ವಿಕ್ರಂ ಗೌಡ ಎನ್‌ಕೌಂಟರ್‌ ಬೆನ್ನಲ್ಲೇ ರಾಜ್ಯದ ಇಡೀ ನಕ್ಸಲ್‌ ಗ್ಯಾಂಗೇ ಶರಣಾಗತಿಗೆ ಸಿದ್ಧತೆ : ಹಿಂಬಾಗಿಲ ಚರ್ಚೆ

KannadaprabhaNewsNetwork |  
Published : Jan 06, 2025, 01:00 AM ISTUpdated : Jan 06, 2025, 07:12 AM IST
ನಕ್ಸಲ್‌ ಲತಾ | Kannada Prabha

ಸಾರಾಂಶ

ನಕ್ಸಲ್‌ ನಾಯಕ ವಿಕ್ರಂ ಗೌಡ ಎನ್‌ಕೌಂಟರ್‌ ಬೆನ್ನಲ್ಲೇ ಭೂಗತರಾಗಿದ್ದ 6 ಮಂದಿ ನಕ್ಸಲೀಯರು ಸಮಾಜದ ಮುಖ್ಯವಾಹಿನಿಗೆ ಬರಲು ನಿರ್ಧರಿಸಿದ್ದು, ಈ ವಾರದ ಕೊನೆಯಲ್ಲಿ ಚಿಕ್ಕಮಗಳೂರಿನ ಜಿಲ್ಲಾಡಳಿತ ಮುಂದೆ ಶರಣಾಗತಿಯಾಗಲು ಮುಂದಾಗಿದ್ದಾರೆ.

 ಚಿಕ್ಕಮಗಳೂರು: ನಕ್ಸಲ್‌ ನಾಯಕ ವಿಕ್ರಂ ಗೌಡ ಎನ್‌ಕೌಂಟರ್‌ ಬೆನ್ನಲ್ಲೇ ಭೂಗತರಾಗಿದ್ದ 6 ಮಂದಿ ನಕ್ಸಲೀಯರು ಸಮಾಜದ ಮುಖ್ಯವಾಹಿನಿಗೆ ಬರಲು ನಿರ್ಧರಿಸಿದ್ದು, ಈ ವಾರದ ಕೊನೆಯಲ್ಲಿ ಚಿಕ್ಕಮಗಳೂರಿನ ಜಿಲ್ಲಾಡಳಿತ ಮುಂದೆ ಶರಣಾಗತಿಯಾಗಲು ಮುಂದಾಗಿದ್ದಾರೆ.

ಮುಂಡಗಾರು ಲತಾ, ಸುಂದರಿ ಕುಲ್ಲೂರು, ವನಜಾಕ್ಷಿ ಬಾಳೆಹೊಳೆ, ಆಂಧ್ರಪ್ರದೇಶ ಮೂಲದ ಮಾರೆಪ್ಪ ಅರೋಲಿ, ಕೆ.ವಸಂತ, ದಕ್ಷಿಣ ಭಾರತದ ಮೋಸ್ಟ್ ವಾಂಟೆಡ್ ನಕ್ಸಲ್ ಜೀಶ ಶರಣಾಗಲು ಸಜ್ಜಾಗಿದ್ದು, ದಿನಾಂಕ ನಿಗದಿ ಬಾಕಿ ಇದೆ.

ಅಧ್ಯಾಯ ಕೊನೆ:

ಮಲೆನಾಡಿನ ಸಮಸ್ಯೆಗಳು ಹಾಗೂ ಆದಿವಾಸಿ ಜನರ ರಕ್ಷಣೆಗೆ ಬಂದೂಕು ಹಿಡಿದು ಹೋರಾಡುತ್ತಾ ಭೂಗತರಾಗಿದ್ದ ನಕ್ಸಲೀಯರಲ್ಲಿ ಹಲವು ಮಂದಿ ಎನ್‌ಕೌಂಟರ್‌ಗೆ ಬಲಿಯಾಗಿದ್ದು, ಕೆಲವರು ಶರಣಾಗಿದ್ದಾರೆ. ಇದೀಗ ಬಾಕಿ ಉಳಿದಿರುವ 6 ಮಂದಿ ಮುಖ್ಯವಾಹಿನಿಗೆ ಬಂದರೆ ಮಲೆನಾಡು ಮತ್ತು ಕರಾವಳಿಯಲ್ಲಿ ನಕ್ಸಲೀಯರ ಅಧ್ಯಾಯ ಕೊನೆಯಾಗಲಿದೆ.

ಹಿಂಬಾಗಿಲ ಮಾತುಕತೆ:

