ಹುಬ್ಬಳ್ಳಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಉಗ್ರರ ಚಟುವಟಿಕೆ ಹೆಚ್ಚಾಗುತ್ತಿವೆ. ಮತಾಂಧರಿಗೆ ಕರ್ನಾಟಕ ಸುರಕ್ಷಿತ ತಾಣ ಎನಿಸಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣಕ್ಕೆ ಅವರು ಬೇರೆ ಅರ್ಥ ಕೊಡುವುದಕ್ಕೆ ಹೋದರು. ಒಬ್ಬರು ಸಿಲಿಡರ್ ಬ್ಲಾಸ್ಟ್ ಅಂದರು. ಖುದ್ದು ಡಿಸಿಎಂ ವೃತ್ತಿ ಮತ್ಸರ ಅಂತ ಹೇಳಿದರು. ಇದೆಲ್ಲವೂ ಕಾಂಗ್ರೆಸ್ ತುಷ್ಟೀಕರಣದ ಫಲ. ಉಗ್ರ ಚಟುವಟಿಕೆ ಕಟ್ಟುನಿಟ್ಟಾಗಿ ನಿಭಾಯಿಸಲು ಆಗುತ್ತಿಲ್ಲ ಎಂದರು.
ಇದೀಗ ಎನ್.ಐ.ಎ. ತಂಡ ಹುಬ್ಬಳ್ಳಿಯಲ್ಲೂ ಓರ್ವನನ್ನು ಬಂಧಿಸಿದೆ. ಈ ಘಟನೆ ಕರ್ನಾಟಕದ ಪೊಲೀಸರ ಕಾರ್ಯವೈಖರಿಗೆ ಹಿಡಿದ ಕನ್ನಡಿ. ಉಗ್ರ ಇಲ್ಲೇ ಇದ್ದರೂ ನಮ್ಮ ಗೃಹ ಇಲಾಖೆಗೆ ಗೊತ್ತೇ ಆಗಿಲ್ಲ. ಎನ್ಐಎ ತಂಡವೇ ಬಂದು ಅರೆಸ್ಟ್ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಸರ್ಕಾರ ಮಲಗಿದೆ. ಮತಾಂಧರಿಗೆ ಆಶ್ರಯ ಕೊಡುವ ರೀತಿಯಲ್ಲಿ ರಾಜ್ಯ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.
ಪತ್ರ ಬರೆದರೆ ರದ್ದಾಗಲ್ಲ: ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಪ್ರಧಾನಿಗೆ, ವಿದೇಶಾಂಗ ಸಚಿವರಿಗೆ ಪತ್ರ ಬರೆದು ರಾಜಕಾರಣ ಮಾಡಿದರೆ ಪಾಸ್‌ಪೋರ್ಟ್ ರದ್ದು ಆಗಲ್ಲ ಎಂದ ಅವರು, ಪೊಲೀಸ್ ಇಲಾಖೆ ಅಧಿಕೃತ ಮಾಹಿತಿ ನೀಡಬೇಕು, ಇಲ್ಲವೇ ಕೋರ್ಟ್ ಆದೇಶ ಇರಬೇಕು. ವಕೀಲಿಕೆ ಮಾಡಿರುವ ಸಿಎಂ ಸಿದ್ದರಾಮಯ್ಯಗೆ ಇದು ಗೊತ್ತಿಲ್ಲವೇ? ಎಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.
ಪ್ರಜ್ವಲ್ ಪ್ರಕರಣ ಸಂಬಂಧ ಎಸ್‌ಐಟಿ ಈಗ ಕೇಂದ್ರಕ್ಕೆ ಮಾಹಿತಿ ನೀಡಿದೆ. ಪ್ರಕರಣ ಬೆಳಕಿಗೆ ಬಂದು ಒಂದು ತಿಂಗಳ ಬಳಿಕ ಮೇ 21ರಂದು ಕೇಂದ್ರಕ್ಕೆ ಅಧಿಕೃತ ಮಾಹಿತಿ ನೀಡಿದೆ ಎಂದು ತಿಳಿಸಿದರು.
