ಅವರನ್ನು ನಾನು, ಕಟೀಲ್‌ ಹಿಡಿದೆವು: ಮುನಿಸ್ವಾಮಿ

KannadaprabhaNewsNetwork | Published : Dec 14, 2023 2:00 AM

ಸಾರಾಂಶ

ಲೋಕಸಭೆಯಲ್ಲಿ ಅಶ್ವಿನಿ ವೈಷ್ಣವ್‌ ಮಾತನಾಡುತ್ತಿದ್ದಾಗ ಇಬ್ಬರು ದುಷ್ಕರ್ಮಿಗಳು ಕೆಳಗೆ ಜಿಗಿದು ಓಡಿಬಂದರು: ಕೋಲಾರ ಸಂಸದ. ದಾಳಿಕೋರರು ವಿಷಾನಿಲ ಸಿಡಿಸುತ್ತಿದ್ದಾರೆಂದು ಅನೇಕ ಸಂಸದರು ಹೊರಗೋಡಿದರು. ನಾವು ಧೈರ್ಯವಾಗಿದ್ದೆವು.

ಸರ್ವಾಧಿಕಾರಿ ಎಂದು ಘೋಷಣೆ ಕೂಗಿದರುಪ್ರೇಕ್ಷಕರ ಗ್ಯಾಲರಿಯಿಂದ ಲೋಕಸಭೆ ಸಭಾಂಗಣಕ್ಕೆ ಜಿಗಿದ ಯುವಕರು ನಿರಂತರವಾಗಿ ಘೋಷಣೆ ಕೂಗುತ್ತಲೇ ಇದ್ದರು. ಅವರು ಏನು ಕೂಗುತ್ತಿದ್ದಾರೆ ಎಂದು ತಿಳಿಯಲಿಲ್ಲ. ಕೊನೆಗೆ ಸರ್ವಾಧಿಕಾರಿ ಎಂಬ ಒಂದು ಪದ ಮಾತ್ರ ನನಗೆ ಕೇಳಿಸಿತು.

