5,8, 9ನೇ ಕ್ಲಾಸ್‌ ಬೋಡ್೯ ಪರೀಕ್ಷೆ ಫಲಿತಾಂಶಕ್ಕೆ ತಡೆ

KannadaprabhaNewsNetwork | Published : Apr 9, 2024 12:47 AM

ಸಾರಾಂಶ

5,8 ಮತ್ತು 9ನೇ ತರಗತಿ ಬೋಡ್೯ ಪರೀಕ್ಷೆ ಕುರಿತಂತೆ ಕರ್ನಾಟಕ ಹೈಕೋರ್ಟ್‌ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿರುವ ಸುಪ್ರೀಂಕೋರ್ಟ್‌, ಬೋಡ್೯ ಪರೀಕ್ಷೆಯ ಫಲಿತಾಂಶ ಪ್ರಕಟಿಸದಂತೆ ಆದೇಶ ನೀಡಿದೆ.

ಕನ್ನಡಪ್ರಭ ವಾರ್ತೆ ದೆಹಲಿ/ಬೆಂಗಳೂರು

5,8 ಮತ್ತು 9ನೇ ತರಗತಿ ಬೋಡ್೯ ಪರೀಕ್ಷೆ ಕುರಿತಂತೆ ಕರ್ನಾಟಕ ಹೈಕೋರ್ಟ್‌ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿರುವ ಸುಪ್ರೀಂಕೋರ್ಟ್‌, ಬೋಡ್೯ ಪರೀಕ್ಷೆಯ ಫಲಿತಾಂಶ ಪ್ರಕಟಿಸದಂತೆ ಆದೇಶ ನೀಡಿದೆ. ಈ ಸಂಬಂಧ ಎರಡು ವಾರಗಳಲ್ಲಿ ಉತ್ತರಿಸುವಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದ್ದು, ಏಪ್ರಿಲ್ 23ಕ್ಕೆ ವಿಚಾರಣೆಯನ್ನು ಮುಂದೂಡಿದೆ.

ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ 5,8 ಮತ್ತು 9ನೇ ತರಗತಿಗಳಿಗೆ ವಾರ್ಷಿಕ ಪರೀಕ್ಷೆಯನ್ನು ಬೋಡ್೯ ಮೂಲಕ ನಡೆಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹೊರಡಿಸಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠ ರದ್ದುಗೊಳಿಸಿತ್ತು. ಈ ಪ್ರಕರಣದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್‌ನ ವಿಭಾಗೀಯ ಪೀಠ, ಏಕಸದಸ್ಯ ಪೀಠದ ಆದೇಶಕ್ಕೆ ಮಧ್ಯಂತರ ತಡೆ ನೀಡಿತ್ತು.

ಸರ್ಕಾರ ಪ್ರಕಟಿಸಿರುವ ವೇಳಾಪಟ್ಟಿಯಂತೆ ಪರೀಕ್ಷೆ ನಡೆಸಲು ಸೂಚಿಸಿತ್ತು. ಇದೀಗ, ಪರೀಕ್ಷೆ ನಡೆದು ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಈ ಮಧ್ಯೆ, ಹೈಕೋರ್ಟ್‌ನ ವಿಭಾಗೀಯ ಪೀಠದ ಆದೇಶಕ್ಕೆ ಸುಪ್ರೀಂಕೋರ್ಟ್, ಮಧ್ಯಂತರ ತಡೆಯಾಜ್ಞೆ ನೀಡಿದೆ.ನಿನ್ನೆ ಬೆಳಗ್ಗೆಯೇ ಫಲಿತಾಂಶ ಪ್ರಕಟ ತಡೆ ಬಗ್ಗೆ ಕಾನೂನು ಸಲಹೆ ಪಡೆದು ಮುಂದಿನ ನಿರ್ಧಾರ: ಶಿಕ್ಷಣ ಇಲಾಖೆ

ರಾಜ್ಯ ಪಠ್ಯಕ್ರಮದ ಶಾಲೆಗಳ 5, 8, 9 ನೇ ತರಗತಿ ಬೋರ್ಡ್‌ ಪರೀಕ್ಷೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನೀಡಿರುವ ಮಧ್ಯಂತರ ತೀರ್ಪಿನ ಸಂಬಂಧ ಕಾನೂನು ಇಲಾಖೆ ಸಲಹೆ ಪಡೆದು ಮುಂದೇನು ಮಾಡಬೇಕೆಂದು ನಿರ್ಧರಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ತೀರ್ಮಾನಿಸಿದೆ.

