- ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಜಿಪಂ ಸಿಇಒ ಸುರೇಶ ಇಟ್ನಾಳ್ ಶ್ಲಾಘನೆ । ಗಣ್ಯರಿಂದ ಸ್ಮಾರಕಕ್ಕೆ ಪುಷ್ಪಗುಚ್ಛ ಅರ್ಪಣೆ
- - - ಕನ್ನಡಪ್ರಭ ವಾರ್ತೆ ದಾವಣಗೆರೆಕಾನೂನು, ಸುವ್ಯವಸ್ಥೆ ಎಲ್ಲಿ ಉತ್ತಮವಾಗಿ ಇರುತ್ತದೋ ಅಂತಹ ಕಡೆ ಜನರ ಜೀವನಮಟ್ಟ ಸುಧಾರಿಸುವ ಜೊತೆಗೆ ವ್ಯಾಪಾರ, ವಹಿವಾಟು, ಉದ್ಯೋಗಗಳೂ ಸೃಷ್ಟಿಯಾಗುತ್ತವೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ ಬಿ. ಇಟ್ನಾಳ್ ಹೇಳಿದರು.
ನಗರದ ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿ ಸೋಮವಾರ ಜಿಲ್ಲಾ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ಪೊಲೀಸ್ ಹುತಾತ್ಮ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಇಡೀ ದೇಶದಲ್ಲೇ ಕರ್ನಾಟಕ ಪೊಲೀಸ್ ಇಲಾಖೆ ಉತ್ತಮ ಕೆಲಸ ಮಾಡಿದೆ ಎಂದರು.ದೇಶಾದ್ಯಂತ ಕರ್ನಾಟಕ ಪೊಲೀಸ್ ಇಲಾಖೆ ಸಾಧನೆಗಳ ಮೂಲಕ ಒಳ್ಳೆಯ ಹೆಸರು ಮಾಡಿದೆ. ಕಾನೂನು, ಸುವ್ಯವಸ್ಥೆ ಕಾಪಾಡುವಲ್ಲಿ, ಸಾರ್ವಜನಿಕರ ಆಸ್ತಿಗಳ ರಕ್ಷಣೆ, ಅಪರಾಧಗಳ ತಡೆ, ಆರೋಪಿಗಳ ಪತ್ತೆ ಹಚ್ಚುವುದು ಹೀಗೆ ಎಲ್ಲದರಲ್ಲೂ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ. ಆ ಮೂಲಕ ಕರ್ನಾಟಕ ಪೊಲೀಸ್ ಇಲಾಖೆ ತನ್ನ ಹಿರಿಮೆ, ಗರಿಮೆ ಹೆಚ್ಚಿಸಿಕೊಂಡಿದೆ ಎಂದು ಅವರು ಹೇಳಿದರು.
ವರ್ಷದ 365 ದಿನಗಳೂ ಕಾರ್ಯನಿರ್ವಹಿಸುವ ಇಲಾಖೆಗಳ ಪೈಕಿ ಪೊಲೀಸ್ ಇಲಾಖೆಯೂ ಒಂದಾಗಿದೆ. ಪೊಲೀಸ್ ಅಧಿಕಾರಿ, ಸಿಬ್ಬಂದಿ ತಮ್ಮ ಕುಟುಂಬಕ್ಕೂ ಸಮಯ ಕೊಡದೇ ಹಗಲಿರುಳು ಕೆಲಸ ಮಾಡುವಂತಹ ಇಲಾಖೆಯಾಗಿದೆ. ಪೊಲೀಸ್ ಇಲಾಖೆ ಅಧಿಕಾರಿಗಳು-ಸಿಬ್ಬಂದಿ ಸಮಾಜದಲ್ಲಿ ನಿರಂತರ ಶಾಂತಿ ಸ್ಥಾಪನೆ, ಕಾನೂನು ಸುವ್ಯವಸ್ಥೆ ರಕ್ಷಣೆಗಾಗಿ ಶ್ರಮಿಸುತ್ತಿದೆ. ಆದ್ದರಿಂದಲೇ ನಾವೆಲ್ಲರೂ ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದೇವೆ ಎಂದು ತಿಳಿಸಿದರು.ದಕ್ಷತೆ, ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತ, ಸಮಾಜದ ಭದ್ರತೆ, ಸುರಕ್ಷತೆಗಾಗಿ ಪ್ರಾಣವನ್ನೇ ಮುಡುಪಾಗಿಟ್ಟ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಯ ತ್ಯಾಗ, ಬಲಿದಾನವನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಜಿಲ್ಲಾ ಪೊಲೀಸ್ ಇಲಾಖೆಯು ಎಲ್ಲ ಅಭಿವೃದ್ಧಿ ಕೆಲಸಗಳಿಗೆ ಸಂಪೂರ್ಣ ಸಹಕಾರ ನೀಡುತ್ತಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ವೇಳೆ, ಚುನಾವಣೆ ಸೇರಿದಂತೆ ಇತರೆ ಸಂದರ್ಭದಲ್ಲಿ ಜಿಲ್ಲಾಡಳಿತದೊಂದಿಗೆ ನಿಲ್ಲುತ್ತಿದೆ ಎಂದು ಪೊಲೀಸರ ಸೇವೆಗಳನ್ನು ಸ್ಮರಿಸಿದರು.
