ಶಾಸಕ ಸೈಲ್‌ ಅಕ್ರಮದಿಂದ ರಾಜ್ಯಕ್ಕೆ ₹44 ಕೋಟಿ ನಷ್ಟ

KannadaprabhaNewsNetwork |  
Published : Nov 16, 2025, 01:45 AM IST
ಸತೀಶ್‌ ಸೈಲ್‌ | Kannada Prabha

ಸಾರಾಂಶ

ಉತ್ತರ ಕನ್ನಡ ಜಿಲ್ಲೆ ಬೇಲೆಕೇರಿ ಬಂದರಿನಿಂದ ಕಬ್ಬಿಣದ ಅದಿರು ಅಕ್ರಮ ರಫ್ತು ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದಡಿ ಕಾಂಗ್ರೆಸ್‌ ಶಾಸಕ ಸತೀಶ್‌ ಕೃಷ್ಣ ಸೈಲ್‌ ಮತ್ತು ಅವರ ಕಂಪನಿ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ.) ನಗರದ ಪಿಎಂಎಲ್‌ಎ ವಿಶೇಷ ಕೋರ್ಟ್‌ಗೆ ದೋಷಾರೋಪಪಟ್ಟಿ ಸಲ್ಲಿಸಿದೆ. ಅದಿರಿನ ಅಕ್ರಮ ರಫ್ತಿನಿಂದ ಸರ್ಕಾರದ ಖಜಾನೆಗೆ ಸಮಾರು 44.09 ಕೋಟಿ ರು. ನಷ್ಟವುಂಟಾಗಿದೆ ಎಂದು ದೋಷಾರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

- ಬೇಲೇಕೇರಿ ಅದಿರು ಸಾಗಣೆ ಕೇಸ್‌

- ಶಾಸಕನ ಮೇಲೆ ಇ.ಡಿ. ಜಾರ್ಜ್‌ಶೀಟ್‌

--

ಚಾರ್ಜ್‌ಶೀಟಲ್ಲೇನಿದೆ?

- ಮಲ್ಲಿಕಾರ್ಜುನ ಶಿಪ್ಪಿಂಗ್‌ ಕಂಪನಿಗೆ ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್ ಮುಖ್ಯಸ್ಥ