ಬೋರ್ಡ್‌ ಪರೀಕ್ಷೆ ನಡೆಸಲು ಹೈಕೋರ್ಟ್‌ ವಿಭಾಗೀಯ ಪೀಠ ನೀಡಿದ್ದ ತೀರ್ಪು ಹಾಗೂ ಈ ತರಗತಿ ಮಕ್ಕಳಿಗೆ ಪರೀಕ್ಷೆ, ಮೌಲ್ಯಾಂಕನ ನಡೆಸಿದ ಬಳಿಕ ಸೋಮವಾರವಷ್ಟೆ ಪ್ರಕಟಿಸಿರುವ ಫಲಿತಾಂಶಕ್ಕೆ ಸುಪ್ರಿಂಕೋರ್ಟ್‌ ತಡೆ ನೀಡಿ ಸೋಮವಾರ ಮಧ್ಯಂತರ ಆದೇಶ ನೀಡಿದೆ. ಜೊತೆಗೆ ಈ ಆದೇಶದಿಂದ ವಿದ್ಯಾರ್ಥಿಗಳಿಗೆ ಆಗುವ ಗೊಂದಲ ನಿವಾರಣೆಗೆ ತಕ್ಷಣ ಅಗತ್ಯ ಕ್ರಮ ಕೈಗೊಳ್ಳುವಂತೆಯೂ ಸರ್ವೋಚ್ಚ ನ್ಯಾಯಾಲಯ ಸೂಚಿಸಿದೆ. ಇದರಿಂದ ಬೋರ್ಡ್‌ ಪರೀಕ್ಷೆ ವಿಚಾರದಲ್ಲಿ ಇಲಾಖೆಯ ನಡೆಗೆ ಹಿನ್ನಡೆಯಾದಂತಾಗಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಮುಂದೇನು ಮಾಡಬೇಕೆಂದು ತಿಳಿಯದೆ ಗೊಂದಲಕ್ಕೆ ಸಿಲುಕಿದ್ದಾರೆ.

ಈ ಸಂಬಂಧ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್‌ ಕುಮಾರ್‌ ಸಿಂಗ್‌ ಅವರು ಪ್ರತಿಕ್ರಿಯೆ ನೀಡಿದ್ದು, ನ್ಯಾಯಾಲಯದ ಆದೇಶದ ವಿಚಾರದಲ್ಲಿ ಇಲಾಖೆ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗುವುದಿಲ್ಲ. ಕಾನೂನು ಇಲಾಖೆಯ ಸಲಹೆ ಪಡೆದು ಮುಂದುವರೆಯಬೇಕಾಗುತ್ತದೆ. ಈಗಾಗಲೇ ಪರೀಕ್ಷೆ ಮುಗಿದು, ಸೋಮವಾರ ಫಲಿತಾಂಶವನ್ನು ಕೂಡ ಪ್ರಕಟಿಸಲಾಗಿದೆ. 2023-24ನೇ ಸಾಲಿನ ಶೈಕ್ಷಣಿಕ ವರ್ಷ ಪೂರ್ಣಗೊಂಡಿದ್ದು, ಮಂಗಳವಾರದಿಂದ ಬೇಸಿಗೆ ರಜೆ ಶುರುವಾಗಲಿದೆ. ಈ ಎಲ್ಲ ಅಂಶಗಳನ್ನೂ ರಾಜ್ಯ ಅಡ್ವೊಕೇಟ್‌ ಜನರಲ್‌ ಅವರೊಂದಿಗೆ ಚರ್ಚಿಸಿ ಅವರ ಸಲಹೆಯಂತೆ ಮುಂದಿನ ಹೆಜ್ಜೆ ಇಡಬೇಕಾಗುತ್ತದೆ. ಅದರಂತೆ ನಡೆಯುತ್ತೇವೆ ಎಂದು ಹೇಳಿದರು.

Share this article