ಐಕ್ಯತಾ ಮನೋಭಾವಕ್ಕೆ ಕ್ರೀಡೆಗಳು ಸಹಕಾರಿ

KannadaprabhaNewsNetwork |  
Published : Aug 30, 2024, 01:09 AM IST
ಕಾರ್ಯಕ್ರಮವನ್ನು ವಿಪ ಸದಸ್ಯ ಎಸ್.ವಿ.ಸಂಕನೂರ ಉದ್ಘಾಟಿಸಿದರು.  | Kannada Prabha

ಸಾರಾಂಶ

ಪ್ರತಿಯೊಬ್ಬರೂ ಮಾನಸಿಕ ಹಾಗೂ ದೈಹಿಕ ಸದೃಢರಾದಾಗ ಮಾತ್ರ ಜೀವನದಲ್ಲಿ ಏನಾದರೂ ಸಾಧಿಸಲು ಸಾಧ್ಯವಾಗುತ್ತದೆ. ಪಾಲಕರು ತಮ್ಮ ಮಕ್ಕಳಿಗೆ ಪಠ್ಯ ಚಟುವಟಿಕೆಗಳೊಂದಿಗೆ ಕ್ರೀಡಾ ಚಟುವಟಿಕೆಗಳಲ್ಲಿಯೂ ಪಾಲ್ಗೊಳ್ಳಲು ಪ್ರೋತ್ಸಾಹಿಸಬೇಕು

ಗದಗ: ಜಾತಿ, ಬೇಧ ಮರೆತು ದೇಶದಲ್ಲಿ ಐಕ್ಯತೆ ಮನೋಭಾವ ಮೂಡಿಸಲು ಕ್ರೀಡೆಗಳು ಸಹಕಾರಿಯಾಗುತ್ತವೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.

ಬೆಟಗೇರಿಯ ಮಹಾತ್ಮ ಗಾಂಧಿ ಹಾಕಿ ಕ್ರೀಡಾಂಗಣದಲ್ಲಿ ಗುರುವಾರ ಗದಗ ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಮೇಜರ್ ಧ್ಯಾನಚಂದರವರ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ ನಿಮಿತ್ತ ಹಾಕಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.

ಕ್ರೀಡೆಗಳಲ್ಲಿ ಸೋಲು ಗೆಲುವು ಮುಖ್ಯವಲ್ಲ. ಪಾಲ್ಗೊಳ್ಳುವುದು ಮುಖ್ಯವಾಗಿದೆ. ಕ್ರೀಡೆಯಿಂದ ಮಾನಸಿಕ ಹಾಗೂ ದೈಹಿಕ ಸದೃಢತೆ ಹೊಂದಬಹುದಾಗಿದೆ. ಪ್ರತಿಯೊಬ್ಬರೂ ಮಾನಸಿಕ ಹಾಗೂ ದೈಹಿಕ ಸದೃಢರಾದಾಗ ಮಾತ್ರ ಜೀವನದಲ್ಲಿ ಏನಾದರೂ ಸಾಧಿಸಲು ಸಾಧ್ಯವಾಗುತ್ತದೆ. ಪಾಲಕರು ತಮ್ಮ ಮಕ್ಕಳಿಗೆ ಪಠ್ಯ ಚಟುವಟಿಕೆಗಳೊಂದಿಗೆ ಕ್ರೀಡಾ ಚಟುವಟಿಕೆಗಳಲ್ಲಿಯೂ ಪಾಲ್ಗೊಳ್ಳಲು ಪ್ರೋತ್ಸಾಹಿಸಬೇಕು. ಪ್ರಧಾನಮಂತ್ರಿ ಮೋದಿಯವರು ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸಲು ಖೇಲೋ ಇಂಡಿಯಾ ಯೋಜನೆ ಜಾರಿಗೊಳಿಸಿದ್ದಾರೆ ಎಂದರು.