- ಈ ಕಂಪನಿ ಮೂಲಕ ಬೇಲೇಕೇರಿ ಬಂದರಿಂದ 8 ಲಕ್ಷ ಟನ್‌ ಅದಿರು ಅಕ್ರಮ ರಫ್ತು

- ಆದರೆ ದಾಖಲೆಯಲ್ಲಿ ಈ ಕಂಪನಿ ಹೆಸರು ನಮೂದಿಸದೇ ಅಕ್ರಮವಾಗಿ ಸಾಗಣೆ

- ಈ ರೀತಿಯ ಬೇನಾಮಿ ಸಾಗಣೆಯಿಂದ ರಾಜ್ಯದ ಬೊಕ್ಕಸಕ್ಕೆ ₹44 ಕೋಟಿ ಹಾನಿ

- ಇದೇ ಪ್ರಕರಣದಲ್ಲಿ ಸೆಪ್ಟೆಂಬರಲ್ಲಿ ಇ.ಡಿ.ಯಿಂದ ಬಂಧಿತರಾಗಿದ್ದ ಶಾಸಕ ಸೈಲ್

===

ಕನ್ನಡಪ್ರಭ ವಾರ್ತೆ ಬೆಂಗಳೂರು

ಉತ್ತರ ಕನ್ನಡ ಜಿಲ್ಲೆ ಬೇಲೆಕೇರಿ ಬಂದರಿನಿಂದ ಕಬ್ಬಿಣದ ಅದಿರು ಅಕ್ರಮ ರಫ್ತು ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದಡಿ ಕಾಂಗ್ರೆಸ್‌ ಶಾಸಕ ಸತೀಶ್‌ ಕೃಷ್ಣ ಸೈಲ್‌ ಮತ್ತು ಅವರ ಕಂಪನಿ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ.) ನಗರದ ಪಿಎಂಎಲ್‌ಎ ವಿಶೇಷ ಕೋರ್ಟ್‌ಗೆ ದೋಷಾರೋಪಪಟ್ಟಿ ಸಲ್ಲಿಸಿದೆ. ಅದಿರಿನ ಅಕ್ರಮ ರಫ್ತಿನಿಂದ ಸರ್ಕಾರದ ಖಜಾನೆಗೆ ಸಮಾರು 44.09 ಕೋಟಿ ರು. ನಷ್ಟವುಂಟಾಗಿದೆ ಎಂದು ದೋಷಾರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಉತ್ತರ ಕನ್ನಡ ಜಿಲ್ಲೆ ಕಾರವಾರ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್‌ ಕೃಷ್ಣ ಸೈಲ್‌ ಮತ್ತು ಅವರೇ ವ್ಯವಸ್ಥಾಪಕ ನಿರ್ದೇಶಕರಾಗಿರುವ ಮಲ್ಲಿಕಾರ್ಜುನ ಶಿಪ್ಪಿಂಗ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯನ್ನು ಆರೋಪಿ ಎಂದು ಪರಿಗಣಿಸಲಾಗಿದೆ. ಪ್ರಕರಣ ಸಂಬಂಧ ಸೆಪ್ಟೆಂಬರ್‌ನಲ್ಲಿ ಇ.ಡಿ.ಅಧಿಕಾರಿಗಳು ಸತೀಶ್‌ ಸೈಲ್‌ ಅವರನ್ನು ಬಂಧಿಸಿದ್ದರು.

ಸುಮಾರು ₹44 ಕೋಟಿ ಮೌಲ್ಯದ ಕಬ್ಬಿಣದ ಅದಿರು ಅಕ್ರಮ ರಫ್ತು ಸಂಬಂಧ 2010ರಲ್ಲಿ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿದ್ದರು. ಆ ಬಳಿಕ ಇ.ಡಿ. ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿತ್ತು. ಬಳ್ಳಾರಿಯಿಂದ ಬೇಲೆಕೇರಿ ಬಂದರಿಗೆ ಸುಮಾರು 8 ಲಕ್ಷ ಟನ್‌ ಕಬ್ಬಿಣದ ಅದಿರು ಅಕ್ರಮವಾಗಿ ಸಾಗಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.

ಸರ್ಕಾರಕ್ಕೆ 44.09 ಕೋಟಿ ರು. ನಷ್ಟ:

ಬೇಲೇಕೇರಿ ಬಂದರಿನಿಂದ ಕಬ್ಬಿಣದ ಅದಿರನ್ನು ಆರೋಪಿಗಳು ಚೀನಾಕ್ಕೆ ಅಕ್ರಮವಾಗಿ ರಫ್ತು ಮಾಡಿ ಮಾರಾಟ ಮಾಡಿದ್ದರು. ಈ ಅಕ್ರಮದಲ್ಲಿ ಬೇಲೆಕೇರಿ ಬಂದರು ಅಧಿಕಾರಿಗಳು ಆರೋಪಿಗಳಿಗೆ ಸಾಥ್‌ ನೀಡಿದ್ದರು ಎಂಬುದು ಇ.ಡಿ.ತನಿಖೆಯಲ್ಲಿ ಬಯಲಾಗಿದೆ. ಅದಿರು ಅಕ್ರಮ ರಫ್ತಿನಿಂದ ಸರ್ಕಾರದ ಖಜಾನೆಗೆ ಸುಮಾರು 44.09 ಕೋಟಿ ರು. ನಷ್ಟವುಂಟಾಗಿದೆ ಎಂದು ದೋಷಾರೋಪಪಟ್ಟಿಯಲ್ಲಿ ಇ.ಡಿ. ಉಲ್ಲೇಖಿಸಿದೆ.

