸ್ಯರನ್ನು ಇಳಿಸಿ ನಂತರ ರವಿ ಅವರನ್ನು ಖಾನಾಪುರ ಠಾಣೆಗೆ ಕರೆದೊಯ್ದರು.