ಮೇಜರ್ ಧ್ಯಾನಚಂದ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಆಚರಿಸಲಾಗುತ್ತಿದೆ. ಮೇಜರ ಧ್ಯಾನಚಂದ್‌ ಅವರು ಹಾಕಿ ಕ್ಷೇತ್ರಕ್ಕೆ ಬಹಳ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಹಾಕಿ ಕ್ರೀಡಾಪಟುಗಳಾಗಿ 1000 ಕ್ಕೂ ಹೆಚ್ಚು ಗೋಲು ಹೊಡಿದಿದ್ದಾರೆ. ಹಾಕಿ ಕ್ರೀಡಾಪಟು ಮೇಜರ್ ಧ್ಯಾನಚಂದ್ ಓಲಂಪಿಕ್ ಕ್ರೀಡೆಯಲ್ಲಿ ನಮ್ಮ ದೇಶಕ್ಕೆ ಸತತ ಮೂರು ಬಾರಿ ಚಿನ್ನದ ಪದಕ ತಂದು ಕೊಟ್ಟಿದ್ದಾರೆ. ಗದಗ ಜಿಲ್ಲೆಯ ಈ ಹಾಕಿ ಕ್ರೀಡಾಂಗಣದಲ್ಲಿ ಆಡಿದ ಹಲವಾರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ ಪ್ರಶಸ್ತಿ ಪಡೆದಿದ್ದಾರೆ. ಇದು ಎಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಎಂದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಶರಣು ಗೋಗೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಇಲಾಖೆಯಿಂದ ಹಲವಾರು ಕ್ರೀಡೆ ಹಮ್ಮಿಕೊಳ್ಳಲಾಗಿದೆ. ಹಾಕಿ ಕ್ರೀಡಾಪಟುಗಳು ಈ ಕ್ರೀಡಾಂಗಣದ ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.

ಇದೇ ಸಂದರ್ಭದಲ್ಲಿ ಇಲಾಖೆ ವತಿಯಿಂದ ಕ್ರೀಡಾಪಟುಗಳಿಗೆ ಕ್ರೀಡಾ ಕಿಟ್‌ ವಿತರಿಸಲಾಯಿತು ಹಾಗೂ ಕುಸ್ತಿ ಹಾಗೂ ಸೈಕ್ಲಿಂಗ್ ಪಂದ್ಯಾವಳಿಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ ಬಬರ್ಜಿ, ಸುರೇಶ ಕಟ್ಟಿಮನಿ, ಚಂದ್ರು ಕಟ್ಟಿಮನಿ, ಎಚ್.ಬಿ. ವೀರಾಪುರ, ಯಲ್ಲಪ್ಪ ಕೊರವರ, ಕೃಷ್ಣಪ್ಪ ಬಾಗಲಕೋಟಿ, ಎಂ.ಸಿ. ಶೇಖ್, ಲಕ್ಷ್ಮಣ ಬಾಗಲಕೋಟಿ, ರಾಮು ಹಾಸಂಗಿ, ಮೋಹನ ಕಟ್ಟಿಮನಿ, ಹನುಮಂತ ಕಟ್ಟಿಮನಿ, ವೈ.ಜಿ.ಗಡಾದ, ಹನುಮಾನ ಬ್ಲೇಸಿಂಗ್ ಸ್ಪೋರ್ಟ ಕ್ಲಬ್ ಹಾಗೂ ಸೈಕ್ಲಿಂಗ್ ಮತ್ತು ಕುಸ್ತಿ ಅಸೋಸಿಯೇಷನ್‌ದ ಅಧ್ಯಕ್ಷರು, ಪದಾಧಿಕಾರಿಗಳು ಕ್ರೀಡಾಪಟುಗಳು ಹಾಜರಿದ್ದರು. ಬಾಹುಬಲಿ ಜೈನರ ನಿರೂಪಿಸಿ ವಂದಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಕ್ರೀಡಾಜ್ಯೋತಿಯ ಮೆರವಣಿಗೆಯು ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಿಂದ ಪ್ರಾರಂಭವಾಗಿ ಭೂಮರೆಡ್ಡಿ ವೃತ್ತ, ರೋಟರಿ ವೃತ್ತ, ಮಹಾತ್ಮ ಗಾಂಧಿ ವೃತ್ತ, ಸಹಸ್ರಾರ್ಜುನ ವೃತ್ತ ಹನುಮಂತ ದೇವಸ್ಥಾನ ಮೂಲಕ ಮಹಾತ್ಮ ಗಾಂಧಿ ಹಾಕಿ ಕ್ರೀಡಾಂಗಣಕ್ಕೆ ಬಂದು ತಲುಪಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