46.18 ಕೋಟಿ ರು. ಪಾವತಿ ಬೆಳಕಿಗೆ:

ಆರೋಪಿ ಸತೀಶ್‌ ಸೈಲ್‌ ಈ ಕಬ್ಬಿಣದ ಅದಿರನ್ನು ಅಕ್ರಮವಾಗಿ ಖರೀದಿಸಿದ್ದಕ್ಕಾಗಿ ಇತರೆ ಆರೋಪಿಗಳಿಗೆ 46.18 ಕೋಟಿ ರು. ಪಾವತಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಕಬ್ಬಿಣದ ಅದಿರನ್ನು ಸತೀಶ್‌ ಸೈಲ್‌ ಅವರು ಬಹಿರಂಗಪಡಿಸದ ವಿದೇಶಿ ಕಂಪನಿ ಹಾಂಕಾಂಗ್‌ ಜಿಐ (ಎಚ್‌ಇಬಿಇಐ) ಐರನ್‌ ಆ್ಯಂಡ್‌ ಸ್ಟೀಲ್‌ ಇನ್ವೆಸ್ಟ್‌ಮೆಂಟ್‌ ಕಂಪನಿ ಲಿಮಿಟೆಡ್‌ (ಹಿಂದಿನ ಮಲ್ಲಿಕಾರ್ಜುನ ಶಿಪ್ಪಿಂಗ್‌ ಲಿಮಿಟೆಡ್‌ ಕಂಪನಿ) ಮೂಲಕ ರಫ್ತು ಮಾಡಿದ್ದಾರೆ. ಅಂದರೆ, ಕಬ್ಬಿಣದ ಅದಿರನ್ನು ಚೀನಾದ ಖರೀದಿದಾರರಿಗೆ ನೇರವಾಗಿ ಕಳುಹಿಸುವ ಬದಲು ಅಕ್ರಮವಾಗಿ ತಲುಪಿಸಿ, ಆದಾಯವನ್ನು ಮರೆ ಮಾಚಿರುವುದು ಇ.ಡಿ.ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಸೈಲ್‌ ವಿದೇಶಿ ಬ್ಯಾಂಕ್‌ ಖಾತೆಗಳು:

ಆರೋಪಿ ಸತೀಶ್‌ ಸೈಲ್‌ ಅವರು ತಮ್ಮ ವಿದೇಶಿ ಕಂಪನಿಗೆ ಸಂಬಂಧಿಸಿ ಸ್ಟ್ಯಾಂಡರ್ಡ್‌ ಚಾರ್ಟರ್ಡ್‌ ಬ್ಯಾಂಕ್‌ (ಹಾಂಕಾಂಗ್‌), ಹಾಂಕಾಂಗ್‌ ಇಡಸ್ಟ್ರಿಯಲ್‌ ಮತ್ತು ಕಮರ್ಷಿಯಲ್‌ ಬ್ಯಾಂಕ್‌ ಆಫ್‌ ಚೀನಾ, ಐಸಿಬಿಸಿ ಬ್ಯಾಂಕ್‌ನಲ್ಲಿ ವಿದೇಶಿ ಖಾತೆಗಳನ್ನು ಹೊಂದಿರುವುದು ತನಿಖೆಯಲ್ಲಿ ಬಯಲಾಗಿದೆ. ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಸಂಬಂಧ ಇ.ಡಿ. ಇತ್ತೀಚೆಗಷ್ಟೇ ಸತೀಶ್‌ ಸೈಲ್‌ಗೆ ಸೇರಿದ 21 ಕೋಟಿ ರು. ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ.

PREV

Recommended Stories

ಡಾ. ವಿ.ಎಸ್.ವಿ. ಪ್ರಸಾದರ ಸಮಾಜ ಸೇವೆ ಅವಿಸ್ಮರಣೀಯ
ಮಕ್ಕಳು ದೇಶದ ಆಸ್ತಿ: ಆಹಾರ ಸಚಿವ ಮುನಿಯಪ್ಪ