ಬೀದಿ ನಾಯಿಗಳ ತೆರವಿಗೆ ಶೀಘ್ರ ಕ್ರಮ ಕೈಗೊಳ್ಳಬೇಕು, ನಾಯಿ ಕಡಿತದಿಂದ ಸಂಭವಿಸುವ ಗಾಯ ಅಥವಾ ಸಾವಿಗೆ ರಾಜ್ಯ ಸರ್ಕಾರಗಳೇ ನೇರ ಹೊಣೆಗಾರರು ಎಂಬ ಸುಪ್ರೀಂಕೋರ್ಟ್ ಎಚ್ಚರಿಕೆಯ ನಡುವೆಯೂ ರಾಜ್ಯದಲ್ಲಿ ಬೀದಿ ನಾಯಿಗಳ ಹಾವಳಿ ತಡೆಯುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ.

ಬೆಂಗಳೂರು : ಬೀದಿ ನಾಯಿಗಳ ತೆರವಿಗೆ ಶೀಘ್ರ ಕ್ರಮ ಕೈಗೊಳ್ಳಬೇಕು, ನಾಯಿ ಕಡಿತದಿಂದ ಸಂಭವಿಸುವ ಗಾಯ ಅಥವಾ ಸಾವಿಗೆ ರಾಜ್ಯ ಸರ್ಕಾರಗಳೇ ನೇರ ಹೊಣೆಗಾರರು ಎಂಬ ಸುಪ್ರೀಂಕೋರ್ಟ್ ಎಚ್ಚರಿಕೆಯ ನಡುವೆಯೂ ರಾಜ್ಯದಲ್ಲಿ ಬೀದಿ ನಾಯಿಗಳ ಹಾವಳಿ ತಡೆಯುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ.

 ಕಳೆದ ನಾಲ್ಕು ದಿನಗಳ ಅವಧಿಯಲ್ಲಿ ರಾಜ್ಯದ ವಿವಿಧೆಡೆ ನಾಯಿ ಕಡಿತದಿಂದ 37 ಮಂದಿ ಗಾಯಗೊಂಡಿದ್ದಾರೆ. ಬುಧವಾರವೊಂದೇ ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ 7 ಮಂದಿ, ಧಾರವಾಡದಲ್ಲಿ 9 ಮಂದಿ ನಾಯಿ ಕಡಿತಕ್ಕೆ ಒಳಗಾಗಿದ್ದಾರೆ. ಮಂಗಳವಾರ ಶಿವಮೊಗ್ಗ ಜಿಲ್ಲೆ ಹೊಳೆಹೊನ್ನೂರಲ್ಲಿ 11 ಮಂದಿ, ಕಳೆದ ಭಾನುವಾರ ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ 10 ಮಂದಿ ನಾಯಿ ಕಡಿತಕ್ಕೆ ಒಳಗಾಗಿದ್ದರು. ನಾಯಿ ಕಡಿತಕ್ಕೆ ಒಳಗಾದವರಲ್ಲಿ ಮಕ್ಕಳೇ ಹೆಚ್ಚಿದ್ದು, ಬೈಲಹೊಂಗಲದಲ್ಲಿ 7 ವರ್ಷದ ಬಾಲಕಿಯೊಬ್ಬಳು ಗಂಭೀರ ಸ್ವರೂಪದ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿದ್ದಾಳೆ.

ಒಂದೇ ದಿನ 16 ಮಂದಿಗೆ ಕಡಿತ:

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದ ಎಂಜಿ ಹೌಸಿಂಗ್ ಕಾಲೋನಿಯಲ್ಲಿ ಬುಧವಾರ ಒಂದೇ ದಿನ ಏಳು ಮಂದಿ ಬೀದಿ ನಾಯಿ ಕಡಿತಕ್ಕೆ ಒಳಗಾಗಿದ್ದಾರೆ. ಈ ಪೈಕಿ, ಕಿರಾಣಿ ಅಂಗಡಿಗೆ ಹೋಗಿ ಸಾಮಾನು ತೆಗೆದುಕೊಂಡು ಮನೆಗೆ ವಾಪಸ್ಸಾಗುತ್ತಿದ್ದ ಎಂಜಿ ಹೌಸಿಂಗ್ ಕಾಲೋನಿಯ ಸುಪ್ರಿಯಾ ಪಾಟೀಲ (7) ಎಂಬ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ನಾಯಿ ದಾಳಿಯಿಂದ ಆಕೆಯ ತಲೆ, ಕೈ-ಕಾಲು ಸೇರಿ ದೇಹದ ವಿವಿಧ ಭಾಗಗಳಲ್ಲಿ ಗಾಯಗಳಾಗಿದ್ದು, ಬೈಲಹೊಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಆಕೆಗೆ ಚಿಕಿತ್ಸೆ ನೀಡಲಾಗುತ್ತಿದೆ.

ಹುಚ್ಚು ನಾಯಿಯೊಂದು 9 ಮಂದಿಗೆ ಕಚ್ಚಿದ್ದು, ಆ ಪೈಕಿ, 6 ಮಂದಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ

ಧಾರವಾಡದ ಶಿರಡಿ ನಗರದಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಹುಚ್ಚು ನಾಯಿಯೊಂದು 9 ಮಂದಿಗೆ ಕಚ್ಚಿದ್ದು, ಆ ಪೈಕಿ, 6 ಮಂದಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ ಮೂವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ನಾಯಿ ಹಾವಳಿ ಕಂಡು ಶಿರಡಿ ನಗರದ ನಿವಾಸಿಗಳು ಭಯಭೀತರಾಗಿದ್ದಾರೆ.

ಮಂಗಳವಾರವಷ್ಟೇ ಶಿವಮೊಗ್ಗ ಜಿಲ್ಲೆ ಹೊಳೆಹೊನ್ನೂರಲ್ಲಿ 11 ಮಂದಿಗೆ ಹುಚ್ಚು ನಾಯಿ ಕಡಿದಿತ್ತು. ಎಲ್ಲರಿಗೂ ಪಟ್ಟಣದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಅದಕ್ಕೂ ಎರಡು ದಿನ ಮೊದಲು ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದ ಪಿಂಜಾರ ಓಣಿ, ಬಾಳೆಕಾಯಿ ಮಿಲ್‌ ಸುತ್ತ ಆಟವಾಡುತ್ತಿದ್ದ 10 ಮಕ್ಕಳಿಗೆ ಹುಚ್ಚು ನಾಯಿ ಕಡಿದಿತ್ತು. ಗಾಯಗೊಂಡ ಮಕ್ಕಳಿಗೆ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಸಿಂಧನೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು.