ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಲು ಗ್ರಾಮೀಣ ಭಾಗದ ದಿನಸಿ ಅಂಗಡಿಗಳಲ್ಲೂ ಮದ್ಯ ಮಾರಾಟಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡುವ ಮೂಲಕ ಕುಡುಕರ ಸಾಮ್ರಾಜ್ಯ ಕಟ್ಟಲು ಹೊರಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.

ಹುಬ್ಬಳ್ಳಿ : ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಲು ಗ್ರಾಮೀಣ ಭಾಗದ ದಿನಸಿ ಅಂಗಡಿಗಳಲ್ಲೂ ಮದ್ಯ ಮಾರಾಟಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡುವ ಮೂಲಕ ಕುಡುಕರ ಸಾಮ್ರಾಜ್ಯ ಕಟ್ಟಲು ಹೊರಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗೆ ಹಣ ನೀಡಲು ಆಗುತ್ತಿಲ್ಲ. ಒಂದೆಡೆ ಬೆಲೆ ಏರಿಕೆ ಮಾಡಿ ತನ್ನ ಬೊಕ್ಕಸ ತುಂಬಿಸಿಕೊಳ್ಳುತ್ತಿದ್ದರೆ, ಮತ್ತೊಂದೆಡೆ ಹಳ್ಳಿಗಳಲ್ಲೂ ಮದ್ಯ ಮಾರಾಟಕ್ಕೆ ಅವಕಾಶ ನೀಡುವ ಮೂಲಕ ಕುಡುಕರ ರಾಜ್ಯ ಮಾಡಲು ಮುಂದಾಗಿದೆ. ಲಂಚದ ಹಣದ ಮೇಲೆಯೇ ಸರ್ಕಾರ ನಡೆಯುತ್ತಿದ್ದು, ಇದರ ಪಾಪದ ಕೊಡ ತುಂಬುತ್ತಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ರಾಜ್ಯಪಾಲರ ದುರ್ಬಳಕೆ ಮಾಡಿಕೊಂಡಿದ್ದು ನಕಲಿ ಗಾಂಧಿ ಕುಟುಂಬ:

ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಅವರು ‘ಹಿಂದ’ ಸಮಾಜ ಮರೆತು ಬರೀ ಅಲ್ಪಸಂಖ್ಯಾತರ ಓಲೈಕೆ ಮಾಡಲು ಮುಂದಾಗಿದ್ದಾರೆ. ಕಾಂಗ್ರೆಸ್‌ನದು ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣದ ನೀತಿಯಾಗಿದೆ. ಗಾಂಧಿ ಕುಟುಂಬ ಈ ಹಿಂದೆ ಯಾವ ರೀತಿಯಲ್ಲಿ ರಾಜ್ಯಪಾಲರನ್ನು ನಡೆಸಿಕೊಂಡಿತ್ತು ಎಂಬುದನ್ನು ದೇಶದ ಜನತೆ ಮರೆತಿಲ್ಲ. ದೇಶದ ಗೌರವಾನ್ವಿತ ರಾಜ್ಯಪಾಲರನ್ನು ದುರ್ಬಳಕೆ ಮಾಡಿಕೊಂಡಿದ್ದು ನಕಲಿ ಗಾಂಧಿ ಕುಟುಂಬವೇ ಹೊರತು ಬಿಜೆಪಿಯಲ್ಲ ಎಂದು ಕಾಂಗ್ರೆಸ್‌ ನಾಯಕರ ಹೇಳಿಕೆಗೆ ತಿರುಗೇಟು ನೀಡಿದರು.

ತಾವೇ ಎಲ್ಲವನ್ನು ಮಾಡುತ್ತೇವೆ ಎಂದು ಹೇಳಿಕೊಂಡಿದೆ

ಕೊಳಗೇರಿ ಮನೆಗಳ ಹಸ್ತಾಂತರ ಕಾರ್ಯಕ್ರಮ ಕುರಿತು ಪ್ರತಿಕ್ರಿಯಿಸಿ, ಈ ಹಿಂದೆ ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಮಹಾನಗರಪಾಲಿಕೆಯ 16 ಎಕರೆ ಜಾಗವನ್ನು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಗೆ ನೀಡಲಾಗಿತ್ತು. ಪ್ರಸ್ತುತವಾಗಿ ಇದಕ್ಕೆ ಕೇಂದ್ರ ಸರ್ಕಾರವೂ ಆರ್ಥಿಕ ಸಹಾಯ ಮಾಡಿದೆ. ಇದನ್ನೆಲ್ಲವನ್ನು ಮರೆತ ಕಾಂಗ್ರೆಸ್‌ ಸರ್ಕಾರ, ಶನಿವಾರ ಆಶ್ರಯ ಮನೆಗಳನ್ನು ವಿತರಿಸುವ ಮೂಲಕ ತಾವೇ ಎಲ್ಲವನ್ನು ಮಾಡುತ್ತೇವೆ ಎಂದು ಹೇಳಿಕೊಂಡಿದೆ ಎಂದು ಟೀಕಿಸಿದರು.