ಶಿವಮೊಗ್ಗ: ಹೆಣ್ಣನ್ನು ಯಾವುದೇ ಜಾತಿಗೆ ಸೇರಿಸಬೇಡಿ, ಯಾಕೆಂದರೆ ಹೆಣ್ಣು ಸಂಕುಲವೇ ಒಂದು ಜಾತಿ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಹೇಳಿದರು.
ನಗರದ ಸಹ್ಯಾದ್ರಿ ಕಲಾ ಕಾಲೇಜಿನ ಜಯಚಾಮರಾಜೇಂದ್ರ ಸಭಾಂಗಣದಲ್ಲಿ ಸಹ್ಯಾದ್ರಿ ಕಲಾ ಮತ್ತು ವಿಜ್ಞಾನ ಕಾಲೇಜು ಹಾಗೂ ಕರ್ನಾಟಕ ರಾಜ್ಯ ಮಹಿಳಾ ಆಯೋಗ ಸಹಯೋಗದೊಂದಿಗೆ ಸೋಮವಾರ ಆಯೋಜಿಸಿದ್ದ ವಿದ್ಯಾರ್ಥಿಗಳೊಂದಿಗಗಿನ ಸಂವಾದ ಮತ್ತು ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಹೆಣ್ಣಿಗೆ ಅಸಾಧ್ಯ ಎನ್ನುವುದು ಯಾವುದು ಇಲ್ಲ. ಆಕೆ ವಿಭಿನ್ನ, ಧೈರ್ಯವಂತೆ. ಮಾತೃತ್ವದ ಶಕ್ತಿಯನ್ನು ಹೊಂದಿರುವ ಆಕೆ, ಸಾವನ್ನೇ ಗೆದ್ದು ಮನುಕುಲವನ್ನು ಸೃಷ್ಟಿಸುತ್ತಾಳೆ. ಆದರೂ ಯಾವುದೇ ಧರ್ಮ, ಜಾತಿ ಮಹಿಳೆಗೆ ಸಮಾನತೆ ಕೊಟ್ಟಿಲ್ಲ. ಅನಾದಿಕಾಲದಿಂದಲೂ ತಳ ಸಮುದಾಯಕ್ಕಿಂತ ಕೀಳಾಗಿ ಆಕೆಯ ಮೇಲೆ ಶೋಷಣೆ ಹಾಗೂ ತಾರತಮ್ಯ ನಡೆಸುತ್ತಾ ಬರಲಾಗಿದೆ. ಆದ್ದರಿಂದ ಆಕೆ ಯಾವ ಜಾತಿಗೆ ಸೇರಿಲ್ಲ, ಅವಳದ್ದೇ ಒಂದು ಜಾತಿ ಎಂದು ಅಭಿಪ್ರಾಯಪಟ್ಟರು.
ಹೆಣ್ಣು ಎಲ್ಲವನ್ನು ಧೈರ್ಯದಿಂದ ಎದುರಿಸುವ ಶಕ್ತಿ ಬೆಳೆಸಿಕೊಳ್ಳಬೇಕು. ಈ ಮಣ್ಣಿನ ಗಟ್ಟಿಗಿತ್ತಿಯಾದ ಕೆಳದಿ ಚೆನ್ನಮ್ಮನ ರಕ್ತ ನಿಮ್ಮಲ್ಲೂ ಹರಿಯಬೇಕು. ಅನ್ಯಾಯವಾದಾಗ ಸುಮ್ಮನೆ ಇರದೆ ಧ್ವನಿ ಎತ್ತಬೇಕು. ಮಹಿಳೆಯರು ರಾಜಕಾರಣಕ್ಕೆ ಬಂದು ಈ ದೇಶದ ಬದಲಾವಣೆಗೆ ಕಾರಣರಾಗಬೇಕು ಎಂದರು.ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂನಲ್ಲಿ ಮೂಕ್ಕಾಲು ಭಾಗ ಮಹಿಳೆಯರನ್ನು ಗುರಿಯಾಗಿಸುವ ಪ್ರಕರಣಗಳೇ ಇವೆ. ಮಹಿಳೆ ಭಾವನೆಗಳಲ್ಲಿ ಎಷ್ಟು ಬಲಶಾಲಿಯೋ ಅದು ಅಷ್ಟೇ ದುರ್ಬಲವಾಗಿರುವುದೂ ಇದಕ್ಕೆ ಕಾರಣವಾಗಿದ್ದು, ಅತಿ ಎಚ್ಚರಿಕೆಯಿಂದಿರಬೇಕು ಎಂದು ಸಲಹೆ ನೀಡಿದರು.