- ಮುನಿಸ್ವಾಮಿ, ಕೋಲಾರ ಬಿಜೆಪಿ ಸಂಸದಕನ್ನಡಪ್ರಭ ವಾರ್ತೆ ಬೆಂಗಳೂರು‘ಇಬ್ಬರು ಆಗಂತುಕರು ಏಕಾಏಕಿ ಲೋಕಸಭೆ ಸಭಾಂಗಣಕ್ಕೆ ಜಿಗಿದು, ಸ್ಮೋಕ್‌ ಬಾಂಬ್‌ ಓಪನ್‌ ಮಾಡಿದಾಗ ಸಂಸದರಲ್ಲಿ ಬಹುತೇಕರು ಸಭಾಂಗಣದ ಬಾಗಿಲುಗಳನ್ನು ತೆರೆದು ಭಯಭೀತರಾಗಿ ಓಡಿ ಹೋದರು..... ಆದರೆ ನಾನು ಮತ್ತು ಕಟೀಲ್‌ ಧೈರ್ಯದಿಂದ ಇದ್ದು ಇತರ ಸಂಸದರ ಜತೆ ಸೇರಿ ದಾಳಿಕೋರರನ್ನು ಹಿಡಿದೆವು.’ಇದು ಇಬ್ಬರು ಯುವಕರು ಬುಧವಾರ ಲೋಕಸಭೆ ಸಭಾಂಗಣಕ್ಕೆ ನುಗ್ಗಿ ನಡೆಸಿದ ದುಷ್ಕೃತ್ಯದ ಪ್ರತ್ಯಕ್ಷದರ್ಶಿಯಾದ ಕೋಲಾರ ಸಂಸದ ಎಸ್‌. ಮುನಿಸ್ವಾಮಿ ಅವರು ಘಟನೆಯನ್ನು ವಿವರಿಸಿದ ರೀತಿ.‘ಲೋಕಸಭೆಯಲ್ಲಿ ಪ್ರಶ್ನೋತ್ತರ ಕಲಾಪ ನಡೆಯುತ್ತಿತ್ತು. ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್‌ ತಮ್ಮ ಖಾತೆ ಕುರಿತಾದ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದರು. ಆಗ ಇದ್ದಕ್ಕಿದ್ದ ಹಾಗೆ ಪ್ರೇಕ್ಷಕರ ಗ್ಯಾಲರಿಯಿಂದ ಇಬ್ಬರು ಯುವಕರು ಲೋಕಸಭೆ ಸಭಾಂಗಣದೊಳಗೆ ಜಿಗಿದರು. ಮೊದಲಿಗೆ ಎಲ್ಲರೂ ಆತಂಕ ಮತ್ತು ಅಚ್ಚರಿಯಿಂದ ನೋಡುತ್ತಿದ್ದರು. ಆಗ ಸಂಸದ ನಳಿನ್‌ಕುಮಾರ್‌ ಕಟೀಲು ಸೇರಿದಂತೆ ಇನ್ನಿತರ ಐದಾರು ಸಂಸದರು ಒಬ್ಬನನ್ನು ಹಿಡಿದರು.’‘ಅದಾದ ನಂತರ ಮತ್ತೊಬ್ಬ ಯುವಕ ಸಂಸದರ ಆಸನದ ಮೇಲಿನಿಂದ ಸ್ಪೀಕರ್‌ ಕುರ್ಚಿ ಕಡೆಗೆ ಓಡಲು ಯತ್ನಿಸಿದ. ಈ ವೇಳೆ ಆತನನ್ನು ಹಿಡಿಯಲು ನಾನು ಸೇರಿದಂತೆ ಕೆಲ ಸಂಸದರು ಮುಂದಾದೆವು. ಆಗ ಯುವಕ ತನ್ನ ಶೂನಲ್ಲಿದ್ದ ಸ್ಮೋಕ್‌ ಬಾಂಬ್‌ನ್ನು ತೆಗೆದು ಓಪನ್‌ ಮಾಡಿದ. ಅದನ್ನು ಗಮನಿಸಿದ ಹಲವು ಸಂಸದರು ವಿಷಾನಿಲ ಎಂದು ಭಾವಿಸಿ ಸಭಾಂಗಣದ ಬಾಗಿಲು ತೆಗೆದು ಓಡಲಾರಂಭಿಸಿದರು. ಕೊನೆಗೆ ಯುವಕರಿಬ್ಬರನ್ನೂ ಹಿಡಿದು ಭದ್ರತಾ ಸಿಬ್ಬಂದಿ ಹಾಗೂ ಮಾರ್ಷಲ್ಸ್‌ಗಳಿಗೆ ಒಪ್ಪಿಸಿದೆವು. ಇಂತಹ ಸಂದರ್ಭದಲ್ಲಿ ಎಂತಹವರಿಗೇ ಆದರೂ ಭಯ ಇದ್ದೇ ಇರುತ್ತದೆ’ ಎಂದು ಪೂರ್ತಿ ಘಟನೆಯನ್ನು ವಿವರಿಸಿದರು.ಸರ್ವಾಧಿಕಾರಿ ಘೋಷಣೆ ಕೂಗಿದ್ದ ಯುವಕ:

