ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಈ ಕುರಿತು ಮಾತನಾಡಿದ ಅವರು, ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಮತ್ತು ಹೋಟೆಲ್ ಸ್ಫೋಟಕ್ಕೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳೇ ನೇರ ಹೊಣೆಗಾರರು. ದೇಶದಲ್ಲಿ ಶೇ. 90ರಷ್ಟು ಉಗ್ರ ಚಟುವಟಿಕೆ ನಿಗ್ರಹವಾಗಿದೆ. ಆದರೆ, ಈಗ ತಮಗೆ ಬೆಂಬಲ ಸಿಗಬಹುದಾದಂತಹ ರಾಜ್ಯಗಳಲ್ಲಿ ಮತ್ತೆ ತಲೆ ಎತ್ತುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಉಗ್ರರ ತಾಣವಾಗಿಸಬೇಡಿಕಾಂಗ್ರೆಸ್ ಆಡಳಿತ ಇರುವುದರಿಂದ ಭಯೋತ್ಪಾದಕರಿಗೆ, ಉಗ್ರರಿಗೆ ದಾಳಿ ನಡೆಸಲು ಇಂದು ಕರ್ನಾಟಕ ಸುರಕ್ಷಿತ ತಾಣ ಎನಿಸಿದೆ. ಕೇವಲ ವೋಟ್ ಬ್ಯಾಂಕ್ ಗಾಗಿ ಕರ್ನಾಟಕವನ್ನು ಉಗ್ರರ ತಾಣ ಮಾಡಬೇಡಿ. ಮೊದಲು ಮುಖ್ಯಮಂತ್ರಿಗಳು ಇದನ್ನು ನಿಲ್ಲಿಸಿ. ಈ ಎರಡೂ ಘಟನೆ ರಾಜ್ಯದಲ್ಲಿ ಆಡಳಿತ ಮತ್ತು ಆಂತರಿಕ ಭದ್ರತೆ ವೈಫಲ್ಯಕ್ಕೆ ನಿದರ್ಶನ. ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಮತ್ತು ಹೋಟೆಲ್ ಸ್ಫೋಟ ಎರಡೂ ಪ್ರಕರಣವನ್ನು ರಾಜ್ಯ ಸರ್ಕಾರ ಕೂಡಲೇ ಎನ್‌ಐಎ ತನಿಖೆಗೆ ವಹಿಸಬೇಕು ಎಂದರು.
ಕಟ್ಟರ್ ಇಸ್ಲಾಮಿಕ್ ಮೂಲಭೂತವಾದಿಗಳಿಗೆ ರಾಜ್ಯ ಸರ್ಕಾರ ಸಹಕಾರ ನೀಡುತ್ತಿದೆ. ಪರಿಣಾಮ ರಾಜ್ಯದ ಸಾಮಾನ್ಯ ಜನರ ಬದುಕು ಅಸುರಕ್ಷಿತವಾಗಿದೆ. ಇದಕ್ಕೆ ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕಾರಣ ಎಂದು ಆರೋಪಿಸಿದರು.
ಇಂತಹವರಿಗೆ ಬೆಂಬಲ ನೀಡಬೇಕೆ?ಕಾಂಗ್ರೆಸ್ ವೋಟ್ ಬ್ಯಾಂಕ್ ಗಾಗಿ ದೇಶವನ್ನು ಅಭದ್ರ ಮಾಡುತ್ತಿದೆ. ಇಂತಹ ಜಿಹಾದಿ ರಾಜಕೀಯಕ್ಕೆ ನಾವು ಬೆಂಬಲ ನೀಡಬೇಕಾ? ಎಂದು ಪ್ರಶ್ನಿಸಿದ ಜೋಶಿ, ಇದು ಅತ್ಯಂತ ಅಯೋಗ್ಯ ಸರ್ಕಾರ. ಈ ರೀತಿಯ ಚಿಲ್ಲರೆ, ತುಷ್ಟೀಕರಣದ ರಾಜಕೀಯ ನಿಲ್ಲಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.