ನಕ್ಸಲೀಯರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಉದ್ದೇಶದಿಂದ ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯರನ್ನು ಕಳೆದ 3 ತಿಂಗಳಿಂದ ಸಂಪರ್ಕಿಸಿದ್ದು, ಸಿಎಂ ಸಿದ್ದರಾಮಯ್ಯ ಹಾಗೂ ಹಿರಿಯ ಪೊಲೀಸ್‌ ಅಧಿಕಾರಿಗಳ ಜತೆಗೆ ಹಲವು ಹಂತಗಳಲ್ಲಿ ಮಾತುಕತೆ ನಡೆಸಲಾಗಿದೆ. ಯಾವಾಗ ಎಲ್ಲಿ ಶರಣಾಗಬೇಕೆಂಬ ಚರ್ಚೆಗೂ ಉತ್ತರ ಸಿಕ್ಕಿದ್ದು, ಈ ನಕ್ಸಲೀಯರಿಗೆ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಿದೆ. ಆದರೆ, ತಮ್ಮ ಮೇಲಿರುವ ಪ್ರಕರಣಗಳನ್ನು ಕೈಬಿಡಬೇಕೆಂದು ನಕ್ಸಲೀಯರು ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದಾರೆ. ಇದಕ್ಕೆ ಸರ್ಕಾರ ಒಪ್ಪಿಲ್ಲ. ಆದರೆ, ಮುಖ್ಯವಾಹಿನಿಗೆ ಬಂದ ಬಳಿಕ ಬೇಗನೆ ಜಾಮೀನಿಗೆ ಸಹಕರಿಸಲು ಹಾಗೂ ಕಾನೂನು ಸೇವಾ ಪ್ರಾಧಿಕಾರದಿಂದ ನೆರವು ಕೊಡಿಸಲು ಸರ್ಕಾರ ಭರವಸೆ ನೀಡಿದೆ ಎನ್ನಲಾಗುತ್ತಿದೆ.

ಶರಣಾಗತಿಗೆ ನಕ್ಸಲರ ಬೇಡಿಕೆಗಳು

ಭೂರಹಿತ ಕುಟುಂಬಕ್ಕೆ 5 ಎಕರೆ ಕೃಷಿ ಭೂಮಿ ನೀಡಬೇಕು.

ಆದಿವಾಸಿ ಕುಟುಂಬಗಳಿಗೆ ಭೂಮಿ, ವಸತಿ ಕಲ್ಪಿಸಬೇಕು.

ಕೃಷಿ ಯೋಗ್ಯ ಪಾಳು ಭೂಮಿಯನ್ನು ಭೂ ರಹಿತರಿಗೆ ಹಂಚಬೇಕು.

ಕಸ್ತೂರಿ ರಂಗನ್ ವರದಿ ರದ್ದುಪಡಿಸಬೇಕು.

ಹೈಟೆಕ್ ಟೂರಿಸಂ ನಿಲ್ಲಿಸಬೇಕು.

ರೈತರ ಒತ್ತುವರಿ ತೆರವು ಕೂಡಲೇ ನಿಲ್ಲಿಸಬೇಕು.

ನಕ್ಸಲ್‌ ಶರಣಾಗತಿಗೆ 3 ವಿಭಾಗದ ಪ್ಯಾಕೇಜ್‌

ರಾಜ್ಯದಲ್ಲಿ ಶರಣಾಗತಿ ಆಗಲಿರುವ ನಕ್ಸಲೀಯರಿಗಾಗಿ ರಾಜ್ಯ ಸರ್ಕಾರ ನೂತನ ಪ್ಯಾಕೇಜ್‌ ಜಾರಿಗೆ ತಂದಿದ್ದು, ಎ, ಬಿ, ಸಿ ಎಂದು 3 ವಿಭಾಗಗಳಾಗಿ ವಿಂಗಡಿಸಲಾಗಿದೆ. ಶರಣಾಗುವವರು ಯಾವುದಾದರೂ ಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ಇಚ್ಚಿಸಿದರೆ ಅವರಿಗೆ ತರಬೇತಿ ನೀಡಲಾಗುವುದು. ತರಬೇತಿ ಸಂಸ್ಥೆಗೆ ಒಂದು ವರ್ಷದವರೆಗೆ ಪ್ರತಿಯೊಬ್ಬರಿಗೆ ₹5 ಸಾವಿರ ನೀಡಲಾಗುವುದು.

ಎ ವರ್ಗ:

ಕರ್ನಾಟಕದಲ್ಲಿ ಜನಿಸಿದ್ದು, ಪ್ರಸಕ್ತ ಭೂಗತರಾಗಿದ್ದರೆ, ಶಸ್ತ್ರ ಸಜ್ಜಿತರಾಗಿದ್ದು, ಯಾವುದಾದರೂ ನಕ್ಸಲ್‌ ಗುಂಪಿನ ಸದಸ್ಯರಾಗಿದ್ದು ಒಂದಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದರೆ ಅವರಿಗೆ ₹7.50 ಲಕ್ಷ ಪ್ಯಾಕೇಜ್‌ 3 ಹಂತದಲ್ಲಿ ನೀಡಲಾಗುವುದು.

ಬಿ ವರ್ಗ:

ಹೊರ ರಾಜ್ಯದವರು ಪ್ರಸಕ್ತ ಕರ್ನಾಟಕ ರಾಜ್ಯದಲ್ಲಿದ್ದು, ಅವರ ಬಳಿ ಶಸ್ತ್ರಾಸ್ತ್ರಗಳಿದ್ದರೆ, ಒಂದಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದರೆ ಅಂತಹವರಿಗೆ 3 ಹಂತದಲ್ಲಿ ₹4 ಲಕ್ಷ ನೀಡಲಾಗುವುದು.

ಸಿ ವರ್ಗ:

ಎಡ ಪಂಥೀಯ ಭಯೋತ್ಪಾದನೆ ಬೆಂಬಲಿಸುವವರ ಮೇಲೆ ಪ್ರಕರಣ ಇದ್ದರೆ ಅಂತಹವರಿಗೆ 3 ಹಂತದಲ್ಲಿ ₹2 ಲಕ್ಷ ಪ್ಯಾಕೇಜ್‌ ನೀಡಲಾಗುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!