5 ದಿನಗಳ ಅಂತರ ಜಿಲ್ಲಾ ಯುವ ವಿನಿಮಯ ಕಾರ್ಯಕ್ರಮ ಉದ್ಘಾಟನೆ । ವಿಜಯನಗರ ಶ್ರೀಕೃಷ್ಣದೇವರಾಯ ವಿವಿ ಕುಲಪತಿ
ಶೈಕ್ಷಣಿಕ ರಂಗದಲ್ಲಿ ರಾಜ್ಯದೆಲ್ಲೆಡೆ ಇರುವ ವೈವಿಧ್ಯಮಯ, ಸಾಂಸ್ಕೃತಿಕ ಕಲೆಗಳು ಯುವ ಸಮುದಾಯಕ್ಕೆ ವಿನಿಮಯವಾಗಬೇಕು ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ.ಮುನಿರಾಜು ಅವರು ಹೇಳಿದರು.
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಜೀವ ವಿಜ್ಞಾನ ಸಭಾಂಗಣದಲ್ಲಿ ಭಾರತ ಸರ್ಕಾರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದ ಮೈ ಭಾರತ್- ನೆಹರು ಯುವ ಕೇಂದ್ರ, ಬಳ್ಳಾರಿ ಹಾಗೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣ ಘಟಕದ ಸಂಯುಕ್ತಾಶ್ರಯದಲ್ಲಿ ಬಳ್ಳಾರಿ ಮತ್ತು ತುಮಕೂರು ಜಿಲ್ಲೆಗಳಲ್ಲಿ ನಡೆಯಲಿರುವ 5 ದಿನಗಳ ಅಂತರ ಜಿಲ್ಲಾ ಯುವ ವಿನಿಮಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ರಾಜ್ಯವು ಹಲವಾರು ವೈವಿಧ್ಯಮಯ ಕಲೆಗಳ ತವರೂರಾಗಿದೆ. ನಮ್ಮಲ್ಲಿ ಪ್ರದೇಶವಾರು ವಿಭಿನ್ನ ಸಾಂಸ್ಕೃತಿಕ ಪರಂಪರೆಗಳನ್ನು ಕಾಣಬಹುದಾಗಿದ್ದು, ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ವರದಾನವಾಗಿವೆ ಎಂದರು.
ವಿಶ್ವವಿದ್ಯಾಯದ ಕುಲಸಚಿವ ಎಸ್.ಎನ್. ರುದ್ರೇಶ್ ಮಾತನಾಡಿ, ಉತ್ತರ ಕರ್ನಾಟಕವು ಜನಪದ ಕಲೆಗಳ ಬೀಡಾಗಿದೆ. ನಮ್ಮಲ್ಲಿಯ ದೇಸಿ ಕಲೆಗಳ ಕುರಿತು ಇಂದಿನ ಯುವಕರಿಗೆ ಅರಿವೇ ಇಲ್ಲ. ಅವುಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಜವಾಬ್ದಾರಿ ಯುವಕರ ಮೇಲಿದೆ. ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಮೌಲ್ಯಗಳನ್ನು ನಾವು ರೂಢಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭ ನೆಹರು ಯುವ ಕೇಂದ್ರದ ಜಿಲ್ಲಾ ಅಧಿಕಾರಿಗಳಾದ ಮೊಂಟು ಪತ್ತಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಳ್ಳಾರಿ ವಿವಿಯಿಂದ 27 ವಿದ್ಯಾರ್ಥಿಗಳು ತುಮಕೂರಿಗೆ ಹಾಗೂ ತುಮಕೂರು ವಿವಿಯಿಂದ 25 ವಿದ್ಯಾರ್ಥಿಗಳು ಬಳ್ಳಾರಿಯಲ್ಲಿ ಭಾಗವಹಿಸಿದ್ದಾರೆ.
ನಾಟಕ ಹಾಗೂ ಪ್ರದರ್ಶನ ಕಲೆ ವಿಭಾಗದ ಡಾ. ಅಣ್ಣಾಜಿ ಕೃಷ್ಣಾರೆಡ್ಡಿ ತಂಡದಿಂದ ಸಂಗೀತ ಕಾರ್ಯಕ್ರಮ ಪ್ರಸ್ತುತಪಡಿಸಲಾಯಿತು. ಐದು ದಿನಗಳ ವಿನಿಮಯ ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಪ್ರದರ್ಶನಗಳನ್ನು ವಿದ್ಯಾರ್ಥಿಗಳು ನೀಡಲಿದ್ದಾರೆ.