ಹಾವೇರಿ: ಹೊಲಿಗೆ ಯಂತ್ರ ವಿತರಣೆ, ಅಂತರ್ಜಾತಿ ವಿವಾಹದ ಪ್ರೋತ್ಸಾಹಧನ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳು ಸ್ಥಗಿತಗೊಂಡಿದ್ದು, ಬಡವರು, ಆರ್ಥಿಕವಾಗಿ ಹಿಂದುಳಿದವರ ಸಬಲೀಕರಣಕ್ಕಾಗಿ ಸ್ಥಗಿತಗೊಂಡಿರುವ ಯೋಜನೆಗಳನ್ನು ರಾಜ್ಯ ಸರ್ಕಾರ ಮರುಜಾರಿಗೊಳಿಸುವಂತೆ ಒತ್ತಾಯಿಸಿ ಕರವೇ ಜಿಲ್ಲಾ ಘಟಕದ ಮುಖಂಡರು ನಗರದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.ಈ ವೇಳೆ ಸಂಘಟನೆ ರಾಜ್ಯ ಕಾರ್ಯದರ್ಶಿ ಕರಬಸಯ್ಯ ಬಸರಿಹಳ್ಳಿಮಠ ಮಾತನಾಡಿ, ಕಾರ್ಮಿಕ ಇಲಾಖೆಯಲ್ಲಿ ಬಡ ಕಾರ್ಮಿಕರ ಕಲ್ಯಾಣಕ್ಕಾಗಿ ಸಾಕಷ್ಟು ಯೋಜನೆಗಳು ಇದ್ದು, 2022ರಿಂದ ಇಲ್ಲಿಯವರೆಗೆ ಅನೇಕ ಯೋಜನೆಗಳು ಫಲಾನುಭವಿಗಳಿಗೆ ಸಿಗುತ್ತಿಲ್ಲ. ಸಮಾಜ ಕಲ್ಯಾಣ ಇಲಾಖೆಯಲ್ಲಿ ಅಂರ್ತಜಾತಿ ವಿವಾಹದ ಪ್ರೋತ್ಸಾಹಧನ ಬಿಡುಗಡೆಯಾಗದೆ ಇರುವುದರಿಂದ ಫಲಾನುಭವಿಗಳು ಇಲಾಖೆಗಳಿಗೆ ಅಲೆದಾಡಿ ಹೈರಾಣಾಗುತ್ತಿದ್ದಾರೆ.
ಸರ್ಕಾರಿ ಶಾಲಾ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು, ದುರಸ್ತಿಗೆ ಕ್ರಮ ವಹಿಸಬೇಕು. ನರೇಗಾ ಯೋಜನೆಯಡಿ ಕೆಲಸ ಮಾಡಿದ ಬಡ ಕೂಲಿಕಾರರಿಗೆ ಕೂಲಿ ಹಣ ಪಾವತಿಯಾಗದೆ ಜೀವನ ನಡೆಸುವುದು ದುಸ್ತರವಾಗಿದ್ದು, ಕೂಲಿ ಪಾವತಿಗೆ ಕ್ರಮ ಕೈಗೊಳ್ಳಬೇಕು. ಅಕ್ರಮ ಚಟುವಟಿಕೆಗಳು ಅವ್ಯಾವಹತವಾಗಿ ನಡೆಯುತ್ತಿದ್ದು, ಕಡಿವಾಣ ಹಾಕಬೇಕು. ಸಮರ್ಪಕ ಬಸ್ ಸೌಲಭ್ಯ, ಕನ್ನಡದಲ್ಲಿಕ ಕಡ್ಡಾಯ ನಾಮಫಲಕ ಅಳವಡಿಕೆಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಸತೀಶಗೌಡ ಮುದಿಗೌಡ್ರ, ತಾಲೂಕಾಧ್ಯಕ್ಷ ಹಾಲೇಶ ಹಾಲಣ್ಣನವರ, ಹಸನಸಾಬ ಹತ್ತಿಮತ್ತೂರ, ಕೊಟ್ರೇಶ್ ಗುತ್ತೂರ, ಚನ್ನಪ್ಪ ಹೊನ್ನಮ್ಮನವರ, ಬಸವರಾಜ ಅರಳಿ, ಶಿವಾನಂದ ಪೂಜಾರ, ಸತ್ಯವತಿ ಕಡೇರ, ರೇಣುಕಾ ಬಡಕಣ್ಣವರ, ಈರಮ್ಮ ಕಾಡಸಾಲಿ ಮೊದಲಾದವರು ಇದ್ದರು.