ದೊಡ್ಡಬಳ್ಳಾಪುರ: ಯುಗಾದಿಗೂ ಮುನ್ನ ಮಂಗಳವಾರ ಸಂಜೆ ದೊಡ್ಡಬಳ್ಳಾಪುರದಲ್ಲಿ ವರ್ಷದ ಮೊದಲ ವರ್ಷಧಾರೆಯಾಗಿದೆ. ಬಿಸಿಲ ಬೇಗೆಯಿಂದ ಬೆಂದ ಇಳೆಗೆ ವರುಣ ಸಿಂಚನವಾಗಿದ್ದು, ಹಬ್ಬದ ಸಂಭ್ರಮವನ್ನು ಹೆಚ್ಚಿಸಿದೆ

ದೊಡ್ಡಬಳ್ಳಾಪುರ: ಯುಗಾದಿಗೂ ಮುನ್ನ ಮಂಗಳವಾರ ಸಂಜೆ ದೊಡ್ಡಬಳ್ಳಾಪುರದಲ್ಲಿ ವರ್ಷದ ಮೊದಲ ವರ್ಷಧಾರೆಯಾಗಿದೆ. ಬಿಸಿಲ ಬೇಗೆಯಿಂದ ಬೆಂದ ಇಳೆಗೆ ವರುಣ ಸಿಂಚನವಾಗಿದ್ದು, ಹಬ್ಬದ ಸಂಭ್ರಮವನ್ನು ಹೆಚ್ಚಿಸಿದೆ.

ಸಂಜೆ 5.30ರ ಸುಮಾರಿಗೆ ಆರಂಭವಾದ ಮಳೆ 6 ಗಂಟೆ ವೇಳೆಗೆ ಹೆಚ್ಚಾಯಿತು. ದಿಢೀರನೇ ಗುಡುಗು ಮಿಂಚು ಸಹಿತ ಭಾರೀ ಮಳೆ ಸುರಿದ ಪರಿಣಾಮ ಕೆಲಕಾಲ ಜನಜೀವನ ಅಸ್ತವ್ಯಸ್ತವಾಗಿತ್ತು. ಯುಗಾದಿ ಹಾಗೂ ರಂಜಾನ್ ಹಬ್ಬಗಳ ಹಿನ್ನಲೆ ಮಾರುಕಟ್ಟೆಗಳಲ್ಲಿ ಖರೀದಿ ಪ್ರಕ್ರಿಯೆಯಲ್ಲಿ ತೊಡಗಿದ್ದ ಜನರಿಗೆ ಭಾರಿ ಮಳೆ ಅಡಚಣೆ ಉಂಟು ಮಾಡಿತ್ತು.

ಸುಮಾರು ಎರಡು ಗಂಟೆ ಕಾಲ ಸುರಿದ ಮಳೆ ಪರಿಣಾಮ ಬಹುತೇಕ ರಸ್ತೆಗಳ ಬದಿಯ ಚರಂಡಿಗಳು ತುಂಬಿ ರಸ್ತೆಗಳಲ್ಲಿ ನೀರು ಹರಿಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ತಗ್ಗು ಪ್ರದೇಶದ ಮನೆಗಳಿಗೂ ನೀರು ನುಗ್ಗಿ ಅವಾಂತರ ಸೃಷ್ಠಿಯಾಗಿತ್ತು. ಕೆಲಸ ಬಿಡುವ ಹೊತ್ತಿಗೆ ಸುರಿದ ಮಳೆ ಪರಿಣಾಮ ದ್ವಿಚಕ್ರ ವಾಹನಗಳಲ್ಲಿ ಮನೆಗಳಿಗೆ ತೆರಳುತ್ತಿದ್ದ ಸವಾರರು ಪರಿತಪಿಸುವಂತಾಯಿತು. ಡಿಕ್ರಾಸ್, ರೈಲು ನಿಲ್ದಾಣ ವೃತ್ತ ಸೇರಿದಂತೆ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.

ದಿಢೀರನೆ ಸುರಿದ ಮಳೆಯ ಪರಿಣಾಮ ಬೀದಿಬದಿ ವ್ಯಾಪಾರಿಗಳ ವಹಿವಾಟಿಗೆ ಅಡಚಣೆಯಾಯಿತು. ಹಣ್ಣು-ತರಕಾರಿ ವ್ಯಾಪಾರಿಗಳು ಮಳೆಯಿಂದ ಬಾಧಿತರಾದರು. ರಂಗಪ್ಪ ವೃತ್ತದಿಂದ ಜಯಚಾಮರಾಜೇಂದ್ರ ವೃತ್ತದವರೆಗಿನ ರಸ್ತೆ ಅಕ್ಷರಶಃ ಕೆಸರು ಗುಂಡಿಯಂತಾಗಿತ್ತು. ಗುಂಡಿಮಯವಾಗಿರುವ ಕೆಲ ರಸ್ತೆಗಳಲ್ಲಿ ವಾಹನ ಸಂಚಾರ ಬಾಧಿತವಾಗಿತ್ತು. ಮರಗಳ ಅಡಿಯಲ್ಲಿ, ಅಂಗಡಿ ಸಾಲುಗಳಲ್ಲಿ ಜನರು ಆಶ್ರಯ ಪಡೆಯುವಂತಾಯಿತು.

ಗ್ರಾಮಾಂತರದಲ್ಲೂ ಮಳೆ:

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ಹೊಸಕೋಟೆ, ನೆಲಮಂಗಲ ತಾಲೂಕಿನ ಕೆಲವೆಡೆ ಮಳೆಯಾಗಿದೆ. ದೊಡ್ಡಬಳ್ಳಾಪುರ ನಗರ, ಬಾಶೆಟ್ಟಿಹಳ್ಳಿ ಪಟ್ಟಣ ಹಾಗೂ ವಿವಿಧ ಹೋಬಳಿಗಳಲ್ಲೂ ವರ್ಷಧಾರೆ ಸುರಿದಿದೆ.

17ಕೆಡಿಬಿಪಿ1- ದೊಡ್ಡಬಳ್ಳಾಪುರದಲ್ಲಿ ವರ್ಷದ ಮೊದಲ ಮಳೆಯ ಸಿಂಚನ.

--

17ಕೆಡಿಬಿಪಿ2- ಮಳೆಯಿಂದ ತೊಯ್ದು ತೊಪ್ಪೆಯಾದ ದೊಡ್ಡಬಳ್ಳಾಪುರ ಪ್ರವಾಸಿ ಮಂದಿರ ವೃತ್ತ.

--

17ಕೆಡಿಬಿಪಿ3- ದೊಡ್ಡಬಳ್ಳಾಪುರದಲ್ಲಿ ಮಳೆಯಿಂದಾಗಿ ಟ್ರಾಫಿಕ್‌ ಜಾಮ್.

--

17ಕೆಡಿಬಿಪಿ4- ಮಳೆ ನಿಂತು ಹೋದ ಮೇಲೆ ರಸ್ತೆಯೆಲ್ಲಾ ನೀರು!