ಕರ್ನಾಟಕ ಸುವರ್ಣ ಸಂಭ್ರಮ: ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ

KannadaprabhaNewsNetwork |  
Published : Aug 30, 2024, 01:09 AM IST
೩೨ | Kannada Prabha

ಸಾರಾಂಶ

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿರುವ ಆರು ಅಕಾಡೆಮಿಗಳಾದ ಕೊಡವ, ಅರೆಭಾಷೆ, ತುಳು, ಕೊಂಕಣಿ, ಬ್ಯಾರಿ ಹಾಗೂ ಯಕ್ಷಗಾನ ಅಕಾಡೆಮಿಗಳ ಸಹಭಾಗಿತ್ವದಲ್ಲಿ ಸೆ. 24, 25ರಂದು ಮಂಗಳೂರಿನಲ್ಲಿ ಬಹುಸಂಸ್ಕೃತಿಯ ಕಾರ್ಯಕ್ರಮ ನಡೆಯಲಿದೆ. ಆರು ಅಕಾಡೆಮಿಗಳಿಂದ ಸಾಂಸ್ಕೃತಿಕ ಪ್ರದರ್ಶನ, ವಿಚಾರಗೋಷ್ಠಿ, ಚಿತ್ರಕಲಾ ಸ್ಪರ್ಧೆ, ಭಾಷಣಸ್ಪರ್ಧೆ, ಕಿರುಚಿತ್ರ ಸ್ಪರ್ಧೆ, ಸಮೂಹಗಾನ ಸೇರಿದಂತೆ ಹತ್ತಾರು ಬಗೆಯ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ರಾಜ್ಯಕ್ಕೆ ‘ಕರ್ನಾಟಕ’ ಎಂದು ನಾಮಕರಣಗೊಂಡು 50 ವರ್ಷಗಳು ತುಂಬಿವೆ. ಆ ಪ್ರಯುಕ್ತ ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ನಮ್ಮ ನಾಡಿನ ಬಹುಸಂಸ್ಕೃತಿ ಸಾರುವ ‘ಕರ್ನಾಟಕ ಸುವರ್ಣ ಸಂಭ್ರಮ-50 ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಘೋಷವಾಕ್ಯದಡಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.

ಕೊಡಗು ಹಾಗೂ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿರುವ ಆರು ಅಕಾಡೆಮಿಗಳಾದ ಕೊಡವ, ಅರೆಭಾಷೆ, ತುಳು, ಕೊಂಕಣಿ, ಬ್ಯಾರಿ ಹಾಗೂ ಯಕ್ಷಗಾನ ಅಕಾಡೆಮಿಗಳ ಸಹಭಾಗಿತ್ವದಲ್ಲಿ ಸೆ. 24, 25ರಂದು ಮಂಗಳೂರಿನಲ್ಲಿ ಬಹುಸಂಸ್ಕೃತಿಯ ಕಾರ್ಯಕ್ರಮ ನಡೆಯಲಿದೆ.

ಆರು ಅಕಾಡೆಮಿಗಳಿಂದ ಸಾಂಸ್ಕೃತಿಕ ಪ್ರದರ್ಶನ, ವಿಚಾರಗೋಷ್ಠಿ, ಚಿತ್ರಕಲಾ ಸ್ಪರ್ಧೆ, ಭಾಷಣಸ್ಪರ್ಧೆ, ಕಿರುಚಿತ್ರ ಸ್ಪರ್ಧೆ, ಸಮೂಹಗಾನ ಸೇರಿದಂತೆ ಹತ್ತಾರು ಬಗೆಯ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ. ಮುಖ್ಯಮಂತ್ರಿ ಉದ್ಘಾಟಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು, ರಾಜ್ಯ ವಿಧಾನಸಭೆ ಅಧ್ಯಕ್ಷ, ಮೂರು ಜಿಲ್ಲೆಯ ಶಾಸಕರು, ಸಂಸದರು, ಜಿಲ್ಲಾಧಿಕಾರಿಗಳು, ಇಲಾಖಾಧಿಕಾರಿಗಳು, ಗಣ್ಯರು ಸೇರಿದಂತೆ ಇಡೀ ಎರಡು ದಿನದ ಕಾರ್ಯಕ್ರಮಕ್ಕೆ ಮೆರಗು ನೀಡಲಿದ್ದಾರೆ.

