ಶಿವಮೊಗ್ಗ: ಅತ್ಯಂತ ಹಿಂದುಳಿದ ಸಮಾಜವಾದ ಮಾದಿಗ ಸಮಾಜದ ಶ್ರೇಯೋಭಿವೃದ್ಧಿಗಾಗಿ ಕರ್ನಾಟಕ ಮಾದಾರ ಮಹಾಸಭೆಯನ್ನು ಸ್ಥಾಪಿಸಿದ್ದೇವೆ ಎಂದು ಮಾಜಿ ಸಚಿವ ಹಾಗೂ ಮಹಾಸಭೆಯ ಪ್ರಮುಖ ಎಚ್.ಆಂಜನೇಯ ತಿಳಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ತಿಂಗಳಿನಿಂದ ಈ ಸಂಘಟನೆಯ ಸಲುವಾಗಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದು, ಈ ಮಹಾಸಭೆಯ ಅಧ್ಯಕ್ಷರಾದ ಆಹಾರ ಸಚಿವ ಕೆ.ಎಚ್.ಮುನಿಯಪ್ಪನವರ ನೇತೃತ್ವದಲ್ಲಿ ಸದಸ್ಯತ್ವ ಅಭಿಯಾನವನ್ನು ಹಮ್ಮಿಕೊಂಡಿದ್ದೇವೆ ಎಂದರು. ಇತ್ತೀಚೆಗೆ ಒಳಮೀಸಲಾತಿ ಜಾರಿಯಾಗಿದೆ. ಸಣ್ಣಪುಟ್ಟ ಲೋಪದೋಷಗಳಿಂದ ಅಲೆಮಾರಿ ಸಮುದಾಯ ಹೈಕೋರ್ಟ್‌ನಲ್ಲಿ ಜಾರಿಗೆ ತಡಯಾಜ್ಞೆ ತಂದಿದ್ದು, ಈ ಸಂಬಂಧ ಮುಖ್ಯಮಂತ್ರಿಗಳು ಅಲೆಮಾರಿ ಜನಾಂಗದ ಪ್ರಮುಖರೊಂದಿಗೆ ಸಭೆ ನಡೆಸಿ, ಅವರಿಗೆ ಅನೇಕ ಭರವಸೆಗಳನ್ನು ನೀಡಿದ್ದಾರೆ. ಮೀಸಲಾತಿಯಲ್ಲಿ ನಾಗಮೋಹನ್‌ದಾಸ್ ವರದಿಯ ಪ್ರಕಾರ ಅವರಿಗೆ ಶೇ.1 ನೀಡಬೇಕಿತ್ತು. ಸರ್ಕಾರ ಅದನ್ನು ಮಾಡದೆ ಮಾದಿಗ ಮತ್ತು ಇತರ ಹಿಂದುಳಿದವರಿಗೆ ಶೇ.6 , ಕೊರಚ-ಕೊರಮ ಶೇ.3 ಎಡಿಎಕೆ ಶೇ.1, ಭೋವಿ ಮತ್ತು ಲಂಬಾಣಿ ಶೇ.5 ಮಾಡಿ ಒಟ್ಟು ಶೇ.1 ಮೀಸಲಾತಿ ನೀಡಿದ್ದು, ನೇಮಕಾತಿ ಪಟ್ಟಿಯನ್ನು ಪ್ರಕಟಿಸಬಾರದು ಎಂದು ಹೈಕೋರ್ಟ್ ಆದೇಶ ನೀಡಿದ್ದು, ಅಲೆಮಾರಿ ಸಮಾಜದವರು ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ಒಳಮೀಸಲಾತಿ ಪ್ರಕಾರ ನೇಮಕಾತಿ ಪ್ರಕ್ರಿಯೆಗೆ ತಡೆಯುಂಟಾಗಿದೆ ಎಂದರು.ಮುಖ್ಯಮಂತ್ರಿಗಳು ಅಲೆಮಾರಿ ಸಮುದಾಯದ ಮುಖಂಡರುಗಳಿಗೆ ಕರೆಯಿಸಿ ಶೇ.1ರಷ್ಟು ಮೀಸಲಾತಿ ನೀಡದೇ ಇರುವ ಕಾರಣವನ್ನು ಅವರಿಗೆ ವಿವರಿಸಿದ್ದಾರೆ. ಬಂಜಾರರೊಂದಿಗೆ ಅಲೆಮಾರಿಗಳನ್ನು ಸೇರಿಸಿದ್ದು, ಅವರಿಗಾಗಿಯೇ ಪ್ರತ್ಯೇಕ ನಿಗಮ ಸ್ಥಾಪಿಸುವುದರ ಜೊತೆಗೆ ವಿಶೇಷ ಅನುದಾನ ನೀಡುವುದಾಗಿ ಘೋಷಿಸಿದ್ದಾರೆ. ಹೈಕೋರ್ಟ್‌ನಲ್ಲಿರುವ ಕೇಸನ್ನು ವಾಪಾಸ್ಸು ಪಡೆಯುವಂತೆ ವಿನಂತಿಸಿದ ಮೇರೆಗೆ ಆ ಸಮುದಾಯ ಕೂಡ ಕೇಸು ಹಿಂಪಡೆಯಲು ಒಪ್ಪಿಕೊಂಡಿದೆ ಎಂದರು.