ಕನ್ನಡಪ್ರಭ ವಾರ್ತೆ ವಿಧಾನಸಭೆ
ರಾಜ್ಯದಲ್ಲಿ ಹುಕ್ಕಾಬಾರ್‌ಗಳನ್ನು ನಿಷೇಧಿಸುವ ಮತ್ತು ಸಿಗರೇಟು ಸೇವಿಸುವ ವಯೋಮಿತಿಯನ್ನು 21ವರ್ಷಕ್ಕೆ ಹೆಚ್ಚಿಸುವ ಅಂಶವನ್ನೊಳಗೊಂಡ ‘ಸಿಗರೇಟುಗಳ ಮತ್ತು ಇತರ ತಂಬಾಕು ಉತ್ಪನ್ನಗಳ (ಜಾಹೀರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ, ಉತ್ಪಾದನೆ, ಸರಬರಾಜು ಮತ್ತು ವಿತರಣೆಯ ವಿನಿಮಯ) (ಕರ್ನಾಟಕ ತಿದ್ದುಪಡಿ) ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರ ನೀಡಿತು.
ಬುಧವಾರ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ವಿಧೇಯಕ ಕುರಿತು ವಿವರಣೆ ನೀಡಿ, ಈ ಮೊದಲು ಇದ್ದ 18 ವರ್ಷದೊಳಗಿನವರಿಗೆ ಸಿಗರೇಟ್ ಮಾರಾಟ ಮಾಡುವಂತಿಲ್ಲ ಎಂಬುದನ್ನು 21 ವರ್ಷಕ್ಕೆ ಹೆಚ್ಚಿಸಲಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇವಿಸಿದರೆ ಒಂದು ಸಾವಿರ ರು. ದಂಡ ವಿಧಿಸಲಾಗುವುದು. ಹುಕ್ಕಾಬಾರ್‌ಗಳನ್ನು ನಿಷೇಧಿಸಲಾಗಿದೆ.
ಈ ಬಗ್ಗೆ ಈಗಾಗಲೇ ಆರೋಗ್ಯ ಇಲಾಖೆ ಹೊರಡಿಸಿರುವ ಅಧಿಸೂಚನೆ ಪ್ರಶ್ನಿಸಿ ಕೆಲವರು ನ್ಯಾಯಾಲಯ ಮೊರೆ ಹೋಗಿದ್ದಾರೆ. ಆದರೆ ನ್ಯಾಯಾಲಯ ಯಾವುದೇ ತಡೆ ನೀಡಿಲ್ಲ ಎಂದರು.
ಯಲಹಂಕದ ಬಳಿ ಆರಂಭವಾಗಿರುವ ಸಂಸ್ಥೆಗೆ ಆಡಳಿತ ಮಂಡಳಿ ನೇಮಕ, ಸಹ ಕುಲಪತಿಯನ್ನು ನೇಮಿಸಲು ಅವಕಾಶ ನೀಡುವ ಅಂತರ್-ವಿಷಯ ಆರೋಗ್ಯ ವಿಜ್ಞಾನಗಳು ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕವನ್ನು ಅಂಗೀಕರಿಸಲಾಯಿತು.
ಗದಗ ಜಿಲ್ಲಾ ಅಭಿವೃದ್ಧಿಗೆ ವಿಧೇಯಕ: ಗದಗ-ಬೆಟಗೇರಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶನಗಳಲ್ಲಿ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ಕೇಂದ್ರವನ್ನು ಅಭಿವೃದ್ಧಿ ಪಡಿಸಲು ಗದಗ-ಬೆಟಗೇರಿ ವ್ಯಾಪಾರ, ಸಂಸ್ಕೃತಿ ಮತ್ತು ವಸ್ತು ಪ್ರದರ್ಶನ ಪ್ರಾಧಿಕಾರ ವಿಧೇಯಕ ಅಂಗೀಕರಿಸಲಾಯಿತು.
ಪೌರಾಡಳಿತ ಸಚಿವ ರಹೀಂ ಖಾನ್ ಪರವಾಗಿ ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ.ಪಾಟೀಲ್ ವಿಧೇಯಕ ಮಂಡಿಸಿದರು.
ಆರ್ಥಿಕವಾಗಿ ಹಿಂದುಳಿದ ಎಪಿಎಂಸಿಗಳನ್ನು ಅಭಿವೃದ್ಧಿಗೊಳಿಸುವ ಉದ್ದೇಶದಿಂದ ಮಾರುಕಟ್ಟೆ ಅಭಿವೃದ್ಧಿ ನೆರವು ನಿಧಿ ಸ್ಥಾಪಿಸಲು ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) (ತಿದ್ದುಪಡಿ) ವಿಧೇಯಕವನ್ನು ಅಂಗೀಕರಿಸಲಾಯಿತು. ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ವಿಧೇಯಕ ಮಂಡಿಸಿದರು.