ಗಜೇಂದ್ರಗಡ: ರಾಜ್ಯದಲ್ಲಿರುವ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯಧನ ಕೂಡಲೇ ಬಿಡುಗಡೆ ಮಾಡಬೇಕೆಂದು ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯ ಐತಿಹಾಸಿಕ ತೀರ್ಪು ನೀಡಿದ್ದು ಸ್ವಾಗತಿಸಿ ಪಟ್ಟಣದ ಕೆ.ಕೆ ವೃತ್ತದಲ್ಲಿ ಶನಿವಾರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್‌ನ ತಾಲೂಕು ಘಟಕ ಹಾಗೂ ಎಸ್.ಎಫ್.ಐ ಸಂಘಟನೆ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಿದರು.
ಈ ವೇಳೆ ಕಾರ್ಮಿಕರ ಸಂಘಟನೆಯ ತಾಲೂಕು ಕಾರ್ಯದರ್ಶಿ ಪೀರು ರಾಠೋಡ ಮಾತನಾಡಿ, ರಾಜ್ಯದಲ್ಲಿ ನೂರಾರು ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯಧನ ಬಿಡುಗಡೆ ಮಾಡಿಲ್ಲ. ಸುಮಾರು ೩ ವರ್ಷಗಳಿಂದ ವಿದ್ಯಾರ್ಥಿಗಳಿಗೆ ಸರಿಯಾಗಿ ಸ್ಕಾಲರ್‌ಶಿಫ್ ಬಿಡುಗಡೆ ಮಾಡದೆ ಇರುವುದು ಸರ್ಕಾರ ವೈಫಲ್ಯ.ಸಮಯಕ್ಕೆ ಸರಿಯಾಗಿ ರಾಜ್ಯದಲ್ಲಿ ಅರ್ಜಿ ಹಾಕುವ ಎಲ್ಲ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯಧನ ಕೂಡಲೇ ಬಿಡುಗಡೆ ಮಾಡಬೇಕು ಬಾಕಿ ಇರುವ ಎಲ್ಲ ಸೌಲಭ್ಯಗಳ ಅರ್ಜಿಗಳನ್ನು ವಿಲೇವಾರಿ ಮಾಡಬೇಕು ಎಂದು ಕರ್ನಾಟಕ ರಾಜ್ಯ ಹೈಕೋರ್ಟ್ ನೀಡಿದ ತೀರ್ಪನ್ನು ಸ್ವಾಗತಿಸುತ್ತೇವೆ ಎಂದರು.ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಮುಖಂಡ ಬಾಲು ರಾಠೋಡ ಮಾತನಾಡಿ, ರಾಜ್ಯದಲ್ಲಿ ಆಡಳಿತ ಸರ್ಕಾರ ಕಟ್ಟಡ ಕಾರ್ಮಿಕರಿಗೆ ವಂಚನೆ ಮಾಡಿ ಸಮಯಕ್ಕೆ ಸರಿಯಾಗಿ ಅರ್ಜಿ ಕರೆಯದೆ ಇವತ್ತು ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯಧನ ನೀಡದೆ ಶಿಕ್ಷಣದಿಂದ ವಂಚಿತರನ್ನಾಗಿಸಿದೆ. ದೇಶದಲ್ಲಿ ಬೇವರು ಸುರಿಸಿ ದುಡಿಯುವ ಕಾರ್ಮಿಕರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಮಿಕ ವಿರೋಧಿ ಕಾನೂನು ಜಾರಿಗೆ ತಂದು ಕಾರ್ಮಿಕರಿಗೆ ವಂಚನೆ ಮಾಡಿ ಶೈಕ್ಷಣಿಕ ಸಹಾಯಧನ ನೀಡದೆ ಸತಾಯಿಸುತ್ತಿದ್ದನ್ನು ವಿರೋಧಿಸಿ ನ್ಯಾಯಾಲಯದ ಮೋರೆ ಹೋಗಿ ದಾವೆ ಹೂಡಲಾಗಿತ್ತು. ಇವತ್ತು ಕರ್ನಾಟಕ ಹೈಕೋರ್ಟ್ ಐತಿಹಾಸಿಕ ತೀರ್ಪುನ್ನು ಕರ್ನಾಟಕ ಪ್ರಾಂತ ರೈತ ಸಂಘ ಸ್ವಾಗತಿಸುತ್ತದೆ ಎಂದರು.
ಎಸ್.ಎಫ್.ಐ ಮುಖಂಡ ಚಂದ್ರು ರಾಠೋಡ, ರೇಣಪ್ಪ ರಾಠೋಡ, ಆನಂದಪ್ಪ, ಶರಣು ಮಾದರ, ಗೀತಾ ಸೂಡಿ, ಸುನಿತಾ, ಅನಿಲ ರಾಠೋಡ, ವೀನೋದ ರಾಠೋಡ, ಕನಕರಾಯ ಹಾದಿಮನಿ, ಪಾರ್ವತಿ ಚೀಟಗಿ ಸೇರಿ ಇತರರು ಇದ್ದರು.