ಕನ್ನಡಪ್ರಭವಾರ್ತೆ ಚಿಕ್ಕಮಗಳೂರುಪೊಲೀಸ್ ಸರ್ಕಾರದ ಒಂದು ಮುಖ, ಪೊಲೀಸರು ಚೆನ್ನಾಗಿದ್ದರೆ, ರಾಜ್ಯದ ಸುರಕ್ಷತೆ, ಕಾನೂನು ವ್ಯವಸ್ಥೆ ಚೆನ್ನಾಗಿದ್ದರೆ, ಆ ರಾಜ್ಯ ಅಭಿವೃದ್ಧಿ ದಾರಿಯಲ್ಲಿ ಸಾಗುತ್ತಿದೆ ಎಂದರ್ಥ. ಇಡೀ ದೇಶಕ್ಕೆ ಕರ್ನಾಟಕ ಪೊಲೀಸ್ ಮಾದರಿ ಎಂದು ರಾಜ್ಯದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.
ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡಿರುವ ಮನೆಗಳಲ್ಲಿ ಪೊಲೀಸರು ವಾಸವಾಗುತ್ತಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಪೊಲೀಸ್ ಗೃಹ ಕಾರ್ಯಕ್ರಮ ಜಾರಿಗೆ ತರಲಾಗಿತ್ತು. ಅದರಡಿಯಲ್ಲಿ ಸುಮಾರು 47 ಸಾವಿರ ಮನೆ ಈಗಾಗಲೇ ರಾಜ್ಯದಲ್ಲಿ ನಿರ್ಮಾಣ ಮಾಡಲಾಗಿದೆ. ಈ ಯೋಜನೆ ನಿರಂತರವಾಗಿ ಜಾರಿಯಲ್ಲಿರುತ್ತದೆ. ಎಲ್ಲಾ ಪೊಲೀಸರಿಗೆ ಮನೆಗಳನ್ನು ನೀಡುವುದು ಇದರ ಉದ್ದೇಶವಾಗಿದೆ ಎಂದು ಹೇಳಿದರು.
ಈ ಯೋಜನೆಯಡಿ ಸವಲತ್ತು ಪಡೆದಿರುವ ಪೊಲೀಸರ ಸಂಖ್ಯೆ ಶೇ. 45 ರಷ್ಟಿದೆ. ಇದು, ಶೇ. 100 ಕ್ಕೆ ಬರಬೇಕು. ಹಾಗಾಗಿ ಕೇಳಿದ ತಕ್ಷಣ ಸಿಎಂ ಸಿದ್ದರಾಮಯ್ಯ ಅವರು 3 ಸಾವಿರ ಕೋಟಿ ರುಪಾಯಿ ಕೊಟ್ಟಿದ್ದರು. ಈಗಲೂ ಕೂಡ ಪೊಲೀಸ್ ಗೃಹ ನಿರ್ಮಾಣ ಕ್ಕೆ ಇನ್ನು 2 ಸಾವಿರ ಕೋಟಿ ಕೊಡುವುದಾಗಿ ಸಿಎಂ ಹೇಳಿದ್ದಾರೆ. ಇತ್ತೀಚೆಗೆ 400 ಕೋಟಿ ರು. ಬಿಡುಗಡೆಯಾಗಿದೆ ಎಂದು ಹೇಳಿದರು.ಪೊಲೀಸ್ ವಸತಿ ಯೋಜನೆ ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗಬಾರದು. ಅದು, ಗ್ರಾಮಾಂತರ ಪ್ರದೇಶಕ್ಕೆ ವಿಸ್ತರಿಸಬೇಕು ಎಂಬುದು ನಮ್ಮ ಅಭಿಲಾಷೆಯಾಗಿದೆ. ಹಾಗಾಗಿ ಮೊದಲ ಆದ್ಯತೆಯನ್ನು ಗ್ರಾಮೀಣ ಪ್ರದೇಶಕ್ಕೆ ನೀಡಲಾಗುವುದು ಎಂದರು.
ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಹೆಚ್ಚಾಗುತ್ತಿದೆ. ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಗೊತ್ತಾಗದ ಹಾಗೆ ದೋಚುತ್ತಿದ್ದಾರೆ. ಇದನ್ನು ತಡೆಯುವ ಉದ್ದೇಶದಿಂದ ರಾಜ್ಯದ 40 ಠಾಣೆಗಳಲ್ಲಿ ಸೈಬರ್ ಕ್ರೈಂ ವಿಭಾಗಗಳನ್ನು ತೆರೆಯಲಾಗಿದೆ ಎಂದ ಅವರು, ಇತ್ತೀಚಿನ ವರ್ಷಗಳಲ್ಲಿ ಪೊಲೀಸ್ ಕೆಲಸಕ್ಕೆ ಸ್ನಾತಕೋತ್ತರ ಪದವಿದಾರರು ಹಾಗೂ ಎಂಜಿನಿಯರ್‌ಗಳು ಬರುತ್ತಿದ್ದಾರೆ. ಅವರ ಜ್ಞಾನವನ್ನು ಇಲಾಖೆ ಬಳಸಿಕೊಳ್ಳುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕರುಗಳಾದ ಟಿ.ಡಿ. ರಾಜೇಗೌಡ, ನಯನಾ ಮೋಟಮ್ಮ, ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿಪಿ ಆರ್. ಹಿತೇಂದ್ರ, ಪಶ್ಚಿಮ ವಲಯದ ಐಜಿಪಿ ಡಾ. ಚಂದ್ರಗುಪ್ತ, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮದ ಮುಖ್ಯ ಅಭಿಯಂತರರಾದ ಜಿ.ಎಚ್. ಮಂಜುನಾಥ್ ಉಪಸ್ಥಿತರಿದ್ದರು.
-------------ಬಾಕ್ಸ -------------
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪೊಲೀಸರಿಗೆ ಅಗತ್ಯ ಸವಲತ್ತು ನೀಡುವ ಉದ್ದೇಶದಿಂದ ಔರದ್‌ಕರ್ ವರದಿಯನ್ನು ಯಥಾವತ್ತಾಗಿ ಜಾರಿಗೆ ತರಬೇಕು. ಇದರ ಜತೆಗೆ ಗೆಜೆಟೆಡ್ ಲಿವ್ ಪದ್ಧತಿಯನ್ನು ಜಾರಿಗೊಳಿಸಬೇಕು ಎಂದು ಸಚಿವರಿಗೆ ಮನವಿ ಮಾಡಿದರು.
19 ಕೆಸಿಕೆಎಂ 1