ಕೇಂದ್ರ ಅತ್ಯಂತ ತ್ವರಿತ ಕ್ರಮ ಕೈಗೊಂಡಿದೆ. ರಾಜ್ಯ ಸರ್ಕಾರ ಕೇಂದ್ರಕ್ಕೆ ಮಾಹಿತಿ ನೀಡಿದ ಮೇಲೆ 10 ದಿನಗಳ ಸಮಯ ಇರುತ್ತದೆ. ಅದರಂತೆ ಮೇ 21ಕ್ಕೆ ಮಾಹಿತಿ ನೀಡುತ್ತಲೆ ಮುಂದಿನ ಕ್ರಮ ಕೈಗೊಂಡಿದೆ. ಮೇ 24ಕ್ಕೆ ಅಂದರೆ ಎರಡೇ ದಿನದಲ್ಲಿ ಆಗಲೇ ಕೇಂದ್ರ ಸರ್ಕಾರ ನೋಟಿಸ್ ಕೊಟ್ಟಿದೆ. ಕಾನೂನು ಪ್ರಕಾರ ಇನ್ನು 8 ದಿನದಲ್ಲಿ ಕ್ರಮ ಕೈಗೊಳ್ಳಲಿದೆ ಎಂದು ಸ್ಪಷ್ಟ ಪಡಿಸಿದರು.
ಪ್ರಜ್ವಲ್ ಪ್ರಕರಣದಲ್ಲಿ ರಾಜಕಾರಣ ಮಾಡುವುದಕ್ಕಿಂತ ಹೆಚ್ಚಾಗಿ ಗಂಭೀರವಾಗಿ ಪರಿಗಣಿಸಬೇಕು. ವಿದೇಶಕ್ಕೆ ಹಾರಿರುವ ಪ್ರಜ್ವಲ್ ಅವರನ್ನು ಹಿಡಿದು ಕರೆ ತಂದು ಶಿಕ್ಷೆಗೆ ಗುರಿಪಡಿಸಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಪ್ರಜ್ವಲ್ ರೇವಣ್ಣ ಅವರನ್ನು ವಿದೇಶಕ್ಕೆ ಹಾರಲು ಬಿಟ್ಟಿದ್ದೇ ರಾಜ್ಯ ಸರ್ಕಾರ. ಈಗ ದುರುದ್ದೇಶದಿಂದ ಕೇಂದ್ರದತ್ತ ಬೆರಳು ತೋರಿಸುತ್ತಿದೆ ಎಂದರು.
ಎಚ್ಚೆತ್ತುಕೊಳ್ಳದಿದ್ದರೆ ಪಂಜಾಬ್ ಮೀರಿಸಲಿದೆ ಕರ್ನಾಟಕ: ರಾಜ್ಯದಲ್ಲಿ ಡ್ರಗ್ಸ್, ಗಾಂಜಾ ನಿಯಂತ್ರಣಕ್ಕೆ ತ್ವರಿತ ಮತ್ತು ಕಠಿಣ ಕ್ರಮ ಕೈಗೊಳ್ಳದೇ ಇದ್ದರೆ ಕರ್ನಾಟಕ ಪಂಜಾಬ್ ಅನ್ನು ಮೀರಿಸಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಎಚ್ಚರಿಸಿದರು. ಹುಬ್ಬಳ್ಳಿ, ಬೆಂಗಳೂರು, ಮಂಗಳೂರು ಭಾಗದಲ್ಲಿ ಹೆಚ್ಚು ಡ್ರಗ್ಸ್ ಪ್ರಕರಣಗಳು ಬೆಳಕಿಗೆ ಬಂದಿರುವುದೇ ಇದಕ್ಕೆ ನಿದರ್ಶನ ಎಂದು ಹೇಳಿದರು. ಡ್ರಗ್ಸ್ ಪ್ರಕರಣಗಳಲ್ಲಿ ರಾಜ್ಯ ಸರ್ಕಾರ ತೀರಾ ಬೇಜವಾಬ್ದಾರಿ ತೋರುತ್ತಿದೆ. ಹೀಗಾಗಿ ಇಲ್ಲಿ ಡ್ರಗ್ ಮಾಫಿಯಾ ತಲೆ ಎತ್ತುತ್ತಿದೆ. ಡ್ರಗ್ಸ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ತ್ವರಿತವಾಗಿ, ಕಠಿಣ ಕ್ರಮ ಜರುಗಿಸಬೇಕು. ಇಲ್ಲದೇ ಹೋದರೆ ಬರುವ ದಿನಗಳಲ್ಲಿ ಕರ್ನಾಟಕ ಪಂಜಾಬ್ ಅನ್ನು ಮೀರಿಸಬಹುದು. ಆದರಿಂದ ಎಚ್ಚರವಹಿಸಿ ಎಂದು ಸರ್ಕಾರಕ್ಕೆ ಸಲಹೆ ನೀಡಿದರು.