ಸಭೆಯಲ್ಲಿ ಜಿಲ್ಲಾ ಉದ್ಯೋಗಾಧಿಕಾರಿ ಸಿದ್ದೇಶ್ ಮಾಹಿತಿ ನೀಡಿದ್ದು, ಯುವನಿಧಿ ಯೋಜನೆಯಡಿ ತಾಲೂಕಿನಲ್ಲಿ 1,522 ಮಂದಿ ನೋಂದಣಿ ಮಾಡಿಕೊಂಡಿದ್ದು, ಇದರಲ್ಲಿ 741 ಪದವೀಧರರು ಹಾಗೂ 7 ಡಿಪ್ಲೋಮಾ ವಿದ್ಯಾರ್ಥಿಗಳು ಸೇರಿ ಒಟ್ಟು 748 ಫಲಾನುಭವಿಗಳಿಗೆ ಸೆಪ್ಟೆಂಬರ್‌ ಅಂತ್ಯದವರೆಗೆ ಡಿ.ಬಿ.ಟಿ. ಮೂಲಕ 22.33 ಲಕ್ಷ ಹಣ ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದರು. ಬಾಕಿ ಇರುವ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ, ಪ್ರತಿ ತಿಂಗಳ 25ರ ಒಳಗೆ ಡಿಕ್ಲರೇಷನ್ ಪಡೆದು ಹಣ ಜಮಾ ಮಾಡುವುದಾಗಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಧರ್ಮಶೇಖರ್, ವಿಳಂಬದಿಂದ ಸಾರ್ವಜನಿಕರಲ್ಲಿ ಗೊಂದಲ ಮತ್ತು ಅಪಪ್ರಚಾರ ಉಂಟಾಗುತ್ತಿರುವುದರಿಂದ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಲು ಸೂಚಿಸಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ರಾಜ್ಯಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಸಮಾಜದ ಆರ್ಥಿಕ ಸ್ಥಿತಿಗೆ ನೇರ ಪರಿಣಾಮ ಬೀರಿದ್ದು, ಅದರ ಫಲವಾಗಿ ಕರ್ನಾಟಕ ಇಂದು ದೇಶದಲ್ಲೇ ಉನ್ನತ ತಲಾ ಆದಾಯ ಹೊಂದಿರುವ ರಾಜ್ಯಗಳ ಪೈಕಿ ಮುಂಚೂಣಿಯಲ್ಲಿ ನಿಂತಿದೆ ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಗೀಜಿಹಳ್ಳಿ ಧರ್ಮಶೇಖರ್ ಅಭಿಪ್ರಾಯಪಟ್ಟರು.ನಗರದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದ ಐದು ಪ್ರಮುಖ ಇಲಾಖೆಗಳ ಸಮನ್ವಯ ಹಾಗೂ ಅಧಿಕಾರಿಗಳ ಸಹಕಾರದಿಂದ ತಾಲೂಕಿನಲ್ಲಿ ಶೇ. 99ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಪ್ರಶಂಸಿಸಿದರು. ಈ ಯೋಜನೆಗಳು ಜನಸಾಮಾನ್ಯರ ಬದುಕಿನಲ್ಲಿ ಭದ್ರತೆ ಹಾಗೂ ಆರ್ಥಿಕ ಸ್ಥಿರತೆ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ಹೇಳಿದರು.ಸಭೆಯಲ್ಲಿ ಜಿಲ್ಲಾ ಉದ್ಯೋಗಾಧಿಕಾರಿ ಸಿದ್ದೇಶ್ ಮಾಹಿತಿ ನೀಡಿದ್ದು, ಯುವನಿಧಿ ಯೋಜನೆಯಡಿ ತಾಲೂಕಿನಲ್ಲಿ 1,522 ಮಂದಿ ನೋಂದಣಿ ಮಾಡಿಕೊಂಡಿದ್ದು, ಇದರಲ್ಲಿ 741 ಪದವೀಧರರು ಹಾಗೂ 7 ಡಿಪ್ಲೋಮಾ ವಿದ್ಯಾರ್ಥಿಗಳು ಸೇರಿ ಒಟ್ಟು 748 ಫಲಾನುಭವಿಗಳಿಗೆ ಸೆಪ್ಟೆಂಬರ್‌ ಅಂತ್ಯದವರೆಗೆ ಡಿ.ಬಿ.