ಕಾಲೇಜುಗಳಲ್ಲಿ ಮಹಿಳೆಯರೊಂದಿಗೆ, ವಿದ್ಯಾರ್ಥಿನಿಯರೊಂದಿಗೆ ಉಪನ್ಯಾಸಕರು ಗೌರವದಿಂದ ನಡೆದುಕೊಳ್ಳಬೇಕು. ಸರ್ಕಾರಿ ಸೌಲಭ್ಯವನ್ನು ಸರಿಯಾಗಿ ತಲುಪಿಸಬೇಕು. ಇಲ್ಲದಿದ್ದಲಿ ಕಾಲೇಜಿನ ಆಂತರಿಕ ದೂರು ಸಮಿತಿಗೆ ದೂರ ನೀಡಿ ಎಂದು ತಿಳಿಸಿದರು.ಇಂದಿನ ಯುವ ಮನಸ್ಸುಗಳು ಸಕ್ರಿಯವಾದ ರಾಜಕಾರಣವನ್ನು ತಿಳಿದುಕೊಳ್ಳಬೇಕು. ಹೋರಾಟಗಾರರೆಲ್ಲಾ ಸೇರಿ ಈ ರಾಜ್ಯವನ್ನು ಕಟ್ಟಿದ್ದಾರೆ. ಈ ದೇಶದ ಭವಿಷ್ಯವನ್ನು ಬದಲಾಯಿಸಲು ರಾಜಕಾರಣ ಒಂದು ಪ್ರಗತಿಯ ಬೀಗವಾಗಿದೆ. ರಾಜಕಾರಣದಲ್ಲಿ ಮಾತ್ರ ಜಾತಿ ಇರುವುದು. ಯುವ ಮನಸ್ಸುಗಳಲ್ಲಿ ಅಂತಹ ಯಾವುದೇ ಕಲ್ಮಶ ಇಲ್ಲ. ಅವರಿಗೆ ಬೇಕಾಗಿರುವುದು ಉದ್ಯೋಗ, ಶಿಕ್ಷಣ ಹಾಗೂ ಉಜ್ವಲ ಭವಿಷ್ಯ ಮಾತ್ರ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಸಿರಾಜ್ ಅಹಮ್ಮದ್ ಅಧ್ಯಕ್ಷತೆ ವಹಿಸಿದ್ದರು.ಕರ್ನಾಟಕ ಮಹಿಳಾ ವಕೀಲರ ರಾಜ್ಯ ಒಕ್ಕೂಟದ ಜಿಲ್ಲಾಧ್ಯಕ್ಷೆ ಸರೋಜ ಪಿ.ಚೆಂಗೊಳ್ಳಿ, ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ರಾಜೇಶ್ವರಿ, ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ.ಕೆ.ಎನ್.ಮಂಜುನಾಥ್, ಐಕ್ಯೂಎಸಿ ಸಂಚಾಲಕರಾದ ಪ್ರೊ.ಜಿ.ಕೃಷ್ಣಮೂರ್ತಿ, ಡಾ.ಎಚ್.ಪಿ.ಮಂಜುನಾಥ್ , ಕಾಲೇಜಿನ ಮಹಿಳಾ ಸಬಲೀಕರಣದ ಘಟಕದ ಸಂಚಾಲಕ ಡಾ.ಎಂ.ಹಾಲಮ್ಮ, ಡಾ.ಕೆ.ಎನ್.ಮಹಾದೇವಸ್ವಾಮಿ, ಸಂಗೀತ, ವಿವಿಧ ವಿಭಾಗದ ಉಪನ್ಯಾಸಕರುಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.