ಈ ಸಂಬಂಧ ಕೊಡಗಿನಲ್ಲಿ ಕೆಲವೊಂದು ಸ್ಪರ್ಧಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದ್ದು, ಇತ್ತೀಚೆಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಆಯಾಯ ಜಿಲ್ಲೆಗಳಲ್ಲಿ ಸಮಾಲೋಚನ ಸಭೆ ನಡೆಸಲಾಯಿತು. ಇದೀಗ ಕೊಡಗಿನಲ್ಲಿ ಪ್ರೌಢಶಾಲಾ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಿದ್ದು ಪ್ರಥಮ ಬಹುಮಾನ ರು. 3000 ನಗದು ಮತ್ತು ಪ್ರಮಾಣ ಪತ್ರ, ದ್ವಿತೀಯ ಬಹುಮಾನ ರು.2000 ನಗದು ಮತ್ತು ಪ್ರಮಾಣ ಪತ್ರ, ತೃತೀಯ ಬಹುಮಾನ ರು.1000 ಹಾಗೂ ಪ್ರಮಾಣ ಪತ್ರ ಕೊಡಲಾಗುವುದು. ಚಿತ್ರಕಲಾ ಸ್ಪರ್ಧೆಯಲ್ಲಿ ಒಂದು ಶಾಲೆಯಿಂದ ಗರಿಷ್ಠ ಮೂವರು ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ. ಸ್ಪರ್ಧೆಯಲ್ಲಿ ಪ್ರೌಢಶಾಲೆಯ 8ನೇ, 9ನೇ 10ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ ಚಿತ್ರ ಬಿಡಿಸಲು ಎ3 ಅಳತೆಯ ಡ್ರಾಯಿಂಗ್ ಶೀಟ್‌ನ್ನು ಅಕಾಡೆಮಿಗಳ ವತಿಯಿಂದ ನೀಡಲಾಗುವುದು.

ಚಿತ್ರ ಬಿಡಿಸಲು ಬೇಕಾದ ಪರಿಕರಗಳನ್ನು ವಿದ್ಯಾರ್ಥಿಗಳೇ ತರಬೇಕು. ಪೆನ್ಸಿಲ್ ಶೇಡಿಂಗ್, ಕ್ರಯಾನ್, ಬಣ್ಣದ ಪೆನ್ಸಿಲ್, ಸ್ಕೆಚ್ ಪೆನ್ ಮತ್ತು ವಾಟರ್ ಕಲರ್ ಪೈಕಿ ಯಾವುದಾದರೂ ಒಂದು ಮಾಧ್ಯಮದಲ್ಲಿ ಚಿತ್ರ ರಚಿಸಬಹುದಾಗಿದೆ. ಚಿತ್ರ ಬಿಡಿಸಲು ಗರಿಷ್ಠ 90 ನಿಮಿಷಗಳ ಕಾಲಾವಕಾಶ ನಿಗದಿ ಪಡಿಸಲಾಗಿದೆ. ಚಿತ್ರಕಲಾ ಸ್ಪರ್ಧೆಯ ವಿಷಯ ‘ಕೊಡಗಿನ ಬಹುಸಂಸ್ಕೃತಿ ಪರಂಪರೆ’.

ಭಾಷಣ ಸ್ಪರ್ಧೆ:

ಕೊಡಗಿನ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ಏರ್ಪಡಿಸಲಾಗಿದೆ. ‘ಕರ್ನಾಟಕ ಬಹುಸಂಸ್ಕೃತಿ ಪರಂಪರೆಗೆ ಕೊಡಗಿನ ಕೊಡುಗೆ, ಹಾಗೂ ಇಂದಿನ ಸವಾಲುಗಳು’ ವಿಷಯವಾಗಿ ಒಂದು ಕಾಲೇಜಿನಿಂದ ಕನಿಷ್ಠ ಇಬ್ಬರು ವಿದ್ಯಾರ್ಥಿಗಳಿಗೆ ಅವಕಾಶ ಕೊಡಲಾಗುವುದು. ಭಾಷಣ 10 ನಿಮಿಷಗಳಿಗೆ ಮೀರಬಾರದು. ಭಾಷೆ ಕನ್ನಡ ಮಾತ್ರ. ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲಾ ವಿದ್ಯಾಥಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು. ಪ್ರಥಮ ಬಹುಮಾನ ರು.3000 ನಗದು ಮತ್ತು ಪ್ರಮಾಣ ಪತ್ರ, ದ್ವಿತೀಯ ಬಹುಮಾನ ರು.2000 ನಗದು ಮತ್ತು ಪ್ರಮಾಣ ಪತ್ರ, ತೃತೀಯ ಬಹುಮಾನ ರು.1000 ನಗದು ಮತ್ತು ಪ್ರಮಾಣ ಪತ್ರ.

ಭಾಷಣ ಸ್ಪರ್ಧೆಯನ್ನು ಮೊದಲು ಆಯಾ ತಾಲೂಕು ಮಟ್ಟದಲ್ಲಿ ನಡೆಸಲಾಗುವುದು. ಇದಕ್ಕೆ ಸಂದಂಧಿಸಿದಂತೆ ಆಯಾ ತಾಲೂಕು ಕೇಂದ್ರದಲ್ಲಿ ಇಲಾಖಾ ವತಿಯಿಂದ ನಿಗದಿ ಪಡಿಸುವ ವಿದ್ಯಾ ಸಂಸ್ಥೆಯಲ್ಲಿ ಸ್ಪರ್ಧೆಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ನಡೆಸಲಾಗುವುದು. ಜಿಲ್ಲಾ ಮಟ್ಟದ ಸ್ಪರ್ಧೆಯ ಸ್ಥಳವನ್ನು ಮುಂದೆ ತಿಳಿಸಲಾಗುವುದು.

ಜಿಲ್ಲೆಯ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಕಿರುಚಿತ್ರ ಹಾಗೂ ಸಮೂಹ ಗಾನ ಸ್ಪರ್ಧೆ ಏರ್ಪಡಿಸಲಾಗಿದೆ. ಕಿರುಚಿತ್ರ ಸ್ಪರ್ಧೆಗೆ ಆಯಾ ಪದವಿ ಹಾಗೂ ಸ್ನಾತಕೋತ್ತರ ಕಾಲೇಜಿನಿಂದ ಕನಿಷ್ಠ ಇಬ್ಬರು ವಿದ್ಯಾರ್ಥಿಗಳಿಗೆ ಸ್ಪರ್ಧಿಸಲು ಅವಕಾಶ ನೀಡುವುದು.

ಕಿರುಚಿತ್ರವು: ‘ಕೊಡಗಿನ ಬಹುಸಂಸ್ಕೃತಿ ಪರಂಪರೆ’ ಪ್ರತಿಬಿಂಬಿಸುವಂತಿರಬೇಕು. ವಿಜೇತರಿಗೆ ಪ್ರಥಮ ಬಹುಮಾನ ರು.10,000 ನಗದು ಮತ್ತು ಪ್ರಮಾಣ ಪತ್ರ, ದ್ವಿತೀಯ ಬಹುಮಾನ ರು.5000 ಮತ್ತು ಪ್ರಮಾಣ ಪತ್ರ, ತೃತೀಯ ಬಹುಮಾನ ರು.3000 ಮತ್ತು ಪ್ರಮಾಣ ಪತ್ರ ನೀಡಲಾಗುವುದು. ಕಿರುಚಿತ್ರವು 5 ನಿಮಿಷಗಳಿಗೆ ಮೀರಬಾರದು. ಭಾಷೆ ಕನ್ನಡ ಮಾತ್ರ. ಸ್ಪರ್ಧೆಗೆ ಕಿರುಚಿತ್ರ ಕಳುಹಿಸಿಕೊಡುವವರು kodavaacademy@gmail.com, arebaseacademy@gmail.com ಅಥವಾ ಪೆನ್ ಡ್ರೈವ್ ಮೂಲಕ ಅಧ್ಯಕ್ಷರು / ರಿಜಿಸ್ಟ್ರಾರ್, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಜೂನಿಯರ್ ಕಾಲೇಜು ರಸ್ತೆ, ಸ್ಕೌಟ್ಸ್ ಭವನ, ಮ್ಯಾನ್ಸ್ ಕಾಂಪೌಂಡ್ ಹತ್ತಿರ ಮಡಿಕೇರಿ ಮತ್ತು ಅಧ್ಯಕ್ಷರು / ರಿಜಿಸ್ಟ್ರಾರ್, ಕರ್ನಾಟಕ ಅರೆಭಾಷೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಅಕಾಡೆಮಿ, ಕಾಫಿ ಕೃಪ ಕಟ್ಟಡ ರಾಜಸೀಟು ರಸ್ತೆ, ಮಡಿಕೇರಿ. ಇಲ್ಲಿಗೆ ಕಳುಹಿಸಿಕೊಡುವುದು. ಕಿರುಚಿತ್ರ ತಯಾರಿಸಿದ ವಿದ್ಯಾರ್ಥಿಗಳ ಹೆಸರನ್ನು ಸಹಿ ಮತ್ತು ಮೊಹರಿನೊಂದಿಗೆ ಪ್ರಾಂಶುಪಾಲರು ದೃಡೀಕರಿಸತಕ್ಕದ್ದು.