ಟಿ. ಮೂಲಕ 22.33 ಲಕ್ಷ ಹಣ ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದರು. ಬಾಕಿ ಇರುವ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ, ಪ್ರತಿ ತಿಂಗಳ 25ರ ಒಳಗೆ ಡಿಕ್ಲರೇಷನ್ ಪಡೆದು ಹಣ ಜಮಾ ಮಾಡುವುದಾಗಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಧರ್ಮಶೇಖರ್, ವಿಳಂಬದಿಂದ ಸಾರ್ವಜನಿಕರಲ್ಲಿ ಗೊಂದಲ ಮತ್ತು ಅಪಪ್ರಚಾರ ಉಂಟಾಗುತ್ತಿರುವುದರಿಂದ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಲು ಸೂಚಿಸಿದರು.ಶಿಶು ಅಭಿವೃದ್ಧಿ ಇಲಾಖೆ ಯೋಜನಾಧಿಕಾರಿ ಯೋಗೀಶ್ ಮಾಹಿತಿ ನೀಡಿ, ಗೃಹಲಕ್ಷ್ಮೀ ಯೋಜನೆಯಡಿ ತಾಲೂಕಿನಲ್ಲಿ 80,725 ಮಹಿಳೆಯರು ನೋಂದಾಯಿತರಾಗಿದ್ದು, ಇದರಲ್ಲಿ 79,844 ಮಹಿಳೆಯರಿಗೆ 23 ತಿಂಗಳ ಹಣ ಜಮಾ ಆಗಿದೆ. ಪ್ರತಿ ತಿಂಗಳು ಸರಾಸರಿ 15.96 ಕೋಟಿ ಮೊತ್ತ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತಿದೆ. ಸುಮಾರು 3,900 ಮಹಿಳೆಯರು ಐಟಿ ಹಾಗೂ ಜಿಎಸ್‌ಟಿ ವ್ಯಾಪ್ತಿಗೆ ಒಳಪಡುವ ಕಾರಣ ಪರಿಶೀಲನೆ ನಡೆಯುತ್ತಿದೆ ಎಂದು ವಿವರಿಸಿದರು.ಸೆಸ್ಕ್ ಇಲಾಖೆಯ ಅಭಿಯಂತರ ಜಯಪ್ಪ ಮಾಹಿತಿ ನೀಡಿ, ತಾಲೂಕಿನಲ್ಲಿ 83,279 ಗೃಹಬಳಕೆಯ ವಿದ್ಯುತ್ ಗ್ರಾಹಕರಿದ್ದು, ಅವರಲ್ಲಿ 83,086 ಮಂದಿ ಯೋಜನೆಗೆ ನೋಂದಾಯಿತರಾಗಿದ್ದಾರೆ. ಕೇವಲ 193 ಗ್ರಾಹಕರ ನೋಂದಣಿ ಬಾಕಿ ಇದ್ದು ಶೇ. 99ರಷ್ಟು ಪ್ರಗತಿ ಸಾಧಿಸಲಾಗಿದೆ. ನಿರಂತರ ಜ್ಯೋತಿ ಯೋಜನೆ 20 ಮನೆಗಳ ಗುಚ್ಛಕ್ಕೆ ಮಾತ್ರ ಅನ್ವಯವಾಗುತ್ತದೆ. ಜಿ+2 ಮನೆಗಳಿಗೆ ಒಸಿಸಿ ದಾಖಲೆ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.ಕೆಎಸ್‌ಆರ್‌ಟಿಸಿ ಘಟಕದ ವ್ಯವಸ್ಥಾಪಕ ಕೃಷ್ಣಪ್ಪ ಅವರು ಸಭೆಗೆ ಸಮರ್ಪಕ ಮಾಹಿತಿ ನೀಡದಿರುವುದಕ್ಕೆ ಸಮಿತಿ ಸದಸ್ಯ ಸಿದ್ಧೇಶ್ ಆಕ್ಷೇಪ ವ್ಯಕ್ತಪಡಿಸಿದರು. ಬಸ್‌ಗಳ ಸ್ವಚ್ಛತೆ, ಬಸ್ ನಿಲ್ದಾಣ ಹಾಗೂ ಶೌಚಾಲಯಗಳ ನಿರ್ವಹಣೆ ಕುರಿತು ನಿರ್ಲಕ್ಷ್ಯ ವಹಿಸಬಾರದು ಎಂದು ಎಚ್ಚರಿಕೆ ನೀಡಲಾಯಿತು. ಪ್ರಯಾಣಿಕರಿಗೆ ಮೂಲಭೂತ ಸೌಕರ್ಯ ಒದಗಿಸುವ ಜೊತೆಗೆ, ಸುಕ್ಷೇತ್ರ ಯಾದಪುರಕ್ಕೆ ಸಂಜೆ ವೇಳೆಯಲ್ಲಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಲಾಯಿತು.ಸಭೆಯಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಗಂಗಣ್ಣ, ಸಮಿತಿ ಸದಸ್ಯರಾದ ಬಸವರಾಜ್, ಪ್ರದೀಪ್ ಕುಮಾರ್, ಜಾಜೂರು ಸಿದ್ದೇಶ್, ನಾಗರಾಜ್, ಕಮಲಮ್ಮ, ಕೆ.ಆರ್‌. ಸತೀಶ್, ಶಿವಕುಮಾರ್, ಇಮ್ರಾನ್, ವಿರೂಪಾಕ್ಷಪ್ಪ, ಪುರುಷೋತ್ತಮ, ಚಾಂದ್ ಬಾಷಾ ಸೇರಿದಂತೆ ಇತರರು ಉಪಸ್ಥಿತರಿದ್ದರು.