ಯುವಜನರಷ್ಟೇ ಅಲ್ಲ, ಇಡೀ ಮನುಕುಲಕ್ಕೆ ಶಾಪವಾಗಿ ಕಾಡುತ್ತಿರುವ ಮಾದಕ ವಸ್ತುಗಳ ತಡೆಗೆ ಪೊಲೀಸ್ ಇಲಾಖೆ ಶ್ರಮಿಸುತ್ತಿವೆ. ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಕಾನೂನು, ಸುವ್ಯವಸ್ಥೆ, ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಾರೆ. ಅಂತಹ ಸಂದರ್ಭದಲ್ಲಿ ಸಾರ್ವಜನಿಕರು ಸಹ ತಮ್ಮ ಜವಾಬ್ದಾರಿ ಅರಿತು, ಪೊಲೀಸ್ ಇಲಾಖೆ ಜೊತೆಗೆ ಸಹಕರಿಸಬೇಕು. ಜನರೂ ಕೈ ಜೋಡಿಸಿದರೆ ಕಾನೂನು, ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಗೆ ಸಹಾಯವಾಗುತ್ತದೆ ಎಂದು ಹೇಳಿದರು.ಪೂರ್ವ ವಲಯದ ಪೊಲೀಸ್ ಮಹಾನಿರೀಕ್ಷಕ ಬಿ.ರಮೇಶ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಕ್ಷೇತ್ರದ ಗಣ್ಯರು ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಛ ಅರ್ಪಿಸುವ ಮೂಲಕ ಗೌರವ ಸಲ್ಲಿಸಿದರು. ಹುತಾತ್ಮ ಪೊಲೀಸರಿಗೆ ನುಡಿನಮನ ಸಲ್ಲಿಸಲಾಯಿತು. ಮೂರು ಸುತ್ತು ಗುಂಡು ಹಾರಿಸಿ, ಗೌರವ ಸಮರ್ಪಿಸಲಾಯಿತು.
ಎಎಸ್‌ಪಿಗಳಾದ ವಿಜಯಕುಮಾರ ಎಂ. ಸಂತೋಷ, ಜಿ.ಮಂಜುನಾಥ, ಡಿವೈಎಸ್‌ಪಿಗಳಾದ ಪಿ.ಬಿ.ಪ್ರಕಾಶ, ಮಲ್ಲೇಶ ದೊಡ್ಮನಿ, ಬಿ.ಎಸ್. ಬಸವರಾಜ ಸೇರಿದಂತೆ ಅಧಿಕಾರಿ, ಸಿಬ್ಬಂದಿ, ಪೊಲೀಸ್ ಕುಟುಂಬ ವರ್ಗದವರು ಇದ್ದರು.- - - ಬಾಕ್ಸ್ * ಪ್ರಸಕ್ತ ವರ್ಷ 216 ಪೊಲೀಸರು ಹುತಾತ್ಮ: ಎಸ್‌ಪಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಮಾತನಾಡಿ, ಪ್ರಸಕ್ತ ವರ್ಷ ಕರ್ತವ್ಯದ ವೇಳೆ ಕರ್ನಾಟಕದ ಪ್ರಭಾಕರ, ಜಗದೀಶ, ಸಂಜೀವಕುಮಾರ, ಜಿ.ವಿ.ಮಹೇಶ, ವಿಠಲ್ ವೈ.ಗಡಾದರ್ ಸೇರಿದಂತೆ ದೇಶಾದ್ಯಂತ 216 ಪೊಲೀಸರು ಹುತಾತ್ಮರಾಗಿದ್ದಾರೆ. ಕಾನೂನು, ಸುವ್ಯವಸ್ಥೆ ಕಾಪಾಡಲು ಹಗಲಿರುಳು ಪೊಲೀಸ್ ಇಲಾಖೆ ಸಿಬ್ಬಂದಿ ಶ್ರಮಿಸುತ್ತಾರೆ. ಹೀಗೆ ಸೇವೆ ಸಲ್ಲಿಸುವ ವೇಳೆ ಹುತಾತ್ಮರನ್ನು ಸ್ಮರಿಸಲು ಪ್ರತಿ ವರ್ಷ ಇಲಾಖೆಯಿಂದ ಹುತಾತ್ಮರ ದಿನ ಆಚರಿಸಲಾಗುತ್ತದೆ ಎಂದರು.
- - - -21ಕೆಡಿವಿಜಿ: ದಾವಣಗೆರೆ ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ಹುತಾತ್ಮರ ದಿನಾಚರಣೆಯಲ್ಲಿ ಜಿಪಂ ಸಿಇಒ ಸುರೇಶ ಬಿ. ಇಟ್ನಾಳ್, ಪೂರ್ವ ವಲಯ ಐಜಿಪಿ ಬಿ.ರಮೇಶ, ಎಸ್‌ಪಿ ಉಮಾ ಪ್ರಶಾಂತ ಭಾಗವಹಿಸಿದ್ದರು.