ಸಮೂಹಗಾನ ಸ್ಪರ್ಧೆ:

ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗುವ ಸಮೂಹಗಾನ ಸ್ಪರ್ಧೆಗೆ ಪ್ರತಿ ತಂಡದಲ್ಲಿ 6 ಜನ ಸ್ಪರ್ಧಿಗಳಿರಬೇಕು. ‘ಕನ್ನಡದ ಮಹತ್ವ ಸಾರುವ’ ಹಾಡುಗಳಾಗಿರಬೇಕು. ಸಂಗೀತದ ಪರಿಕರಗಳನ್ನು ಬಳಸುವಂತಿಲ್ಲ. ಶ್ರುತಿ ಪೆಟ್ಟಿಗೆ ಬಳಸಲು ಅವಕಾಶವಿದೆ. ಸಮೂಹಗಾನದಲ್ಲಿ ವಿಜೇತ ತಂಡಕ್ಕೆ ಪ್ರಥಮ ಬಹುಮಾನ ರು.5000 ನಗದು ಮತ್ತು ಪ್ರಮಾಣ ಪತ್ರ, ದ್ವಿತೀಯ ಬಹುಮಾನ ರು.3000 ನಗದು ಮತ್ತು ಪ್ರಮಾಣ ಪತ್ರ, ತೃತೀಯ ಬಹುಮಾನ ರು.2000 ನಗದು ಮತ್ತು ಪ್ರಮಾಣ ಪತ್ರ ನೀಡಲಾಗುವುದು.

ಈ ಎಲ್ಲಾ ಸ್ಪರ್ಧೆಗಳ ಉಸ್ತುವಾರಿಯನ್ನು ಚಂದ್ರಶೇಖರ ಪೇರಾಲು ವಹಿಸಿಕೊಂಡಿದ್ದು, ಕೊಡಗಿನಲ್ಲಿ ಕೊಡವ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಮೊಳ್ಳೆಕುಟ್ಟಡ ದಿನು ಬೋಜಪ್ಪ ಹಾಗೂ ಅರೆಭಾಷೆ ಅಕಾಡೆಮಿ ಸದಸ್ಯ ವಿನೋದ್ ಮೂಡಗದ್ದೆ ಸಂಚಾಲಕರಾಗಿರುತ್ತಾರೆ. ಹೆಚ್ಚಿನ ವಿವರಗಳಿಗೆ ಇವರ ಮೊಬೈಲ್ ಸಂಖ್ಯೆ 8660461442, 9741521197, 9535615759 ಮೂಲಕ ಸಂರ್ಪಕಿಸಬಹುದು ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ಹಾಗೂ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ತಿಳಿಸಿದ್ದಾರೆ.

PREV

Recommended Stories

‘ಫಾರಿನ್‌ ಅನ್ನಭಾಗ್ಯ’ ಕೊಟ್ಟವರಿಗೆ ಹವಾಲಾ ಮೂಲಕ ಹಣ ಪಾವತಿ?
ಬಸವಣ್ಣ ಅಧ್ಯಯನ ಪೀಠ ಸ್ಥಾಪನೆ ಮಾಡಿ : ಮೊಯ್ಲಿ