ಬಳ್ಳಾರಿ: ಗಡಿನಾಡು ಬಳ್ಳಾರಿಯಲ್ಲಿ ಕನ್ನಡ ಭಾಷೆಯ ಬಳಕೆ ಹೆಚ್ಚು ಅಗತ್ಯತೆಯಿದ್ದು, ಪ್ರತಿಯೊಬ್ಬರು ಮಾತೃಭಾಷಾ ಪ್ರೇಮ ಮೈಗೂಡಿಸಿಕೊಳ್ಳುವಂತಾಗಬೇಕು ಎಂದು ಪಾಲಿಕೆ ಸದಸ್ಯ ಗುಡಿಗಂಟಿ ಹನುಮಂತು ತಿಳಿಸಿದರು.
ಇಲ್ಲಿನ ಪಾರ್ವತಿನಗರದ ಎರಡನೇ ತಿರುವಿನಲ್ಲಿ ಸ್ಥಳೀಯರು ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.ಭಾಷೆ ಬಳಕೆಯಿಂದ ಮಾತ್ರ ಉಳಿಯಲು ಸಾಧ್ಯ ಎಂದು ಅನೇಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕನ್ನಡ ಉಳಿಸುವುದು ಎಂದರೆ ಬಳಸುವುದು ಎಂಬುದು ಎಂದರ್ಥವಾಗಿದೆ. ನಾವು ಯಾವುದೇ ಭಾಷೆಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡಿದರೂ ಅವರ ಜೊತೆಗಿನ ಸಂವಹನ ಭಾಷೆ ಕನ್ನಡವಾಗಿರಬೇಕು. ಇಂಗ್ಲೀಷ್ ಅಗತ್ಯಕ್ಕಿರುವಷ್ಟೇ ಬಳಸಿಕೊಳ್ಳಬೇಕು. ಮಕ್ಕಳಿಗೆ ಕನ್ನಡ ನಾಡಿನ ಹಿನ್ನಲೆ, ಪರಂಪರೆ, ಕನ್ನಡಕ್ಕಾಗಿ ಜೀವತೆತ್ತ ಮಹನೀಯರು, ಸಾಧಕರು, ಭಾಷಾ ಬೆಳವಣಿಗೆ ಶ್ರಮಿಸಿದವರ ಕುರಿತು ತಿಳಿಸಿಕೊಡಬೇಕು. ಕರ್ನಾಟಕ ರಾಜ್ಯೋತ್ಸವದಂತಹ ಕಾರ್ಯಕ್ರಮಗಳಲ್ಲಿ ಮಕ್ಕಳನ್ನು ತೊಡಗಿಸಬೇಕು ಎಂದು ಹೇಳಿದರು.
ಪಾರ್ವತಿ ನಗರದ ನಿವಾಸಿಗಳು ಸ್ವಚ್ಛತೆಗೆ ಹೆಚ್ಚು ಗಮನ ಹರಿಸಬೇಕು. ಎಲ್ಲೆಂದರಲ್ಲಿ ಕಸ ಹಾಕದೆ ಮನೆಗೆ ಬರುವ ವಾಹನಕ್ಕೆ ತ್ಯಾಜ್ಯ ವಿಂಗಡಸಿ ನೀಡಬೇಕು. ಸ್ವಚ್ಛತೆ ಕಾಪಾಡಿಕೊಳ್ಳುವುದು ಪಾಲಿಕೆಯ ಜವಾಬ್ದಾರಿಯಷ್ಟೇ ಅಲ್ಲ; ಪ್ರತಿಯೊಬ್ಬರದ್ದೂ ಆಗಿದ್ದು ಹೆಚ್ಚು ಸುಸಂಸ್ಕೃತ ಜನರಿರುವ ಪಾರ್ವತಿ ನಗರದ ನಿವಾಸಿಗಳು ಬೇರೆ ಪ್ರದೇಶದ ಜನರಿಗೆ ಮಾದರಿಯಾಗಬೇಕು ಎಂದು ಹೇಳಿದರು.ಹಿರಿಯ ನಾಗರಿಕ ಹಾಗೂ ನಿವೃತ್ತ ಇಂಜಿನಿಯರ್ ಪ್ರಸಾದ ಮಾತನಾಡಿ, ಮೂರು ತಿಂಗಳಿಗೊಮ್ಮೆ ಪಾರ್ವತಿನಗರ ನಿವಾಸಿಗಳು ಶ್ರಮದಾನ ಕಾರ್ಯಕ್ರಮ ಮಾಡೋಣ. ಇದಕ್ಕೆ ಎಲ್ಲರೂ ಕೈ ಜೋಡಿಸಿ ಎಂದು ಮನವಿ ಮಾಡಿದರು. ಹಿರಿಯ ವಕೀಲರಾದ ಅಂಕಲಯ್ಯಸ್ವಾಮಿ, ಯುವ ಉದ್ಯಮಿ ಚಂದ್ರಶೇಖರಗೌಡ ಮಸೀದಿಪುರ, ಐಟಿಐ ಕಾಲೇಜಿನ ಪ್ರಾಧ್ಯಾಪಕ ಶಂಕರ್, ಲೆಕ್ಕ ಪರಿಶೋಧಕ ಸಿದ್ಧರಾಮೇಶ್ವರಗೌಡ ಕರೂರು ಅವರು ಮಾತನಾಡಿದರು. ಸ್ಥಳೀಯ ಪ್ರಮುಖರಾದ ಶ್ರೀಕಂಠಸ್ವಾಮಿ, ಲೆಕ್ಕ ಪರಿಶೋಧಕ ಬಿ.ಎರಿಸ್ವಾಮಿ, ಕಲ್ಲುಕಂಬ ಪ್ರತಾಪಗೌಡ, ನಾಗರಾಜ್, ಮಲ್ಲಿಕಾರ್ಜುನಗೌಡ ಸೇರಿದಂತೆ ಸ್ಥಳೀಯ ನಿವಾಸಿಗಳು ಭಾಗವಹಿಸಿದ್ದರು. ಇದೇ ವೇಳೆ ಪಾಲಿಕೆಯ ಪೌರ ಕಾರ್ಮಿಕರಿಗೆ ಸನ್ಮಾನಿಸಲಾಯಿತು.