‘ಪ್ರೇಕ್ಷಕರ ಗ್ಯಾಲರಿಯಿಂದ ಲೋಕಸಭೆ ಸಭಾಂಗಣಕ್ಕೆ ಜಿಗಿದ ಯುವಕರು ನಿರಂತರವಾಗಿ ಘೋಷಣೆ ಕೂಗುತ್ತಲೇ ಇದ್ದರು. ಆದರೆ ಘಟನೆಯಿಂದ ನನಗೂ ಶಾಕ್‌ ಆಗಿತ್ತು. ಅಲ್ಲದೆ, ಅವರನ್ನು ಹಿಡಿಯಲು ಮುಂದಾಗಿದ್ದೆ. ಆದರೆ, ಅವರು ಏನು ಕೂಗುತ್ತಿದ್ದಾರೆ ಎಂದು ತಿಳಿಯಲಿಲ್ಲ. ಕೊನೆಗೆ ಸರ್ವಾಧಿಕಾರಿ ಎಂಬ ಒಂದು ಪದ ಮಾತ್ರ ನನಗೆ ಕೇಳಿಸಿತು’ ಎಂದು ಮುನಿಸ್ವಾಮಿ ಹೇಳಿದರು.ಭದ್ರತಾ ಲೋಪ, ತನಿಖೆ ನಡೆಯಬೇಕು:ಯುವಕರು ತಮ್ಮ ಶೂನಲ್ಲಿಟ್ಟಿದ್ದ ಸ್ಮೋಕ್‌ ಬಾಂಬ್‌ಗೆ ಹಲವು ಸುತ್ತು ಪೇಪರ್‌ ಸುತ್ತಿದ್ದರು. ಅದು ಪಟಾಕಿ ರೀತಿಯಲ್ಲಿತ್ತು ಹಾಗೂ ಅದನ್ನು ಓಪನ್‌ ಮಾಡಿದಾಗಲೂ ಪಟಾಕಿ ಸಿಡಿದಾಗ ಬರುವ ವಾಸನೆಯಂತಿತ್ತು. ಆದರೆ, ಅವರನ್ನು ಸಂಸತ್‌ ಭವನ ಪ್ರವೇಶಿಸುವಾಗಲೇ ಸರಿಯಾಗಿ ಪರೀಕ್ಷಿಸಿದ್ದರೆ ಈ ರೀತಿಯ ದುರ್ಘಟನೆ ಆಗುತ್ತಿರಲಿಲ್ಲ. ಇದು ಸಂಪೂರ್ಣ ಭದ್ರತಾ ವೈಫಲ್ಯವಾಗಿದ್ದು, ಸಂಪೂರ್ಣ ತನಿಖೆ ನಡೆಯಬೇಕು. ಹೀಗೆ ಸಂಸತ್‌ ಭವನದಲ್ಲಿ ಸ್ಮೋಕ್‌ ಬಾಂಬ್‌ ಹಾಕುತ್ತಾರೆ ಎಂದಾದರೆ, ಅವರಿಗೆ ತರಬೇತಿ ದೊರೆತಿರುತ್ತದೆ ಹಾಗೂ ಅವರು ಯಾವುದಾದರೂ ಉಗ್ರಗಾಮಿ ಸಂಘಟನೆಯವರಿರಬಹುದು ಎಂದು ಮುನಿಸ್ವಾಮಿ ಅನುಮಾನ ವ್ಯಕ್ತಪಡಿಸಿದ್ದಾರೆ.ಪಾಸ್‌ ನೀಡುವುದು ದೊಡ್ಡ ವಿಷಯವಲ್ಲಯಾರೇ ಸಂಸದರಾದರೂ ತಮ್ಮ ಕ್ಷೇತ್ರ ವ್ಯಾಪ್ತಿಯವರು, ಪರಿಚಯದವರಿಗೆ ಪಾಸ್‌ ನೀಡುತ್ತಾರೆ. ಹಾಗೆಯೇ, ಸಂಸದ ಪ್ರತಾಪ್‌ ಸಿಂಹ ಅವರ ಆಪ್ತ ಸಹಾಯಕರು ಸಂಸತ್‌ ಭವನ ವೀಕ್ಷಿಸಬೇಕೆಂದು ಮನವಿ ಮಾಡಿದ್ದ ಮೈಸೂರು ಮೂಲದ ಯುವಕನಿಗೆ ಪಾಸ್‌ ನೀಡಿದ್ದಾರೆ. ನಾವ್ಯಾರೂ ಪಾಸ್‌ ನೀಡುವಾಗ ಪೊಲೀಸ್‌ ರೀತಿ ತನಿಖೆ ಮಾಡುವುದಿಲ್ಲ. ಇನ್ನು ಮುಂದೆ ತನಿಖೆಗೊಳಪಡಿಸಿಯೇ ಪಾಸ್‌ ನೀಡಬೇಕಾದ ಪರಿಸ್ಥಿತಿ ಬಂದೊದಗಿದೆ ಎಂದು ಮುನಿಸ್ವಾಮಿ ಹೇಳಿದ್ದಾರೆ.

Share this article