ಇದರಿಂದ ಮಾದಿಗ ಸಮಾಜದಲ್ಲಿ ಎಂಬಿಬಿಎಸ್, ಎಂಡಿ ಮೊದಲಾದ ಉನ್ನತ ಶಿಕ್ಷಣಕ್ಕೆ ಇರುವ ಸಮಸ್ಯೆ ಪರಿಹಾರವಾಗಲಿದ್ದು, ಮೊದಲ ಪಟ್ಟಿಯಲ್ಲೇ 100ಕ್ಕೂ ಹೆಚ್ಚು ಸಮಾಜದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.ಎಲ್ಲಾ ಸಮುದಾಯದವರಿಗೂ ಅವರದ್ದೇ ಆದ ಸಂಘಟನೆಗಳಿವೆ. ಆದರೆ ಮಾದಿಗ ಸಮಾಜಕ್ಕೆ ಇರಲಿಲ್ಲ ಅದಕ್ಕಾಗಿಯೇ ಈ ವೇದಿಕೆ ನಿರ್ಮಾಣ ಮಾಡಿದ್ದು, ಸಚಿವ ಮುನಿಯಪ್ಪನವರ ನೇತೃತ್ವದಲ್ಲಿ ಕರ್ನಾಟಕ ಮಾದರ ಮಹಾಸಭಾ ರಚನೆಯಾಗಿದ್ದು, ಇದರ ಪ್ರಾಥಮಿಕ ಸದಸ್ಯತ್ವಕ್ಕೆ 500 ರು., ಅಜೀವ ಸದಸ್ಯತ್ವಕ್ಕೆ 10 ಸಾವಿರ ರು., ಮಹಾ ಪೋಷಕರಿಗೆ 1 ಲಕ್ಷ ರು. ನಿಗದಿ ಮಾಡಿದ್ದೇವೆ ಎಂದು ತಿಳಿಸಿದರು.ದೊಡ್ಡಬಳ್ಳಾಪುರದ ಬಳಿ ಈ ಮಹಾಸಭಾಕ್ಕೆ ೨೫ ಎಕರೆ ಜಾಗವನ್ನು ಕೇಳಿದ್ದೇವೆ. ಈಗಾಗಲೇ ಜಾಗವನ್ನು ಗುರುತಿಸಲಾಗಿದೆ. ಜಾಗ ಮಂಜೂರಾದರೆ ನಮ್ಮ ಸಮಾಜದ ಬಹುಮುಖ ಪ್ರತಿಭೆಗಳಿಗೆ, ಪ್ರತಿಭಾವಂತರಿಗೆ ಕೆಎಎಸ್, ಐಎಎಸ್ ಕೋಚಿಂಗ್ ತರಬೇತಿ ಕೇಂದ್ರ ಸ್ಥಾಪಿಸಿ ಅವರ ಭವಿಷ್ಯಕ್ಕೆ ಶಾಶ್ವತ ಕೇಂದ್ರವನ್ನು ಸ್ಥಾಪಿಸಲಾಗುವುದು. ಇದಕ್ಕಾಗಿ ವಿಶೇಷ ಅನುದಾನಕ್ಕೆ ಮತ್ತು ನಿವೇಶನಕ್ಕೆ ಈಗಾಗಲೇ ಬೇಡಿಕೆ ಇಟ್ಟಿದ್ದು ಮುಖ್ಯಮಂತ್ರಿಗಳು ಸ್ಪಂದಿಸಿದ್ದಾರೆ ಎಂದರು.ರಾಜ್ಯದಲ್ಲಿ ನಾವು 40 ಲಕ್ಷ ಜನರಿದ್ದೇವೆ. ನಮ್ಮ ಸಮಾಜದ ಶ್ರೇಯೋಭಿವೃದ್ಧಿಗೆ ಈ ಮಹಾಸಭಾದಿಂದ ಅನುಕೂಲವಾಗಲಿದೆ ಎಂದರು.
ಕಾಂಗ್ರೆಸ್‌ನಲ್ಲಿನ ಭಿನ್ನಾಭಿಪ್ರಾಯಕ್ಕೆ ಸಂಬಂಧಿಸಿದಂತೆ ಉತ್ತರಿಸಿದ ಆಂಜನೇಯ, ಕಾಂಗ್ರೆಸ್‌ನಲ್ಲಿ ಹೈಕಮಾಂಡ್ ಸ್ಟ್ರಾಂಗ್ ಇದೆ. ನಮಗೆ ಕಾಂಗ್ರೆಸ್ ಕಚೇರಿಯೇ ದೇವಾಲಯ ಎಂದರು.ಡಿಕೆಶಿ ಮತ್ತು ಸಿದ್ದರಾಮಯ್ಯ ಬಣದ ಶಾಸಕರು ಪದೇ ಪದೇ ದೆಹಲಿಗೆ ಹೋಗಿ ಲಾಭಿ ಮಾಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಕಾಂಗ್ರೆಸ್ಸಿಗರ ದೇವಸ್ಥಾನ ಇರುವುದೇ ದೆಹಲಿಯಲ್ಲಿ ಹೈಕಮಾಂಡ್, ತೀರ್ಮಾನವೇ ಅಂತಿಮ ಎಂದರು.ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಪ್ರಮುಖರಾದ ಡಾ.ಶ್ರೀನಿವಾಸ್ ಕರಿಯಣ್ಣ, ಆದಿಜಾಂಬವ ನಿಗಮದ ಅಧ್ಯಕ್ಷರಾದ ಮಂಜುನಾಥ್, ಶಿವಪ್ಪ, ತಿಮ್ಲಾಪುರ ಲೋಕೇಶ್, ಶಿವಲಿಂಗಪ್ಪ, ಮಂಜುನಾಥ್, ದರ್ಶನ್ ಮೊದಲಾದವರಿದ್ದರು.